ಪಹಲ್ಗಾಂನಲ್ಲಿ ಪ್ರವಾಸಿಗರ ಹತ್ಯೆಗೆ ಬಿಜೆಪಿಯ ದ್ವೇಷ ರಾಜಕಾರಣ ಕಾರಣ ಎಂದು ಶಿವಸೇನೆ (ಠಾಕ್ರೆ ಬಣ) ಆರೋಪಿಸಿದೆ. ವಿಫಲ ಗೃಹಮಂತ್ರಿ ಎಂದು ಕರೆದ ಸಂಜಯ್ ರಾವುತ್, ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಪಾಕ್ ವಾಯುಸೀಮೆ ಬಳಸದೇ ಭಾರತಕ್ಕೆ ಮರಳಿದ್ದಾರೆ. ಖರ್ಗೆ ಮತ್ತು ರಾಹುಲ್ ಗಾಂಧಿ, ಶಾ ಜೊತೆ ಚರ್ಚಿಸಿ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹಿಸಿದ್ದಾರೆ.

370ನೇ ವಿಧಿ ರದ್ದತಿಯ ಬಳಿಕ ಶಾಂತವಾಗಿ, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದ್ದ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಉಗ್ರರ ಬಂದೂಕು ಸದ್ದು ಮಾಡಿದ್ದು, 26 ಪ್ರವಾಸಿಗರನ್ನು ಬಲಿ ಪಡೆದಿದೆ. ಇದರ ವಿರುದ್ಧ ದೇಶಾದ್ಯಂತ ಜನಾಕ್ರೋಶ ಭುಗಿಲೆದ್ದಿದೆ. ಪಾಕ್‌ ಬೆಂಬಲಿತ ಉಗ್ರರ ವಿರುದ್ಧ ವಿದೇಶಗಳಲ್ಲೂ ಕೂಗು ಎದ್ದಿದೆ.

2016ರಲ್ಲಿ ಉರಿ ದಾಳಿ ಬಳಿಕ ನಡೆಸಲಾದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ 2019ರಲ್ಲಿ ಪುಲ್ವಾಮಾ ದಾಳಿ ಬಳಿಕ ಮಾಡಲಾದ ಬಾಲಾಕೋಟ್‌ ವಾಯು ದಾಳಿ ರೀತಿಯಲ್ಲೇ ಈ ಸಲವೂ ಉಗ್ರರ ಮೇಲೆರಗಿ ಬಿಸಿ ಮುಟ್ಟಿಸಬೇಕು. 26 ಜನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂಬ ಬಲವಾದ ಆಗ್ರಹ ದೇಶಾದ್ಯಂತ ಕೇಳಿಬಂದಿದೆ. ಈ ಸಂಬಂಧ ಬುಧವಾರ ಭಾರತದಾದ್ಯಂತ ಪ್ರತಿಭಟನೆ, ಮೆರವಣಿಗೆ, ಖಂಡನಾ ಸಭೆಗಳು ನಡೆದಿವೆ. 35 ವರ್ಷ ಬಳಿಕ ಮೊದಲ ಬಾರಿ ಕಾಶ್ಮೀರದಲ್ಲೂ ಬಂದ್‌ ಆಚರಿಸಿ ಉಗ್ರರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಘಿದೆ.

ಇದಕ್ಕೆ ತಕ್ಕುದಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ‘ಉಗ್ರರನ್ನು ಮಾತ್ರವಲ್ಲ, ಅವರಿಗೆ ತೆರೆಮರೆಯಲ್ಲಿ ಕುಮ್ಮಕ್ಕು ನೀಡಿದವರನ್ನೂ ಬಿಡುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ಸೌದಿ ಅರೇಬಿಯಾ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಭದ್ರತಾ ಲೋಪ ಒಪ್ಪಿಕೊಂಡ ಮೋದಿ ಸರ್ಕಾರ, ಸರ್ಕಾರದ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಎಂದ ವಿಪಕ್ಷ!

 ಅಮಿತ್ ಶಾ ರಾಜೀನಾಮೆಗೆ ಶಿವಸೇನೆ ಆಗ್ರಹ:
ಪಹಲ್ಗಾಂನಲ್ಲಿ 26 ಪ್ರವಾಸಿಗರ ಸಾವಿಗೆ ಬಿಜೆಪಿಯ ದ್ವೇಷದ ರಾಜಕೀಯ ಕಾರಣ. ಅಮಿತ್ ಶಾ ಕೇಂದ್ರ ಗೃಹ ಸಚಿವರಾಗಿ ವಿಫಲರಾಗಿದ್ದು, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು’ ಎಂದು ಶಿವಸೇನೆ (ಠಾಕ್ರೆ ಬಣ) ನಾಯಕ ಸಂಜಯ್ ರಾವುತ್ ಅಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದ ರಾವುತ್, ‘ಸಾಯಿಸುವ ಮುನ್ನ ಉಗ್ರರು ಧರ್ಮ ಯಾವುದು ಎಂದು ಕೇಳಿದರೆ ಇದಕ್ಕೆ ಬಿಜೆಪಿಯ ದ್ವೇಷದ ರಾಜಕಾರಣವೇ ಕಾರಣ. ಇದಕ್ಕೆ ಬೇರೆ ಯಾರು ಹೊಣೆ ಅಲ್ಲ. ಇದು ಜಮ್ಮು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದಲ್ಲಿ ಹರಡುತ್ತಿರುವ ದ್ವೇಷ ರಾಜಕಾರಣದ ಫಲಿತಾಂಶ’ ಎಂದರು.

ಇದರ ಜೊತೆಗೆ ‘ದೇಶದ ಇತಿಹಾಸದಲ್ಲಿಯೇ ಅಮಿತ್ ಶಾ ವಿಫಲ ಗೃಹಮಂತ್ರಿ. ಇಡೀ ದೇಶ ಅವರ ರಾಜೀನಾಮೆ ಬಯಸುತ್ತಿದೆ. ಅವರಿಗೆ ಒಂದು ದಿನವೂ ಈ ಹುದ್ದೆಯನ್ನು ಅಲಂಕರಿಸುವ ಹಕ್ಕಿಲ್ಲ’ ಎಂದರು. ಬಿಹಾರದ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ನಡೆಸಿ ರಾಜಕೀಯ ಮಾಡುತ್ತಿದೆ ಎಂದು ಇದೇ ವೇಳೆ ರಾವುತ್ ಆರೋಪಿಸಿದರು.

ಭಾರತದೊಂದಿಗಿನ ವಿಮಾನಯಾನ ಮತ್ತು ಸರಕು ಸಾಗಣೆ ರದ್ದು ಪಡಿಸಿದ ಪಾಕ್!

ಪಾಕ್ ವಾಯುಸೀಮೆ ಬಳಸದ ಪ್ರಧಾನಿ ಮೋದಿ ವಿಮಾನ
ಜಮ್ಮು ಕಾಶ್ಮೀರದ ಉಗ್ರ ದಾಳಿ ವೇಳೆ ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದ ಹಿಂತಿರುಗುವಾದ ಪಾಕಿಸ್ತಾನದ ವಾಯುಸೀಮೆ ಬಳಸದೇ ಅರಬ್ಬಿ ಸಮುದ್ರದ ಮೇಲೆ ಬಂದು ಭಾರತ ಪ್ರವೇಶಿಸಿದ್ದಾರೆ. ದಾಳಿಗೂ ಮುನ್ನ ಸೌದಿಗೆ ತೆರಳುವಾಗ ಪ್ರಧಾನಿ ಮೋದಿ ಅವರ ಬೋಯಿಂಗ್‌ 777 ವಿಮಾನವು ಪಾಕಿಸ್ತಾನ ವಾಯುಸೀಮೆ ಪ್ರವೇಶಿಸಿ ಸೌದಿಗೆ ತೆರಳಿತ್ತು. ಆದರೆ ಸೌದಿ ಪ್ರವಾಸ ಅರ್ಧದಲ್ಲಿ ಮೊಟಕುಗೊಳಿಸಿ ಭಾರತಕ್ಕೆ ಹಿಂದಿರುಗುವಾಗ ಪಾಕ್‌ ಮೇಲೆ ಹಾರಾಡದೇ ಭಾರತಕ್ಕೆ ಬಂದಿದ್ದಾರೆ.

ಶಾ ಜತೆ ಖರ್ಗೆ, ರಾಗಾ ಚರ್ಚೆ: ಪಹಲ್ಗಾಂ ಸಂತ್ರಸ್ತರಿಗೆ ನ್ಯಾಯಕ್ಕೆ ಆಗ್ರಹ 
ಪಹಲ್ಗಾಂ ದುರಂತದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಜತೆ ಮಾತುಕತೆ ನಡೆಸಿ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹಿಸಿದರು.

ಶಾ ಜತೆಗಿನ ಮಾತುಕತೆ ಬಳಿಕ ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಖರ್ಗೆ, ‘ಈ ಘೋರ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಬಲಿಪಶುಗಳಿಗೆ ನ್ಯಾಯ ಸಿಗಬೇಕು. ಗಡಿಯಾಚೆಗಿನ ಭಯೋತ್ಪಾದಕ ದಾಳಿಗೆ ಸಮರ್ಪಕ ಉತ್ತರ ನೀಡಬೇಕು’ ಎಂದಿದ್ದಾರೆ.

ರಾಹುಲ್ ಗಾಂಧಿ ಕೂಡ ಎಕ್ಸ್‌ ಮುಖೇನ ಪ್ರತಿಕ್ರಿಯಿಸಿದ್ದು, ‘ಉಗ್ರರ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿದೆ. ಪರಿಸ್ಥಿತಿ ಸಹಜವಾಗಿದೆ ಎನ್ನುವ ಪೊಳ್ಳು ಹೇಳಿಕೆ ಬದಲು ಸರ್ಕಾರ ಇದರ ಹೊಣೆ ತೆಗೆದುಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು’ ಎಂದಿದ್ದಾರೆ.