ಸಲಿಂಗ ವಿವಾಹಕ್ಕೆ ಅನುಮತಿ ನೀಡಿದರೆ ಭವಿಷ್ಯದಲ್ಲಿ ಯಾರಾದರೂ ಕೋರ್ಟ್‌ಗೆ ಬಂದು ಒಡಹುಟ್ಟಿದವರು, ಪೋಷಕರು, ಮಕ್ಕಳು ಹಾಗೂ ಅಜ್ಜ ಅಜ್ಜಿಯ ಜೊತೆ ಲೈಂಗಿಕ ಸಂಪರ್ಕಕ್ಕೆ ಇರುವ ನಿಷೇಧವನ್ನೂ ಪ್ರಶ್ನಿಸಬಹುದು  ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದೆ.

ನವದೆಹಲಿ: ಸಲಿಂಗ ವಿವಾಹಕ್ಕೆ ಅನುಮತಿ ನೀಡಿದರೆ ಭವಿಷ್ಯದಲ್ಲಿ ಯಾರಾದರೂ ಕೋರ್ಟ್‌ಗೆ ಬಂದು ಒಡಹುಟ್ಟಿದವರು, ಪೋಷಕರು, ಮಕ್ಕಳು ಹಾಗೂ ಅಜ್ಜ ಅಜ್ಜಿಯ ಜೊತೆ ಲೈಂಗಿಕ ಸಂಪರ್ಕಕ್ಕೆ ಇರುವ ನಿಷೇಧವನ್ನೂ ಪ್ರಶ್ನಿಸಬಹುದು. ಇಬ್ಬರು ವಯಸ್ಕರು ನಡೆಸುವ ಲೈಂಗಿಕ ಕ್ರಿಯೆಯನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಅವರು ವಾದಿಸಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಆತಂಕ ವ್ಯಕ್ತಪಡಿಸಿದೆ.

ಸಲಿಂಗ ವಿವಾಹಕ್ಕೆ ಅನುಮತಿ ಕೋರಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಪಂಚಸದಸ್ಯ ಪೀಠದಲ್ಲಿ ಗುರುವಾರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಈಗ ಇದು ಅತಿ ಎನ್ನಿಸಬಹುದು. ಆದರೆ ಇನ್ನೈದು ವರ್ಷದ ನಂತರದ ಚಿತ್ರಣವನ್ನೊಮ್ಮೆ ಊಹಿಸಿಕೊಳ್ಳಿ. ಆಗ ಯಾರಾದರೂ ಕೋರ್ಟ್‌ಗೆ ಬಂದು ನನಗೆ ನನ್ನ ತಂಗಿಯ ಮೇಲೆ ಮನಸ್ಸಾಗಿದೆ. ನಾವಿಬ್ಬರೂ ಪ್ರಾಪ್ತ ವಯಸ್ಕರು. ಇಬ್ಬರಿಗೂ ಇದಕ್ಕೆ ಒಪ್ಪಿಗೆಯಿದೆ. ಖಾಸಗಿಯಾಗಿ ನಾವು ಸಂಬಂಧ ಇರಿಸಿಕೊಳ್ಳುತ್ತೇವೆ ಎಂದು ಹೇಳಬಹುದು. ಜಗತ್ತಿನಾದ್ಯಂತ ತಂದೆ-ತಾಯಿ, ಅಜ್ಜ-ಅಜ್ಜಿ, ಅಕ್ಕ-ತಂಗಿಯರ ಜೊತೆ ಲೈಂಗಿಕ ಸಂಪರ್ಕಕ್ಕೆ ನಿಷೇಧವಿದೆ. ಆದರೆ ಇಂತಹುದು ನಡೆಯುತ್ತಿರುವುದು ಸತ್ಯ. ಭವಿಷ್ಯದಲ್ಲಿ ಅದಕ್ಕೆ ಕಾನೂನಿನ ಸಮ್ಮತಿ ಕೇಳಿದರೆ ಏನು ಮಾಡುವುದು ಎಂದು ಹೇಳಿದರು.

ಸಲಿಂಗ ವಿವಾಹಕ್ಕೆ ಅನುಮತಿ ಕೇಳುವವರು ದೇಹದ ಮೇಲಿನ ಹಕ್ಕು, ಆಯ್ಕೆಯ ಹಕ್ಕು, ಖಾಸಗಿತನದ ಹಕ್ಕುಗಳ ಆಧಾರದ ಮೇಲೆ ಕೇಳುತ್ತಿದ್ದಾರೆ. ಇದೇ ವ್ಯಾಖ್ಯೆಯನ್ನು ಒಡಹುಟ್ಟಿದವರಿಗೂ ವಿಸ್ತರಿಸಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಸಲಿಂಗ ವಿವಾಹ ವಿಷಯ ಸಂಸತ್ತಿಗೇ ಬಿಡಿ: ಸುಪ್ರೀಂಕೋರ್ಟ್‌ಗೆ ಕೇಂದ್ರ

ಸಲಿಂಗಿ ಜೋಡಿಗೆ ಹೇಗೆ ಸಾಮಾಜಿಕ ಸೌಲಭ್ಯ ನೀಡುತ್ತೀರಿ

ಸಲಿಂಗ ವಿವಾಹಕ್ಕೆ ಅನುಮತಿ ನೀಡದೆಯೇ, ಅಂತಹ ಜೋಡಿಗೆ ಸಾಮಾಜಿಕ ಸೌಲಭ್ಯಗಳನ್ನು ನೀಡುವುದಾದರೆ ಹೇಗೆ ನೀಡುತ್ತೀರಿ? ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಸಲಿಂಗಿ ಜೋಡಿಗೆ ಜಂಟಿ ಬ್ಯಾಂಕ್‌ ಖಾತೆ ಅಥವಾ ವಿಮೆ ಪಾಲಿಸಿಗೆ ಪರಸ್ಪರರನ್ನು ನಾಮನಿರ್ದೇಶನ ಮಾಡುವುದು ಮುಂತಾದ ಸೌಕರ್ಯಗಳನ್ನು ನೀಡಲು ಸಾಧ್ಯವೇ? ಈ ಬಗ್ಗೆ ಸರ್ಕಾರದ ಜೊತೆ ಮಾತನಾಡಿ ನಮಗೆ ಮುಂದಿನ ಬುಧವಾರ ತಿಳಿಸಿ ಎಂದು ಕೇಂದ್ರ ಸರ್ಕಾರದ ಸಾಲಿಟಿರ್‌ ಜನರಲ್‌ ತುಷಾರ್‌ ಮೆಹ್ತಾ (Tushar mehta) ಅವರಿಗೆ ಪಂಚ ಸದಸ್ಯ ಪೀಠ ಸೂಚನೆ ನೀಡಿದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಂವಿಧಾನ ಪೀಠ, ಈ ವಿಷಯವನ್ನು ಸಂಸತ್ತಿನ ವಿವೇಚನೆಗೆ ಬಿಡಬೇಕು ಎಂಬ ಕೇಂದ್ರ ಸರ್ಕಾರದ ವಾದದ ಹಿನ್ನೆಲೆಯಲ್ಲಿ, ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡದೆಯೇ ಸಲಿಂಗಿ ಜೋಡಿಗೆ ಸಾಮಾಜಿಕ ಸೌಲಭ್ಯಗಳನ್ನು ನೀಡುವ ಸಾಧ್ಯಾಸಾಧ್ಯತೆಗಳ ಕುರಿತು ಸರ್ಕಾರಕ್ಕೆ ಪ್ರಶ್ನಿಸಿದೆ.

ಸಲಿಂಗ ವಿವಾಹದ ವಿಚಾರಣೆ ಕೈಬಿಡಿ; ನಿರ್ಧಾರದ ಹೊಣೆಯನ್ನು ಸಂಸತ್ತಿಗೆ ಬಿಡಿ: ಬಾರ್‌ ಕೌನ್ಸಿಲ್‌ ಮನವಿ