ನವದೆಹಲಿ(ಜೂ.08): ಕೊರೋನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವಾಗಲೇ, ದೇಶವನ್ನು ಹಂತಹಂತವಾಗಿ ಲಾಕ್‌ಡೌನ್‌ನಿಂದ ಮುಕ್ತಗೊಳಿಸಲು ಕೇಂದ್ರ ಸರ್ಕಾರ ಘೋಷಿಸಿದ್ದ ‘ಅನ್‌ಲಾಕ್‌ 1.0’ ಸೋಮವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ದೇಗುಲ, ಮಸೀದಿ, ಚಚ್‌ರ್‍ನಂತಹ ಧಾರ್ಮಿಕ ಕೇಂದ್ರಗಳು, ಶಾಪಿಂಗ್‌ ಮಾಲ್‌, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಎರಡೂವರೆ ತಿಂಗಳ ಬಳಿಕ ಮತ್ತೆ ಬಾಗಿಲು ತೆರೆಯಲಿವೆ. ಇದರೊಂದಿಗೆ ಶೇ.98ರಷ್ಟುಸೇವೆ ಮತ್ತು ಚಟುವಟಿಕೆಗಳು ಪುನಾರಂಭವಾದಂತೆ ಆಗಲಿದೆ. ಗ್ರಾಹಕರ ಸ್ವಾಗತಕ್ಕೆ ಹೋಟೆಲ್‌, ರೆಸ್ಟೋರೆಂಟ್‌ಗಳು, ಮಾಲ್‌ಗಳು ಸಿದ್ಧವಾಗಿವೆ. ದೇವಾಲಯಗಳಲ್ಲಿ ದೇವರ ದರ್ಶನಕ್ಕೂ ಸಿದ್ಧತೆ ಮಾಡಲಾಗಿದೆ. ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈಗಾಗಲೇ ಬಸ್‌, ರೈಲು, ವಿಮಾನ ಸಂಚಾರ ಆರಂಭವಾಗಿದೆ. ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಶಾಲೆ-ಕಾಲೇಜು, ಸಿನಿಮಾ ಮಂದಿರ, ರಾಜಕೀಯ- ಸಾಮಾಜಿಕ- ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ ಬಹುತೇಕ ಚಟುವಟಿಕೆಗಳು ಸೋಮವಾರದಿಂದ ಪುನಾರಂಭವಾದಂತೆ ಆಗುತ್ತದೆ. ಹೀಗಾಗಿ ಜನಸಂಚಾರ ಹೆಚ್ಚಲಿದ್ದು, ಕೊರೋನಾ ಅಪಾಯ ಹಿಂದೆಂದಿಗಿಂತ ಅಧಿಕವಾಗಿರಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇವರ ದರ್ಶನ ಭಾಗ್ಯ..!

ಸಾಮಾಜಿಕ ಅಂತರ ಪಾಲಿಸಬೇಕು, ಮಾಸ್ಕ್‌ ಧರಿಸಬೇಕು, ಸ್ಯಾನಿಟೈಸರ್‌ ಬಳಸಬೇಕು ಎಂಬುದು ಸೇರಿದಂತೆ ಹಲವು ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆಯಾದರೂ ನಮ್ಮ ಸುರಕ್ಷತೆ ನಮ್ಮ ಕೈಯಲ್ಲೇ ಇರುವುದರಿಂದ ಕೊರೋನಾ ಬಗ್ಗೆ ತೀವ್ರ ಎಚ್ಚರಿಕೆ ವಹಿಸಬೇಕಾಗಿದೆ.

ಮೇ 1ರಿಂದ ಲಾಕ್‌ಡೌನ್‌ 5.0 ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ, ಆರ್ಥಿಕ ಚಟುವಟಿಕೆ ಪುನಾರಂಭ ಸಲುವಾಗಿ ಹಂತಹಂತವಾಗಿ ಲಾಕ್‌ಡೌನ್‌ನಿಂದ ದೇಶಕ್ಕೆ ಮುಕ್ತಿ ನೀಡಲು ನಿರ್ಧರಿಸಿತ್ತು. ಕಂಟೇನ್ಮೆಂಟ್‌ ಪ್ರದೇಶಗಳಲ್ಲಿ ಮಾತ್ರ ಲಾಕ್‌ಡೌನ್‌ ವಿಸ್ತರಿಸಿದ್ದ ಕೇಂದ್ರ ಸರ್ಕಾರ, ‘ಅನ್‌ಲಾಕ್‌ 1.0’ ಹೆಸರಿನಲ್ಲಿ ಜೂ.8ರ ಸೋಮವಾರದಿಂದ ಧಾರ್ಮಿಕ ಕೇಂದ್ರ, ಶಾಪಿಂಗ್‌ ಮಾಲ್‌, ಹೋಟೆಲ್‌- ರೆಸ್ಟೋರೆಂಟ್‌ಗಳನ್ನು ಆರಂಭಿಸುವುದಾಗಿ ಘೋಷಿಸಿತ್ತು. ಅಲ್ಲೆಲ್ಲಾ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜೂ.3ರಂದು ನಿಯಮಾವಳಿಗಳನ್ನು ಕೂಡ ಬಿಡುಗಡೆ ಮಾಡಿತ್ತು.

ಜೂ.14ರಿಂದ ಭಕ್ತರಿಗೆ ಶಬರಿಮಲೆ ಅಯ್ಯಪ್ಪನ ದರ್ಶನ!

ಈ ನಿರ್ದೇಶನದಂತೆ ನಾಡದೇವತೆ ಮೈಸೂರಿನ ಚಾಮುಂಡಿಶ್ವರಿ ದೇವಾಲಯ, ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪ್ರಸಿದ್ಧ ದೇವಾಲಯಗಳು, ಪ್ರಮುಖ ಚಚ್‌ರ್‍ಗಳು, ಮಸೀದಿಗಳು ಸೇರಿದಂತೆ ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಅಲ್ಲಿನ ಆಡಳಿತ ಮಂಡಳಿಗಳು ಸ್ವಚ್ಛಗೊಳಿಸಿ ಸೋಮವಾರದಿಂದ ಕೊರೋನಾ ನಿಯಂತ್ರಣ ನಿಯಮಾವಳಿಗಳನ್ನು ಅನುಸರಿಸಿ ಭಕ್ತರಿಗೆ ದರ್ಶನ ಕಲ್ಪಿಸಲು, ಪ್ರವಾಸಿಗರ ಪ್ರವೇಶಕ್ಕೆ ಸಜ್ಜುಗೊಳಿಸಿವೆ. ಕೆಲವೆಡೆ ಭಾನುವಾರವೇ ಭಕ್ತರು, ಪ್ರವಾಸಿಗರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗೆ ಸ್ಯಾನಿಟೈಸರ್‌ ನೀಡುವುದು, ಕಡ್ಡಾಯ ಮಾಸ್ಕ್‌ ಧರಿಸುವುದು ಸೇರಿದಂತೆ ಕಟ್ಟುನಿಟ್ಟಿನ ನಿಬಂಧನೆಗಳ ಪಾಲನೆ ಸಂಬಂಧ ದೇವಾಲಯಗಳು ರಿಹರ್ಸಲ್‌ ನಡೆಸಿವೆ.

ಮತ್ತೊಂದೆಡೆ ಈಗಾಗಲೇ ಕೆಲ ದಿನಗಳಿಂದ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಿದ್ದ ಹೋಟೆಲ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬಾಗಿಲು ತೆರೆಯಲು ಮಾಲಿಕರು ಮುಂದಾಗಿದ್ದಾರೆ. ಉಳಿದಂತೆ ಶಾಪಿಂಗ್‌ ಮಾಲ್‌ಗಳು, ರೆಸ್ಟೋರೆಂಟ್‌, ರೆಸಾರ್ಟ್‌, ಲಾಡ್ಜ್‌ಗಳು ಪುನಾರಂಭಕ್ಕೆ ಸಜ್ಜಾಗಿದ್ದು, ಗ್ರಾಹಕರನ್ನು ಸ್ವಾಗತಿಸಲು ವಿಶೇಷ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿವೆ. ಇಷ್ಟೆಲ್ಲದರ ನಡುವೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಬಿಗಡಾಯಿಸುತ್ತಿದ್ದು, ಇದರಿಂದ ಭಕ್ತರು, ಪ್ರವಾಸಿಗರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಕೊರೋನಾ ಬ್ಲಂಡರ್‌: ತನಗೆ ತಾನೇ ಕ್ಲೀನ್‌ಚಿಟ್‌ ಕೊಟ್ಟುಕೊಂಡ ಚೀನಾ!

2ನೇ ಅನ್‌ಲೌಕ್ಡಾನ್‌:

ಇನ್ನು ನಿಷೇಧ ಮುಂದುವರೆಯಲಿರುವ ಶೈಕ್ಷಣಿಕ ಚಟುವಟಿಕೆ, ರೈಲು, ಅಂತಾರಾಷ್ಟ್ರೀಯ ವಿಮಾನ ಸಂಚಾರ ಮೊದಲಾದ ಚಟುವಟಿಕೆ ಬಗ್ಗೆ ಜುಲೈ 1ರ ಬಳಿಕ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಗಮನಿಸಿ...

- ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌, ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ

- ಸರತಿಯಲ್ಲಿ ನಿಲ್ಲಬೇಕಾದ ಸನ್ನಿವೇಶ ಇದ್ದರೆ 6 ಅಡಿ ಅಂತರವಿರಬೇಕು

- ಧಾರ್ಮಿಕ ಕೇಂದ್ರಗಳಿಗೆ ಕೈ-ಕಾಲು ತೊಳೆದುಕೊಂಡೇ ಪ್ರವೇಶಿಸಬೇಕು

- ತೀರ್ಥ, ಪ್ರಸಾದ ವಿತರಣೆ, ಸಾಮೂಹಿಕ ಭಜನೆ ಕಾರ್ಯಕ್ರಮಗಳು ನಿಷಿದ್ಧ

- ಮೂರ್ತಿ, ಪ್ರತಿಮೆಗಳನ್ನು ಮುಟ್ಟುವಂತಿಲ್ಲ. ಹ್ಯಾಂಡ್‌ಶೇಕ್‌ ಮಾಡುವಂತಿಲ್ಲ

- ರೆಸ್ಟೋರೆಂಟ್‌ಗಳಲ್ಲಿ ಶೇ.50ರಷ್ಟುಮಾತ್ರ ಗ್ರಾಹಕರು ಇರಬೇಕು

- ಎಸ್ಕಲೇಟರ್‌ಗಳಲ್ಲಿ ಪ್ರತಿ 2 ಮೆಟ್ಟಿಲುಗಳಿಗೆ ಒಬ್ಬರಂತೆ ತೆರಳಬೇಕು

- ಎ.ಸಿ. ತಾಪಮಾನ 24ರಿಂದ 30 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಬೇಕು

- ಶೌಚಾಲಯಗಳಲ್ಲಿ ಸ್ವಚ್ಛತೆ ಇರಬೇಕು. ನೆಲವನ್ನು ಪದೇ ಪದೇ ಒರೆಸಬೇಕು