ಅಯೋಧ್ಯೆ/ನವದೆಹಲಿ(ಜು.21): ಆಗಸ್ಟ್‌ 5ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯುವುದು ಖಚಿತವಾಗುತ್ತಿದ್ದಂತೆಯೇ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭವಾಗಿವೆ. ಸುಮಾರು 250 ಅತಿಥಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಪ್ರಧಾನಿ ನರೇಂದ್ರ ಮೋದಿ ಅವರು 5 ಬೆಳ್ಳಿ ಇಟ್ಟಿಗೆಗಳನ್ನು ಸಾಂಕೇತಿಕವಾಗಿ ಇರಿಸಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಅಯೋಧ್ಯೆ ರಾಮಮಂದಿರ ಭೂಮಿ ಪೂಜೆಗೆ 40 ಕೆಜಿ ಬೆಳ್ಳಿ ಚಪ್ಪಡಿ ಬಳಕೆ!

ರಾಮಮಂದಿರ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯ ಬಿಜೆಪಿ ಮುಖಂಡ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ, ಸಾಧ್ವಿ ಋುತಾಂಬರಾ, ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಅಮಿತ್‌ ಶಾ, ರಾಜನಾಥ ಸಿಂಗ್‌ ಸೇರಿ ಕೆಲವು ಕೇಂದ್ರ ಮಂತ್ರಿಗಳು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಅವರ ಸಂಪುಟದ ಸಚಿವರು ಆಗಮಿಸುವ ನಿರೀಕ್ಷೆಯಿದೆ. ಅಯೋಧ್ಯೆಯ ಪ್ರಮುಖ ಸಂತರು, ಹಿರಿಯರು, ಸಂಘ ಪರಿವಾರದ ಪದಾಧಿಕಾರಿಗಳಿಗೆ ಕಾರ್ಯಕ್ರಮಕ್ಕೆ ಬರುವಂತೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಆಹ್ವಾನಿಸುವ ಸಾಧ್ಯತೆ ಇದೆ.

ಆದರೆ ಕೊರೋನಾ ಮಾರ್ಗಸೂಚಿಗಳ ಅನ್ವಯ ಅತಿಥಿಗಳ ಸಂಖ್ಯೆಗೆ ಒಂದು ಮಿತಿ ಇರಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಮೋದಿ ಬಾರದಿದ್ದರೆ ಆ.5ರಂದು ಭೂಮಿಪೂಜೆ ಇಲ್ಲ!

ಭೂಮಿಪೂಜೆಯ ಧಾರ್ಮಿಕ ವಿಧಿ ವಿಧಾನಗಳು ಆಗಸ್ಟ್‌ 3ರಂದೇ ಆರಂಭವಾಗಲಿವೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅಯೋಧ್ಯೆ ಹಾಗೂ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಿಂದ ಪುರೋಹಿತರು ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 5ರಂದು ಭೂಮಿಪೂಜೆ ನೆರವೇರಿಸುವ ನಿರೀಕ್ಷೆಯಿದೆ. ಅಂದು ಬೆಳಗ್ಗೆ 11 ಗಂಟೆಯಿಂದ 1.10 ಗಂಟೆಯವರೆಗೆ ಅವರು ಅಯೋಧ್ಯೆಯಲ್ಲೇ ಇರಲಿದ್ದಾರೆ. ಹಿಂದೂ ಧರ್ಮದ ಪ್ರಕಾರ 5 ಗ್ರಹಗಳು (ಗುರು, ಶುಕ್ರ, ಶನಿ, ಮಂಗಳ, ಬುಧ) ಇದ್ದು, ಅವುಗಳ ಸಂಕೇತವಾಗಿ ಅವರು 5 ಬೆಳ್ಳಿ ಇಟ್ಟಿಗೆ ಇರಿಸಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಭೂಮಿಪೂಜೆಯನ್ನು ಅಯೋಧ್ಯೆಯ ಜನರು ತಾವು ಇದ್ದಲ್ಲಿಂದಲೇ ನೋಡಲು ನಗರದ ಹಲವೆಡೆ ದೊಡ್ಡ ಟೀವಿ ಪರದೆಗಳನ್ನು ಅಳವಡಿಸಲಾಗಿದೆ.