ರಾಹುಲ್ ಗಾಂಧಿ, ವಿಪಕ್ಷಗಳು, ಸಿಜೆಪಿ ಎಸ್ಐಆರ್ ಪ್ರಕ್ರಿಯೆ ಅಕ್ರಮ ಕುರಿತು ಹೋರಾಟ ತೀವ್ರಗೊಳಿಸಿದೆ. ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿದೆ. ಇದರ ನಡುವೆ 42 ನಿವೃತ್ತ ನ್ಯಾಯಮೂರ್ತಿಗಳು ಬಹಿರಂಗ ಪತ್ರ ಬರೆದಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ನವದೆಹಲಿ (ಅ.08) ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ, ಮತದಾರರ ಹೆಸರು ಡಿಲೀಟ್ ಸೇರಿದಂತೆ ಇಡೀ ಎಸ್ಐಆರ್ ಪ್ರಕ್ರಿಯೆ ಕುರಿತು ಕೋಲಾಹಲ ಎದ್ದಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ದೆಹಲಿಯಲ್ಲಿ ಹೋರಾಟ ತೀವ್ರಗೊಳಿಸಿದೆ. ಬೆಂಗಳೂರಿನಲ್ಲಿ ಯೂಟ್ಯೂಬರ್ ಧ್ರುವ ರಾಠಿ, ಸಿಜೆಪಿ ಅಭಿಜಿತ್ ದೀಪ್ಕೆ ಸೇರಿದಂತೆ ಸಿಜೆಪಿ ಹೋರಾಟ ಆರಂಭಿಸಿದೆ. ಚುನಾವಣಾ ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 42 ನಿವೃತ್ತ ನ್ಯಾಯಮೂರ್ತಿಗಳು ಸಹಿ ಹಾಕಿ ಬಹಿರಂಗ ಪತ್ರ ಬರೆದಿದ್ದಾರೆ. ಚುನಾವಣಾ ಆಯೋಗ, ಆಯುಕ್ತ ಮೇಲಿನ ದಾಳಿ ಖಂಡಿಸಿದ್ದು ಮಾತ್ರವಲ್ಲ, ಗ್ಯಾನೇಶ್ ಕುಮಾರ್ ಬೆಂಬಲಿಸಿ ಪತ್ರ ಬರೆದಿದ್ದಾರೆ.
ಕಳ್ಳರು, ಕೈಬೊಂಬೆ ಎಂದು ಬಿಂಬಿಸಲಾಗುತ್ತಿದೆ
ಗ್ಯಾನೇಶ್ ಕುಮಾರ್ ಭಾರತದ ಚುನಾವಣಾ ಪ್ರಕ್ರಿಯೆ ರಕ್ಷಣೆ ಮಾಡಿದ್ದಾರೆ. ಆದರೆ ಪ್ರತಿಪಕ್ಷಗಳು ಚುನಾವಣಾ ಆಯೋಗದ ಮೇಲೆ ದಾಳಿ ಮಾಡುತ್ತಿದೆ. ಭಾರತದ ಸಾಂವಿಧಾನಿಕ ಸಂಸ್ಥೆಯ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ದಾಳಿ ಮಾಡುತ್ತಿದ್ದಾರೆ. ಪ್ರದಾಪ್ರುಭತ್ವದ ರಕ್ಷಣೆಗೆ ಚುನಾವಣಾ ಆಯೋಗ ನಿರಂತರ ಕೆಲಸ ಮಾಡುತ್ತಿದೆ. ಮತ ಕಳ್ಳತನಕ್ಕೆ ಯಾವುದೇ ಸೂಕ್ತ ಹಾಗೂ ಸ್ಪಷ್ಟ ದಾಖಲೆ ಇಲ್ಲದೆ ಆರೋಪ ಮಾಡಲಾಗುತ್ತಿದೆ. ಸುಖಾಸುಮ್ಮನೆ ಮಾಡುತ್ತಿರುವ ಆರೋಪಗಳಿಂದ ಸಾಂವಿಧಾನಿಕ ಸಂಸ್ಥೆ ಮೇಲೆ ಅಪನಂಬಿಕೆ ಬರುವಂತೆ ಮಾಡಲಾಗುತ್ತಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಕಳ್ಳರು, ಕೈಗೊಂಬೆ ಎಂದೆಲ್ಲಾ ಬಿಂಬಿಸಲಾಗುತ್ತಿದೆ. ಇದು ನಿಜಕ್ಕೂ ಆಘಾತ ನೀಡಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಆಯುಕ್ತರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು. ಸಂವಿಧಾನಿಕ ಹಕ್ಕು ಚಲಾಯಿಸುವುದು ತಪ್ಪಲ್ಲ. ಆದರೆ ಅಪನಂಬಿಕೆ ಬರುವಂತೆ, ಸಂಸ್ಥೆಯನ್ನು ಅಪಖ್ಯಾತಿಗೊಳಿಸುವುದು ತಪ್ಪು. ಯಾವ ಆಧಾರದಲ್ಲಿ ಈ ರೀತಿ ಆರೋಪ ಮಾಡಲಾಗುತ್ತಿದೆ. ಪ್ರತಿಪಕ್ಷಗಳು ಸೇರಿದಂತೆ ಕೆಲ ಪಾರ್ಟಿಗಳು ಮಾಡುತ್ತಿರುವ ಆರೋಪಗಳಿಗೆ ಇರುವ ಆಧಾರಗಳೇನು ಎಂದು ನಿವೃತ್ತ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗವನ್ನು ದುರ್ಬಲಗೊಳಿಸುವ ಪ್ರಯತ್ನ
ಪ್ರತಿಪಕ್ಷಗಳು ಮಾಡುತ್ತಿರುವ ಹೋರಾಟ ಚುನಾವಣಾ ಆಯೋಗವನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಇದು ಅತ್ಯಂತ ಅಪಾಯಕಾರಿ ಎಂದು 42 ನಿವೃತ್ತ ನ್ಯಾಯಮೂರ್ತಿಗಳು ತಮ್ಮ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ಚುನಾವಣೆಗಳನ್ನೇ ಅಕ್ರಮಗೊಳಿಸುವ ಪ್ರಯತ್ನಗಳನ್ನು ಪ್ರತಿಪಕ್ಷಗಳು ಮಾಡುತ್ತಿದೆ. ಸದ್ಯ ಸಾಂವಿಧಾನಿಕ ಸಂಸ್ಥೆ ಮೇಲೆ ಮಾಡುತ್ತಿರುವ ಸುಳ್ಳು ಆರೋಪಗಳು ಆತಂಕಕಾರಿಯಾಗಿದೆ. ಇದು ಪ್ರಜಾಪ್ರಭುತ್ವಕ್ಕೂ ಅಪಾಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಪ್ರಜಾಪ್ರಭುತ್ವ ಮೇಲೆ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಬರುವಂತೆ ಮಾಡಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿಅತೀ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡಲಿದೆ. ಸುಳ್ಳುಗಳನ್ನೇ ಸತ್ಯದಂತೆ ಬಿಂಬಿಸಲಾಗುತ್ತಿದೆ ಎಂದು 42 ನಿವೃತ್ತ ನ್ಯಾಯಮೂರ್ತಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಗ್ಯಾನೇಶ್ ಕುಮಾರ್ ನಡೆಯನ್ನು ಬೆಂಬಲಿಸಿದ್ದಾರೆ.


