ತಿರುವನಂತಪುರ(ಜೂ.08): ಧಾರ್ಮಿಕ ಕೇಂದ್ರಗಳಿಗೆ ಭಕ್ತಾದಿಗಳು ಭೇಟಿ ನೀಡಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆಯ ಅಯ್ಯಪ್ಪ ಹಾಗೂ ಗುರುವಾಯೂರು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಭಕ್ತರ ನಿಯಂತ್ರಣಕ್ಕಾಗಿ ಕೇರಳ ಸರ್ಕಾರ ಆನ್‌ಲೈನ್‌ ಮೊರೆ ಹೋಗಿದೆ.

ಜೂ.14ರಿಂದ ಶಬರಿಮಲೆ ಹಾಗೂ ಜೂ.8ರಿಂದ ಗುರುವಾಯೂರು ಕ್ಷೇತ್ರವು ಭಕ್ತರ ದರ್ಶನಕ್ಕೆ ಮುಕ್ತವಾಗಲಿವೆ. ಆದರೆ, ಕೊರೋನಾ ಸೋಂಕು ನಿಯಂತ್ರಣ ಹಾಗೂ ಭಕ್ತರ ನಡುವೆ ಸಾಮಾಜಿಕ ಅಂತರ ಕಾಪಾಡಲು ವಚ್ರ್ಯುವೆಲ್‌ ಕ್ಯೂ(ಆನ್‌ಲೈನ್‌ ಸರತಿ ಸಾಲು) ವ್ಯವಸ್ಥೆಯನ್ನು ಕೇರಳ ಸರ್ಕಾರ ಜಾರಿ ಮಾಡಿದೆ. ಇದರನ್ವಯ ಈ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಇಚ್ಛಿಸುವ ಭಕ್ತಾದಿಗಳು ಈ ವೆಬ್‌ಸೈಟ್‌ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು.

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ!

ಶಬರಿಮಲೆಯಲ್ಲಿ ಜೂ.14ರಿಂದ 28ರವರೆಗೆ ವಿಶೇಷ ಪೂಜೆ ನಡೆಯಲಿದೆ. ಬೆಳಗಿನ ಜಾವ 4 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಪ್ರತೀ ಗಂಟೆಗೆ 200 ಭಕ್ತರಂತೆ ಒಟ್ಟು 3200 ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಆದರೆ, ಈ ಅವಧಿಯಲ್ಲಿ 10 ವರ್ಷದ ಮಕ್ಕಳು ಮತ್ತು 65 ವರ್ಷದ ಮೇಲಿನ ವೃದ್ಧರಿಗೆ ದೇವಸ್ಥಾನ ಪ್ರವೇಶ ನಿಷಿದ್ಧ. ಜೊತೆಗೆ, ಪಂಪಾ ನದಿಯಲ್ಲಿ ಪುಣ್ಯಸ್ನಾನ ಮತ್ತು ಲಾಡ್ಜಿಂಗ್‌ ಮತ್ತು ಬೋರ್ಡಿಂಗ್‌ ವ್ಯವಸ್ಥೆ ಇರುವುದಿಲ್ಲ ಎಂದು ಕೇರಳ ಸರ್ಕಾರ ಹೇಳಿದೆ.