ಬೀಜಿಂಗ್‌(ಜೂ.08): ಕೊರೋನಾ ವೈರಸ್‌ ಕುರಿತು ಜಗತ್ತಿಗೆ ಮಾಹಿತಿ ನೀಡುವಲ್ಲಿ ತಡ ಮಾಡಿದೆ ಎಂದು ಎಲ್ಲ ದೇಶಗಳಿಂದ ಆಕ್ರೋಶ ಎದುರಿಸುತ್ತಿರುವ ಚೀನಾ, ಈ ವಿಷಯದಲ್ಲಿ ತಾನೇನೂ ತಪ್ಪು ಮಾಡಿಲ್ಲ ಎಂದು ಸ್ಪಷ್ಟನೆ ನೀಡುವ ಶ್ವೇತಪತ್ರವನ್ನು ಮೊದಲ ಬಾರಿ ಬಿಡುಗಡೆ ಮಾಡಿದೆ.

‘ವುಹಾನ್‌ನಲ್ಲಿ ಕೋವಿಡ್‌-19 ಮೊದಲ ಬಾರಿಗೆ ಕಂಡುಬಂದಿದ್ದು ಡಿಸೆಂಬರ್‌ 27ರಂದು. ಆದರೆ, ಆಗ ಅದು ಸಾಮಾನ್ಯ ನ್ಯುಮೋನಿಯಾ ವೈರಸ್‌ ಎಂದುಕೊಂಡಿದ್ದೆವು. ಕೂಡಲೇ ನಮ್ಮ ದೇಶದ ರಾಷ್ಟ್ರೀಯ ಆರೋಗ್ಯ ಸಮಿತಿ (ಎನ್‌ಎಚ್‌ಸಿ) ಅಧ್ಯಯನ ಕೈಗೊಂಡಿತು. ಆಗ ಈ ವೈರಸ್‌ ಇಲ್ಲಿಯವರೆಗೆ ನಮಗೆ ತಿಳಿದಿರುವ ವೈರಸ್‌ಗಳಿಗಿಂತ ಭಿನ್ನವಾಗಿ ವರ್ತಿಸುತ್ತಿದೆ ಎಂಬುದು ತಿಳಿಯಿತು. ಅದನ್ನು ಜನವರಿ 3ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಗೆ ತಿಳಿಸಿದೆವು.

ಸಾವಿರಾರು ಪ್ಯಾರಾಚೂಟ್‌ಗಳಲ್ಲಿ ಯೋಧರ ಇಳಿಸಿ ಚೀನಾ ಧಿಮಾಕು, ಡಿಜಿಟಲ್ ಬೆದರಿಕೆ!

ಮರುದಿನವೇ ಅಮೆರಿಕಕ್ಕೂ ಮಾಹಿತಿ ನೀಡಿದೆವು. ನಂತರ ಇನ್ನಷ್ಟುಅಧ್ಯಯನ ನಡೆಸಿದಾಗ ಜನವರಿ 19ರಂದು ಇದು ಮನುಷ್ಯರಿಂದ ಮನುಷ್ಯರಿಗೆ ತೀವ್ರ ವೇಗದಲ್ಲಿ ಹರಡುತ್ತದೆ ಎಂಬುದು ಖಚಿತವಾಯಿತು. ಅದನ್ನೂ ಕೂಡಲೇ ಜಗತ್ತಿಗೆ ತಿಳಿಸಿದೆವು. ನಂತರ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದಲ್ಲಿ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಸರ್ಕಾರ ಈ ವೈರಸ್‌ ಹರಡುವುದನ್ನು ತಡೆಯಲು ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಂಡಿತು’ ಎಂದು ಶ್ವೇತಪತ್ರದಲ್ಲಿ ತಿಳಿಸಲಾಗಿದೆ.

ಕೊರೋನಾ ವೈರಸ್‌ ಕುರಿತು ಜಗತ್ತಿಗೆ ಮಾಹಿತಿ ನೀಡುವಲ್ಲಿ ಚೀನಾ ಕೊಂಚವೂ ವಿಳಂಬ ಮಾಡಿಲ್ಲ. ಜನವರಿ 19ಕ್ಕಿಂತ ಮೊದಲು ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ. ಇದಕ್ಕಿಂತ ಮುನ್ನ ವುಹಾನ್‌ಗೆ ತಜ್ಞರ ತಂಡ ಆಗಮಿಸಿ ಅಧ್ಯಯನ ನಡೆಸಿದಾಗ ಇಲ್ಲಿನ ವೆಟ್‌ ಮಾರುಕಟ್ಟೆಯ ಜೊತೆಗೆ ಸಂಪರ್ಕ ಇಲ್ಲದವರಲ್ಲೂ ಸೋಂಕು ಕಾಣಿಸಿಕೊಂಡಿದ್ದು ಪತ್ತೆಯಾಗಿತ್ತು. ಮೊದಲಿಗೆ ಬಾವಲಿ ಮತ್ತು ಪ್ಯಾಂಗೋಲಿನ್‌ಗಳಿಂದ ಇದು ಹರಡುತ್ತದೆ ಎಂದು ಭಾವಿಸಿದ್ದೆವು. ಆದರೆ, ನಂತರ ಅದಕ್ಕೂ ಸಾಕ್ಷ್ಯ ಸಿಗಲಿಲ್ಲ ಎಂದು ಮೊದಲ ಬಾರಿ ಎನ್‌ಎಚ್‌ಸಿಯಿಂದ ವುಹಾನ್‌ನಲ್ಲಿ ಅಧ್ಯಯನ ಕೈಗೊಂಡ ವಿಜ್ಞಾನಿಗಳ ತಂಡದ ಸದಸ್ಯ ವಾಂಗ್‌ ಗೌಂಗ್ಫಾ ತಿಳಿಸಿದ್ದಾರೆ.