ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ Sitrang Cyclone: ಬಂಗಾಳದಲ್ಲಿ ಮಳೆ, ದೀಪಾವಳಿಗೆ ಮಂಕು
ಇಂದು ಬಾಂಗ್ಲಾ ಕರಾವಳಿಗೆ ‘ಸಿತ್ರಾಂಗ್’ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ 110 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ನಿನ್ನೆಯೇ ಕೋಲ್ಕತಾ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಶುರುವಾಗಿದ್ದು, ದಕ್ಷಿಣ ಬಂಗಾಳದ ಹಲವು ಕಡೆ ಇಂದು ಭಾರಿ ಮಳೆ ಮುನ್ಸೂಚನೆ ಎದುರಾಗಿದೆ. ಈ ಹಿನ್ನೆಲೆ ಅಪಾಯ ವಲಯದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಕೋಲ್ಕತಾ: ‘ಸಿತ್ರಾಂಗ್ ಚಂಡಮಾರುತ’ದ (Sitrang Cyclone) ಪ್ರಭಾವದಿಂದ ಪಶ್ಚಿಮ ಬಂಗಾಳದಲ್ಲಿ (West Bengal) ಸೋಮವಾರದಿಂದಲೇ ಮಳೆ ಆರಂಭವಾಗಿದೆ. ಮಂಗಳವಾರ ಬಾಂಗ್ಲಾದೇಶ (Bangladesh) ಹಾಗೂ ತಿಂಕೋನಾ ದ್ವೀಪದ (Tin Kona Island) ಕಡಲ ತೀರಕ್ಕೆ ಇದು ಅಪ್ಪಳಿಸಿದೆ. ಹೀಗಾಗಿ ಸೋಮವಾರ ಕೋಲ್ಕತಾ (Kolkata) ಹಾಗೂ ಪಶ್ಚಿಮ ಬಂಗಾಳದ ದಕ್ಷಿಣ ಭಾಗದಲ್ಲಿ ಆರಂಭವಾಗಿರುವ ಮಳೆ ಮಂಗಳವಾರ ಇನ್ನಷ್ಟು ಬಿರುಸು ಪಡೆಯಲಿದ್ದು, ದೀಪಾವಳಿ (Diwali) ಸಂಭ್ರಮವನ್ನು ಕಿತ್ತುಕೊಳ್ಳುವ ಆತಂಕ ಹುಟ್ಟುಹಾಕಿದೆ.
ಚಂಡಮಾರುತವು ಈಗ ಸಾಗರ್ ದ್ವೀಪದ ದಕ್ಷಿಣದಿಂದ 430 ಕಿ.ಮೀ. ದೂರದಲ್ಲಿದೆ. ಇದು ಗಂಭೀರ ಚಂಡಮಾರುತವಾಗಿ (Cyclone) ಪರಿವರ್ತನಾ ಆಗಬಹುದು. ಗಂಟೆಗೆ 90ರಿಂದ 110 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದೆ. ದಕ್ಷಿಣ 24 ಪರಗಣ, ಉತ್ತರ 24 ಪರಗಣ ಹಾಗೂ ಪೂರ್ವ ಮಿಡ್ನಾಪುರದ ಮೇಲೆ ಪ್ರಭಾವ ಬೀರಲಿದೆ ಹಾಗೂ ಮಂಗಳವಾರ ಇಲ್ಲಿ ಭಾರಿ ಮಳೆ ಬೀಳಲಿದೆ. ಸುಂದರಬನದ ಮೇಲೂ ಪರಿಣಾಮ ಬೀರಲಿದೆ. ಸಮುದ್ರ ತೀರದ ಭಾರಿ ಅಲೆಗಳು ತೀರದ ಮನೆಗಳಿಗೆ ಹಾನಿ ಉಂಟು ಮಾಡಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದನ್ನು ಓದಿ: ಗ್ರಹಣ ತ್ರಿಬಲ್ ಕಂಟಕ: ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!
ಇದೇ ವೇಳೆ, ಹೌರಾ, ಹೂಗ್ಲಿ ಹಾಗೂ ಕೋಲ್ಕತಾದಲ್ಲಿ ಸೋಮವಾರವೇ ಮಳೆ ಆರಂಭವಾಗಿದೆ. ಇದರಿಂದ ದೀಪಾವಳಿ ಹಾಗೂ ಕಾಳಿಪೂಜೆ ಮೇಲೆ ಪರಿಣಾಮ ಬೀರುವ ಆತಂಕ ಸೃಷ್ಟಿಯಾಗಿದೆ.
ಮುಂಜಾಗ್ರತಾ ಕ್ರಮವಾಗಿ ಅಪಾಯ ವಲಯದಲ್ಲಿ ಇರುವ ಜನರನ್ನು ಮನೆಗಳಿಂದ ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.
ಇದನ್ನೂ ಓದಿ: ಇಯಾನ್ ಚಂಡಮಾರುತಕ್ಕೆ ಫ್ಲೋರಿಡಾ ತತ್ತರ: 25 ಲಕ್ಷ ಮನೆಗಳಿಗೆ ವಿದ್ಯುತ್ ಕಟ್