Asianet Suvarna News Asianet Suvarna News

ಸಿಲ್‌ಕ್ಯಾರಾ ಸುರಂಗ ದುರಂತ: 40 ಕಾರ್ಮಿಕರಿಗೆ 17 ದಿನ ಸ್ಥೈರ್ಯ ತುಂಬಿ ಕೊನೆಯದಾಗಿ ಹೊರಬಂದ ಗಬ್ಬರ್ ಸಿಂಗ್

ಸಿಲ್‌ಕ್ಯಾರಾ ಸುರಂಗದೊಳಗಿಂದ 41 ಕಾರ್ಮಿಕರ ರಕ್ಷಣೆಯ ವೇಳೆ ಕೊನೆಯದಾಗಿ ಹೊರಗೆ ಬಂದಿದ್ದು ಗಬ್ಬರ್‌ ಸಿಂಗ್‌ ನೇಗಿ ಎಂಬ ಸುರಂಗ ಕೊರೆಯುವ ಗುತ್ತಿಗೆ ವಹಿಸಿಕೊಂಡ ಕಂಪನಿಯ ಸಿಬ್ಬಂದಿ. 

Silkara tunnel Collapse employee of the tunneling company Gabbar Singh who supported 40 workers to stay courage and stable akb
Author
First Published Nov 30, 2023, 7:28 AM IST

ನವದೆಹಲಿ: ಸಿಲ್‌ಕ್ಯಾರಾ ಸುರಂಗದೊಳಗಿಂದ 41 ಕಾರ್ಮಿಕರ ರಕ್ಷಣೆಯ ವೇಳೆ ಕೊನೆಯದಾಗಿ ಹೊರಗೆ ಬಂದಿದ್ದು ಗಬ್ಬರ್‌ ಸಿಂಗ್‌ ನೇಗಿ ಎಂಬ ಸುರಂಗ ಕೊರೆಯುವ ಗುತ್ತಿಗೆ ವಹಿಸಿಕೊಂಡ ಕಂಪನಿಯ ಸಿಬ್ಬಂದಿ. ಎಲ್ಲರನ್ನೂ ಮೊದಲಿಗೆ ಕಳುಹಿಸಿ ಕೊನೆಯದಾಗಿ ಹೊರಬರಲು ನಿರ್ಧರಿಸಿದ ನೇಗಿ, ಅದಕ್ಕೂ ಮೊದಲು 17 ದಿನಗಳ ಕಾಲ ಉಳಿದ 40 ಕಾರ್ಮಿಕರಿಗೆ ನೈತಿಕ ಬೆಂಬಲ ನೀಡಿ ಕಾಪಾಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಗಬ್ಬರ್‌ ಸಿಂಗ್‌ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರ ಪೈಕಿ ಅತ್ಯಂತ ಹಿರಿಯರಾಗಿದ್ದರು. ನ.12 ರಂದು ಸುರಂಗದೊಳಗೆ ಏಕಾಏಕಿ ಮಣ್ಣು ಕುಸಿದು 41 ಜನರು ಸಿಕ್ಕಿಬಿದ್ದಾಗ ಯಾರೂ ಆತಂಕಕ್ಕೆ ಒಳಗಾಗದೇ ಇರುವಂತೆ ನೋಡಿಕೊಂಡ ಹಿರಿಮೆ ನೇಗಿ ಅವರದ್ದು.  ನಮ್ಮ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ನಂಬಿದ್ದ ನೇಗಿ, ಅಲ್ಲಿಯವರೆಗೂ ಕಾರ್ಮಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ನಾನಾ ತಂತ್ರ ರೂಪಿಸಿದ್ದರು. ಮೊದಲಿಗೆ ಪ್ರತಿಯೊಬ್ಬರಿಗೂ ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡುವುದನ್ನು ಹೇಳಿಕೊಡುವ ಮೂಲಕ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬಾರದಂತೆ ನೋಡಿಕೊಂಡಿದ್ದರು.

ದೇವರ ತಾಳ್ಮೆ ಕೆಣಕಿದ್ರೆ ಸಿಲ್‌ಕ್ಯಾರಾದಂಥ ದುರಂತಗಳು ನಡೆಯದೇ ಇರುತ್ತಾ?

ಜೊತೆಗೆ ಬೇಸರ ಕಳೆಯುವ ಸಲುವಾಗಿ ಮತ್ತು ಕಾರ್ಮಿಕರ ಕಳವಳ ದೂರ ಮಾಡುವ ಸಲುವಾಗಿ ಅವರೊಂದಿಗೆ ಕಳ್ಳ- ಪೊಲೀಸ್‌ ಸೇರಿದಂತೆ ನಾನಾ ರೀತಿಯ ಆಟವಾಡಿ ಅವರ ಮನಸ್ಥೈರ್ಯವನ್ನು ಕಾಪಾಡುವ ಕೆಲಸ ಮಾಡಿದ್ದರು. ಜೊತೆಗೆ ಸುರಂಗದಿಂದ ಹೊರಕರೆತರುವ ವಿಷಯ ತಿಳಿದಾಗ ತಾನೇ ಕೊನೆಯವನಾಗಿ ಬರುವುದಾಗಿ ಸ್ವತಃ ಹೇಳಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೊದಲು ಇದು ಕನಸು ಎಂದು ಭಾವಿಸಿದ್ದೆ: ಕಾರ್ಮಿಕ

ಲಖನೌ: ಸಿಲ್‌ಕ್ಯಾರಾ ಸುರಂಗದಿಂದ ಸುರಕ್ಷಿತವಾಗಿ ಹೊರಬಂದಿರುವ ಕಾರ್ಮಿಕ ಮಂಜೀತ್‌ ಚೌಹಾಣ್‌ (25) ಸುರಂಗದಲ್ಲಿನ ತನ್ನ ಅನುಭವವನ್ನು ಹಂಚಿಕೊಂಡಿದ್ದು, ಇದನ್ನು ನಾನು ಮೊದಲು ಕನಸು ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ. ಅಲ್ಲದೇ ಫೋನ್‌ನಲ್ಲಿದ್ದ ಅಮ್ಮನ ಫೋಟೋ ನೋಡಿ ಧೈರ್ಯ ತಂದುಕೊಳ್ಳುತ್ತಿದ್ದೆ ಎಂದಿದ್ದಾರೆ.

ಟೀಮ್‌ ವರ್ಕ್‌ನ ಶ್ರೇಷ್ಠ ಉದಾಹರಣೆ, ಸಿಲ್‌ಕ್ಯಾರಾ ಸುರಂಗ ಯಶಸ್ವಿ ಕಾರ್ಯಾಚರಣೆಗೆ ಮೋದಿ ಸಂತಸ!

ಮಂಜೀತ್‌ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಭೈರಾಮ್‌ಪುರ ಗ್ರಾಮದವರಾಗಿದ್ದು, ಕೆಲಸಕ್ಕೆಂದು ಉತ್ತರಾಖಂಡಕ್ಕೆ ಬಂದಿದ್ದರು. ತನ್ನ 17 ದಿನಗಳ ಮಣ್ಣಿನಡಿಯ ಬದುಕಿನ ಹೋರಾಟದ ಬಗ್ಗೆ ಮಾತನಾಡಿದ ಮಂಜೀತ್‌ ಸುರಂಗ ಕುಸಿದ ಸ್ಥಳದಿಂದ 15 ಮೀಟರ್ ದೂರದಲ್ಲಿ ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ದಿಢೀರನೆ ಸುರಂಗ ಕುಸಿದು ಬಿಟ್ಟಿತು. ಮೊದ ಮೊದಲು ಇದು ಕನಸೆಂದು ಭಾವಿಸಿದ್ದೆ. ಕುಸಿತದ ನಂತರದ ಮೊದಲ 24 ಗಂಟೆ ಎಲ್ಲರಿಗೂ ಕಷ್ಟಕರವಾಗಿತ್ತು. ನಮ್ಮೆಲ್ಲರಿಗೂ ಭಯವಾಯಿತು, ಅಲ್ಲಿ ಎಲ್ಲರೂ ಏನೇನೋ ಹೇಳುತ್ತಿದ್ದರು. ಬಾಯಾರಿಕೆ, ಆಹಾರದ ಕೊರತೆ, ಉಸಿರುಗಟ್ಟುವಿಕೆ ಎಲ್ಲವೂ ಒಮ್ಮೆಲೆ ಕಷ್ಟ ತಂದಿತು. ಆದರೆ ಹೊರಗಿನಿಂದ ನಾಲ್ಕು ಇಂಚಿನ ಡ್ರೈನ್ ಪೈಪ್‌ನೊಂದಿಗೆ ಸಂಪರ್ಕ ಸ್ಥಾಪಿಸಿದಾಗ ನಮ್ಮ ಮನಸ್ಥಿತಿ ಬದಲಾಗಲಾರಂಭಿಸಿತು ಎಂದು ಹೇಳಿದ್ದಾರೆ.

ಅಲ್ಲದೇ ನಾನು ನನ್ನ ತಂದೆಯೊಂದಿಗೆ ಮೊದಲ ಬಾರಿಗೆ ಮಾತನಾಡಿದಾಗ, ನಾನು ಖಚಿತವಾಗಿ ಹಿಂತಿರುಗುತ್ತೇನೆ ಮತ್ತು ನನ್ನ ತಾಯಿಯನ್ನು ನೋಡಿಕೊಳ್ಳುವಂತೆ ಕೇಳಿದೆ. ನನ್ನ ಸಹೋದರ ನನಗಿಂತ ಹೆಚ್ಚು ಪ್ರಾಮಾಣಿಕ ಮತ್ತು ಕಾಳಜಿಯುಳ್ಳವನಾಗಿದ್ದನು. ನಾವಿಲ್ಲದಿದ್ದರೆ ನಮ್ಮ ತಂದೆ ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ಅವನು ನನಗೆ ಹೇಳುತ್ತಿದ್ದ. ಫೋನ್‌ನಲ್ಲಿ ನನ್ನ ತಂದೆ ತಾಯಿ ಫೋಟೋವನ್ನು ವಾಲ್‌ಪೇಪರ್‌ ಇಟ್ಟುಕೊಂಡಿದ್ದೇನೆ. ಇದನ್ನು ಹಲವಾರು ಬಾರಿ ನೋಡುತ್ತ ಧೈರ್ಯ ತಂದುಕೊಳ್ಳುತ್ತಿದ್ದೆ ಎಂದಿದ್ದಾರೆ.

ಸುರಂಗದೊಳಗೆ ಇನ್ನೂ 25 ದಿನಕ್ಕೆ ಆಗುವಷ್ಟು ಆಹಾರ!
ನವದೆಹಲಿ: ಸುರಂಗದಲ್ಲಿ ಇನ್ನೂ 25 ದಿನಕ್ಕೆ ಸಾಕಾಗುವಷ್ಟು ಆಹಾರವಿದೆ ಎಂದು ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕ ಅಖಿಲೇಶ್‌ ಸಿಂಗ್‌ ತಿಳಿಸಿದ್ದಾರೆ. ಸುರಂಗದಿಂದ ಹೊರಬಂದ ಬಳಿಕ ಈ ಕುರಿತು ತಮ್ಮ ಅನುಭವ ಹಂಚಿಕೊಂಡ ಸಿಂಗ್‌ ಮಣ್ಣು ಕುಸಿದು 18 ಗಂಟೆಗಳ ಕಾಲ ಹೊರಗಿನ ಪ್ರಪಂಚಕ್ಕೆ ಯಾವುದೇ ಸಂಪರ್ಕ ಸಿಗಲಿಲ್ಲ. ನಮ್ಮ ತರಬೇತಿ ಪ್ರಕಾರ ನಾವು ಒಳಗೆ ಸಿಲುಕಿಕೊಂಡಿದ್ದೇವೆ ಎಂಬ ವಿಷಯವನ್ನು ನೀರಿನ ಪೈಪ್‌ ಆನ್‌ ತೆರೆದಿಡುವ ಮೂಲಕ ಸಂದೇಶ ರವಾನಿಸಿದೆವು. ನಂತರ ಅವರು ಆಮ್ಲಜನಕ, ಆಹಾರ, ಔಷಧಿಯನ್ನು ಕಳುಹಿಸಲು ಆರಂಭಿಸಿದರು. ಈಗಲೂ ಸುರಂಗದೊಳಗೆ ಮುಂದಿನ 25 ದಿನಗಳಿಗೆ ಆಗುವಷ್ಟು ಆಹಾರ ಮಿಕ್ಕಿದೆ ಎಂದರು.

Follow Us:
Download App:
  • android
  • ios