ಸಲಿಂಗ ವಿವಾಹ ವಿಷಯ ಸಂಸತ್ತಿಗೇ ಬಿಡಿ: ಸುಪ್ರೀಂಕೋರ್ಟ್‌ಗೆ ಕೇಂದ್ರ
ಇತ್ತೀಚಿನ ವರ್ಷಗಳಲ್ಲಿ ಸಲಿಂಗಿಗಳ ವಿವಾಹ ಹೆಚ್ಚುತ್ತಿದೆ. ಹುಡುಗ-ಹುಡುಗ, ಹುಡುಗ-ಹುಡುಗಿ ಮದುವೆಯಾಗಿ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಸಲಿಂಗ ವಿವಾಹ ವಿಷಯ ಸಂಸತ್ತಿಗೇ ಬಿಡಿ ಎಂದು ಸುಪ್ರೀಂಗೆ ಕೇಂದ್ರ ಮನವಿ ಮಾಡಿದೆ.
ನವದೆಹಲಿ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ವಿಷಯ ಅತ್ಯಂತ ಸಂಕೀರ್ಣ ಮತ್ತು ಗಾಢ ಪ್ರಭಾವ ಹೊಂದಿರುವ ಕಾರಣ, ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಸಂಸತ್ತಿಗೆ ಬಿಡುವ ಕುರಿತು ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಚ್‌ಗೆ ಮನವಿ ಮಾಡಿದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಬುಧವಾರವೂ ಮುಂದುವರೆದಿದ್ದು, ಈ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಮೇಲಿನಂತೆ ಕೋರಿಕೆ ಸಲ್ಲಿಸಿದರು.
ಗಹನ ಚರ್ಚೆ ಅಗತ್ಯ-ಕೇಂದ್ರ:
‘ವಿವಾಹ ಎಂದರೆ ಏನು? ಯಾರ ನಡುವೆ ಆದರೆ ಮದುವೆ ಎನ್ನಿಸಿಕೊಳ್ಳುತ್ತದೆ? ಈ ಬಗ್ಗೆ ಯಾರು ನಿರ್ಧಾರ ಕೈಗೊಳ್ಳಬೇಕು ಎಂಬುದು ಇಲ್ಲಿ ಪ್ರಮುಖ ವಿಷಯ. ಸದ್ಯ ನ್ಯಾಯಾಲಯ (Court) ಪರಿಶೀಲಿಸುತ್ತಿರುವ ವಿಷಯ, ವಿವಾಹದ ಸಾಮಾಜಿಕ-ಕಾನೂನಾತ್ಮಕ ಸಂಬಂಧಗಳನ್ನು ಒಳಗೊಂಡಿದೆ ಮತ್ತು ಇದು ಸಂಪೂರ್ಣವಾಗಿ ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಜೊತೆಗೆ ವಿಷಯ ಸಮವರ್ತಿ ಪಟ್ಟಿಯಲ್ಲಿದೆ. ಹೀಗಿದ್ದಾಗ ಈ ವಿಷಯದ ಕುರಿತ ಯಾವುದೇ ನಿರ್ಧಾರವನ್ನು ಒಂದು ರಾಜ್ಯ ಒಪ್ಪಬಹುದು, ಇನ್ನೊಂದು ರಾಜ್ಯ ವಿರೋಧಿಸಬಹುದು. ಆದ ಕಾರಣ ಈ ಪ್ರಕರಣದಲ್ಲಿ ರಾಜ್ಯಗಳೂ ಪಾಲುದಾರರಾಗದೇ ಹೋದರೆ, ಅರ್ಜಿ ಸ್ವೀಕಾರಾರ್ಹವಾಗದು. ಅದುವೇ ನಮ್ಮ ಪ್ರಾಥಮಿಕ ವಿರೋಧ’ ಎಂದು ಹೇಳಿದರು.
ಸಮಗ್ರ ಅಧಿಕಾರ ಬಳಸಿ ಸಲಿಂಗ ವಿವಾಹಕ್ಕೆ ಮನ್ನಣೆ ನೀಡಿ: ಸುಪ್ರೀಂಕೋರ್ಟ್‌ಗೆ ಸಲಿಂಗಿಗಳ ಪರ ವಕೀಲರ ಮನವಿ
‘ಜೊತೆಗೆ ಈ ವಿಷಯವನ್ನು ನ್ಯಾಯಾಲಯ ತನ್ನ ಪರಿಗಣನೆಗೆ ಒಳಪಡಿಸಬಹುದೇ ಅಥವಾ ಈ ವಿಷಯದಲ್ಲಿ ಸಂಸತ್ ಮುಂದಿನ ನಿರ್ಧಾರ ಕೈಗೊಳ್ಳಬೇಕೇ ಎಂಬುದು ಈಗ ನಿರ್ಧಾರವಾಗಬೇಕಿದೆ. ಹೀಗಾಗಿ ಈ ವಿಷಯವನ್ನು ಸಂಸತ್ ನಿರ್ಧಾರಕ್ಕೆ ಬಿಡುವ ಬಗ್ಗೆ ನ್ಯಾಯಾಲಯ ಪರಿಶೀಲಿಸಬೇಕು’ ಎಂದು ಮೆಹ್ತಾ, ಮುಖ್ಯ ನ್ಯಾ.ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಕೇಂದ್ರ ಸರ್ಕಾರ ಈಗಾಗಲೇ ಸಲಿಂಗ ವಿವಾಹಕ್ಕೆ (Same sex marriage) ಮಾನ್ಯತೆ ನೀಡುವುದನ್ನು ವಿರೋಧಿಸಿದೆ. ಇದು ಕೆಲವೇ ನಗರ ಶ್ರೀಮಂತರ ಆಸಕ್ತಿಯ ವಿಷಯ. ಇಂಥ ವಿವಾಹಕ್ಕೆ ಮಾನ್ಯತೆ (Recognistion) ನೀಡುವುದು ಸಾಮಾಜಿಕವಾಗಿ ಅತ್ಯಂತ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಎಚ್ಚರಿಸಿದೆ. ಮತ್ತೊಂದೆಡೆ ಹಲವು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಮೊದಲಾದ ಧಾರ್ಮಿಕ ನಾಯಕರು ಕೂಡಾ ಯಾವುದೇ ಕಾರಣಕ್ಕೂ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಕೂಡದು ಎಂದು ಈಗಾಗಲೇ ಲಿಖಿತವಾಗಿ ನ್ಯಾಯಾಲಯಕ್ಕೆ ಮನವಿ (Request) ಮಾಡಿದ್ದಾರೆ.
ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ
ಸಲಿಂಗಿಗಳ ವಾದವೇನು?
- ನಮಗೆ ಪುರುಷ-ಮಹಿಳೆ ಜೋಡಿಯಂತೆಯೇ ಬದುಕುವ ಹಕ್ಕಿದೆ. ಮದುವೆಗೆ ಅನುಮತಿ ನೀಡಿ
- ಸಲಿಂಗಿಗಳಿಗೆ ಮದುವೆಯಾಗಲು ಅವಕಾಶ ನಿರಾಕರಿಸಿದರೆ ಅವರ ಹಕ್ಕು ಮೊಟಕು ಆದಂತೆ
- ವಿಶೇಷ ವಿವಾಹ ಕಾಯ್ದೆಯು ಹೇಗೆ ಧರ್ಮಾತೀತವೋ ಅದೇ ರೀತಿ ಮದುವೆಗೆ ಅವಕಾಶ ನೀಡಬೇಕು
- ಮೂಲಭೂತ ಹಕ್ಕಿಗೆ ಧಕ್ಕೆ ಬರುವ ಸಂದರ್ಭದಲ್ಲಿ ಅದರ ವಿರುದ್ಧ ಕೇಂದ್ರಕ್ಕೆ ಕೋರ್ಟಿಗೆ ಬರುವ ಅಧಿಕಾರವಿಲ್ಲ
- ಸಲಿಂಗಿಗಳ ಮದುವೆ ಬಗ್ಗೆ ಕೇವಲ ಸಂಸತ್ತು ನಿರ್ಣಯಿಸಬೇಕು ಎಂಬ ಕೇಂದ್ರದ ವಾದದಲ್ಲಿ ಅರ್ಥವಿಲ್ಲ
-----
ಸರ್ಕಾರದ ವಾದವೇನು?
1. ಸಲಿಂಗಿಗಳ ವಿಚ್ಛೇದನದ ಸಂದರ್ಭದಲ್ಲಿ ಯಾರು ಯಾರಿಗೆ ನಿರ್ವಹಣಾ ವೆಚ್ಚ ಕೊಡಬೇಕು ಎಂಬ ಸಮಸ್ಯೆ ಸೃಷ್ಟಿಯಾಗುತ್ತದೆ
2. ವಿಚ್ಛೇದನದ ಸಂದರ್ಭದಲ್ಲಿ ಮಕ್ಕಳು ಯಾರ ಜತೆ ಇರಬೇಕು ಎಂಬ ಸಮಸ್ಯೆ ಎದುರಾಗುತ್ತದೆ
3. ಸಲಿಂಗಿಗಳ ಲಿಂಗ ಯಾವುದು ಎಂಬ ಪ್ರಶ್ನೆ ಎದುರಾಗುವ ಕಾರಣ ಈ ಮೇಲಿನ 2 ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
4. ಇಲ್ಲಿ ಮದುವೆ ಆಗುವುದೊಂದೇ ಮುಖ್ಯ ವಿಷಯವಲ್ಲ. ನಂತರ ಎದುರಾಗುವ ಸಮಸ್ಯೆಗಳನ್ನೂ ಗಮನಿಸಬೇಕು
5. ನ್ಯಾಯಾಲಯವೊಂದೇ ತೀರ್ಮಾನಿಸುವ ವಿಷಯ ಇದಲ್ಲ. ಎಲ್ಲ ಸರ್ಕಾರಗಳೂ ಸೇರಿ ನಿರ್ಧರಿಸುವ ವಿಷಯವಿದು. ಏಕೆಂದರೆ ಪರಿಣಾಮ ತೀವ್ರವಾದುದು.