ಬಾಂಗ್ಲಾದೇಶಕ್ಕೆ ಒಂದು ದಿನ ಮೊದಲೇ Sitrang Cyclone ದಾಳಿ: 35 ಬಲಿ; ಭಾರತಕ್ಕೆ ಅಪಾಯವಿಲ್ಲ
ಬಾಂಗ್ಲಾದೇಶಕ್ಕೆ ಒಂದು ದಿನ ಮೊದಲೇ ಚಂಡಮಾರುತ ದಾಳಿ ಮಾಡಿದ್ದು, ಈ ವೇಳೆ 35 ಜನರು ಬಲಿಯಾಗಿದ್ದಾರೆ. ಚಂಡಮಾರುತದಿಂದ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗಿದ್ದರೂ, ಅನಾಹುತಗಳಿಂದ ಪಾರಾಗಿದೆ. ಇನ್ನು, ಭಾರತದ ಉಳಿದ ಪ್ರದೇಶಗಳಿಗೂ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.
ಕೋಲ್ಕತಾ/ಢಾಕಾ: ಬಾಂಗ್ಲಾದೇಶ ಕರಾವಳಿಗೆ (Bangladesh Coast) ಮಂಗಳವಾರ ಅಪ್ಪಳಿಸಬೇಕಿದ್ದ ‘ಸಿತ್ರಾಂಗ್’ ಚಂಡಮಾರುತ (Sitrang Cyclone) ಒಂದು ದಿನ ಮೊದಲೇ ನೆರೆಯ ದೇಶಕ್ಕೆ ಲಗ್ಗೆ ಇಟ್ಟಿದೆ. ಚಂಡಮಾರುತದಿಂದ ಧಾರಾಕಾರ ಮಳೆ, ಪ್ರವಾಹ, ಮರಗಳು ನೆಲಕ್ಕುರುಳಿದ ಹಲವು ಘಟನೆಗಳು ವರದಿಯಾಗಿದ್ದು, ಈ ವೇಳೆ ಬಾಂಗ್ಲಾದ 35 ಜನರು ಬಲಿಯಾಗಿದ್ದಾರೆ. ಮತ್ತೊಂದೆಡೆ, ಪಶ್ಚಿಮ ಬಂಗಾಳದ (West Bengal) ಕರಾವಳಿ ಜಿಲ್ಲೆಗಳಲ್ಲಿ ಮತ್ತು ಅಸ್ಸಾಂನ (Assam) ಕೆಲ ಜಿಲ್ಲೆಗಳಲ್ಲಿ ವೇಗದ ಗಾಳಿ ಹಾಗೂ ಭಾರಿ ಪ್ರಮಾಣದ ಮಳೆ ಹೊರತುಪಡಿಸಿ ಯಾವುದೇ ಅನಾಹುತವಾಗಿಲ್ಲ. ಮಧ್ಯಾಹ್ನದ ನಂತರ ಭಾರತ (India) ಹಾಗೂ ಬಾಂಗ್ಲಾದೇಶ ಎರಡರಲ್ಲೂ ಈ ಚಂಡಮಾರುತ ಶಕ್ತಿ ಕಳೆದುಕೊಂಡಿದೆ.
‘ಸಿತ್ರಾಂಗ್’ ಎಂಬುದು ಚಂಡಮಾರುತಕ್ಕೆ ಥಾಯ್ಲೆಂಡ್ (Thailand) ನೀಡಿದ ಹೆಸರಾಗಿದ್ದು, ಇದರರ್ಥ ಎಲೆ. ಈ ಚಂಡಮಾರುತ ಮಂಗಳವಾರ ಬಾಂಗ್ಲಾದೇಶ ಕರಾವಳಿಗೆ ಅಪ್ಪಳಿಸಲಿದೆ, ಅದರ ಫಲವಾಗಿ ಬಂಗಾಳದ ಹಲವೆಡೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ ‘ಸಿತ್ರಾಂಗ್’ ಸೋಮವಾರ ರಾತ್ರಿ 9.30ರಿಂದ 11.30ರ ಅವಧಿಯಲ್ಲಿ ಬಾಂಗ್ಲಾದೇಶ ಕರಾವಳಿಯ ತಿಂಕೋನಾ ಹಾಗೂ ಬರಿಸಾಲ್ ಬಳಿಯ ಸಂದ್ವಿಪ್ ಬಳಿ ಪ್ರವೇಶಿಸಿತು. ಇದರ ಫಲವಾಗಿ ಮಂಗಳವಾರ ಮಧ್ಯಾಹ್ನದವರೆಗೂ ವ್ಯಾಪಕ ಮಳೆಯಾಯಿತು. ಚಂಡಮಾರುತದ ಮುನ್ನೆಚ್ಚರಿಕೆ ಕ್ರಮವಾಗಿ ಬಾಂಗ್ಲಾದೇಶ ಸರ್ಕಾರ ಅಪಾಯದಂಚಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಮೊದಲೇ ಸ್ಥಳಾಂತರಿಸಿತ್ತು.
ಇದನ್ನು ಓದಿ: ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ Sitrang Cyclone: ಬಂಗಾಳದಲ್ಲಿ ಮಳೆ, ದೀಪಾವಳಿಗೆ ಮಂಕು
ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಾದ ದಕ್ಷಿಣ 24 ಪರಗಣ, ಉತ್ತರ 24 ಪರಗಣ, ಪೂರ್ವ ಮೇದಿನಿಪುರದಲ್ಲಿ ಮಳೆ, ಗಾಳಿಯಿಂದ ಹಬ್ಬದ ಸಂಭ್ರಮ ಮಂಕಾಗುವಂತಾಯಿತು. ಸೋಮವಾರವಿಡೀ ಸುರಿದ ಮಳೆಯಿಂದಾಗಿ ಜನರು ಹೊರಬಾರದ ಕಾರಣ ಕೋಲ್ಕತಾದ ಬೀದಿಗಳು ನಿರ್ಜನವಾಗಿದ್ದವು. ಸಹಸ್ರಾರು ಜನರು ಸೇರುವ ಕಾಳಿ ಪೂಜಾ ಪೆಂಡಾಲ್‌ಗಳು ಖಾಲಿ ಹೊಡೆಯುವಂತಾಗಿತ್ತು.
ಇದನ್ನೂ ಓದಿ: ಗ್ರಹಣ ತ್ರಿಬಲ್ ಕಂಟಕ: ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!