ಶೋಪಿಯಾನ್(ಅ.12)‌: ಯಾವುದೇ ಶಾಲೆಯ ಹಿರಿಮೆಯನ್ನು ಆ ಶಾಲೆಯ ಮಾಜಿ ವಿದ್ಯಾರ್ಥಿಗಳ ಮೂಲಕ ಕಾಣಬಹುದು. ಜೊತೆಗೆ ಶಾಲೆಗಳು ಕೂಡಾ ತಮ್ಮ ಶಾಲೆಯ ಪ್ರತಿಭಾವಂಥ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಹೊಂದಿರುತ್ತವೆ. ಆದರೆ ಕಾಶ್ಮೀರದ ಶೋಪಿಯಾನ್‌ನ ಶಾಲೆಯೊಂದರ ಮಾಜಿ ವಿದ್ಯಾರ್ಥಿಗಳು ಮಾತ್ರ ಎಲ್ಲರಲ್ಲೂ ಆತಂಕ ಹುಟ್ಟಿಸಿದ್ದಾರೆ. ಕಾರಣ, ಈ ಶಾಲೆಯ 13 ಮಾಜಿ ವಿದ್ಯಾರ್ಥಿಗಳು ವಿವಿಧ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರು!

ಹೌದು. ಶೋಪಿಯಾನ್‌ ಜಿಲ್ಲೆಯ ಧಾರ್ಮಿಕ ಶಿಕ್ಷಣ ಸಂಸ್ಥೆಯೊಂದರ 13 ವಿದ್ಯಾರ್ಥಿಗಳು ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಶಿಕ್ಷಣ ಸಂಸ್ಥೆಯೇ ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳಲ್ಲಿ ಭಯೋತ್ಪಾದನೆ ಸಿದ್ಧಾಂತ ಹರಡಿರಬಹುದು ಎಂಬ ಕಾರಣಕ್ಕೆ ಆ ಶೈಕ್ಷಣಿಕ ಸಂಸ್ಥೆ ಮೇಲೆ ಕೇಂದ್ರ ತನಿಖಾ ತಂಡಗಳು ತೀವ್ರ ನಿಗಾ ವಹಿಸಿವೆ. 2019ರ ಫೆಬ್ರವರಿಯಲ್ಲಿ 40 ಸಿಆರ್‌ಪಿಎಫ್‌ ಯೋಧರ ಬಲಿಗೆ ಕಾರಣವಾದ ಪುಲ್ವಾಮ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿ ಸಜ್ಜದ್‌ ಭಟ್‌ ಸೇರಿದಂತೆ ಇನ್ನಿತರರು ಇದೇ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಹೆಚ್ಚಿನ ಉಗ್ರವಾದಕ್ಕೆ ತುತ್ತಾದ ಶೋಪಿಯಾನ್‌, ಪುಲ್ವಾಮಾ ಜಿಲ್ಲೆಗಳ ಮೂಲದ ವಿದ್ಯಾರ್ಥಿಗಳು ಮತ್ತು ಬೋಧಕರೇ ಇಲ್ಲಿ ಸೇರ್ಪಡೆಯಾಗಿದ್ದಾರೆ. ಸಹಜವಾಗಿಯೇ ಅವರಲ್ಲಿ ಉಗ್ರವಾದ ಮನೆ ಮಾಡಿದೆ. ಜೊತೆಗೆ ಇವರು, ನೆರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಲ್ಲೂ ಅಂಥದ್ದೇ ಚಿಂತನೆ ಬಿತ್ತುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳೂ ಅದಕ್ಕೆ ಪ್ರೇರೇಪಣೆ ನೀಡುತ್ತಿರುವ ಕಾರಣ, ಇಂಥ ಶಾಲೆಗಳು ಉಗ್ರ ಸಂಘಟನೆಗಳಿಗೆ ಹೊಸ ಕಿಡಿಗಳನ್ನು ನೀಡುವ ತಾಣಗಳಾಗಿ ಹೊರಹೊಮ್ಮುತ್ತಿವೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.