ರಾಜಕೀಯ ವಿಷಯಗಳ ಬಗ್ಗೆ ವಿದೇಶದಲ್ಲಿ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಮಾಧ್ಯಮಗಳ ಮೂಲಕ ಸುದ್ದಿ ತಿಳಿದಿದ್ದೇನೆ, ಬೇರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ದುಬೈ (ಜ.25) ಕಾಂಗ್ರೆಸ್‌ನ ಹಿರಿಯ ನಾಯಕ ಶಶಿ ತರೂರ್ ಅವರ ರಾಜಕೀಯ ನಡೆ ಈಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಕೈ ಪಾಳಯದೊಂದಿಗೆ ಮುನಿಸಿಕೊಂಡಿರುವ ತರೂರ್, ಎಡಪಕ್ಷಗಳತ್ತ ಮುಖ ಮಾಡುತ್ತಿದ್ದಾರೆಯೇ ಎಂಬ ಅನುಮಾನಗಳು ಗಾಢವಾಗಿವೆ.
ದುಬೈ ಭೇಟಿ ಮತ್ತು ತರೂರ್ ನಿಗೂಢ ಮೌನ
ದುಬೈನಲ್ಲಿ ಉದ್ಯಮಿಯೊಬ್ಬರ ಜೊತೆ ಮಾತುಕತೆ ನಡೆಸಿದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ವಿಮಾನದಲ್ಲಿದ್ದಾಗ ಈ ಸುದ್ದಿ ಹಬ್ಬಿದೆ, ವಿದೇಶಿ ನೆಲದಲ್ಲಿ ನಿಂತು ರಾಜಕೀಯ ವಿಷಯಗಳ ಬಗ್ಗೆ ಮಾತನಾಡುವುದು ಸರಿಯಲ್ಲ' ಎಂದು ಹೇಳುವ ಮೂಲಕ ನೇರ ಉತ್ತರ ನೀಡದೆ ಜಾರಿಕೊಂಡಿದ್ದಾರೆ. ಮಾಧ್ಯಮಗಳ ಮೂಲಕವೇ ತಮಗೆ ಈ ವಿಷಯ ತಿಳಿಯಿತು ಎಂದು ಅವರು ಹೇಳಿದ್ದರೂ, ಅವರ ಈ ಮೌನ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸಿಪಿಎಂ ಆಪರೇಷನ್: ಉದ್ಯಮಿ ಮೂಲಕ ಸಂಧಾನ?
ಇತ್ತೀಚೆಗೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ತರೂರ್ ಅವರನ್ನು ಸೆಳೆಯಲು ಸಿಪಿಎಂ ಭರ್ಜರಿ ಪ್ಲಾನ್ ಮಾಡಿದೆ. ಕೇರಳ ಮುಖ್ಯಮಂತ್ರಿಗಳ ಆಪ್ತ ಉದ್ಯಮಿಯೊಬ್ಬರು ದುಬೈನಲ್ಲಿ ತರೂರ್ ಜೊತೆ ಪ್ರಾಥಮಿಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. "ಕಾಂಗ್ರೆಸ್ ತೊರೆದರೆ ಸಿಪಿಎಂ ಆಶ್ರಯ ನೀಡಲು ಸಿದ್ಧವಿದೆ" ಎಂಬ ಸಂದೇಶವನ್ನು ಈ ಮಧ್ಯವರ್ತಿ ರವಾನಿಸಿದ್ದಾರೆ ಎಂಬ ಸುಳಿವು ಸಿಕ್ಕಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ರಾಹುಲ್ ಗಾಂಧಿ ನಡೆ ಮತ್ತು ತರೂರ್ ಆಕ್ರೋಶ
ವಯನಾಡು ಶಿಬಿರದ ನಂತರ ಪಕ್ಷಕ್ಕಾಗಿ ಅಹೋರಾತ್ರಿ ದುಡಿಯಲು ಮುಂದಾಗಿದ್ದ ತರೂರ್ ಅವರಿಗೆ 'ಮಹಾಪಂಚಾಯತ್'ನಲ್ಲಿ ತೀವ್ರ ಅವಮಾನವಾಗಿದೆ ಎನ್ನಲಾಗಿದೆ. ರಾಹುಲ್ ಗಾಂಧಿ ಅವರು ತರೂರ್ ಜೊತೆ ಹಸ್ತಲಾಘವ ಮಾಡದೆ, ಅವರ ಹೆಸರನ್ನು ಪ್ರಸ್ತಾಪಿಸದೆ ನಿರ್ಲಕ್ಷಿಸಿದ್ದು ತರೂರ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಕಾರಣಕ್ಕೆ ದೆಹಲಿಯಲ್ಲಿ ನಡೆದ ಕೇರಳ ನಾಯಕರ ಸಭೆಯನ್ನು ಬಹಿಷ್ಕರಿಸಿದ್ದ ಅವರು, ಈಗ ದುಬೈ ಹಾದಿ ಹಿಡಿದಿರುವುದು ಆಕಸ್ಮಿಕವಲ್ಲ ಎನ್ನಲಾಗುತ್ತಿದೆ.
ಎಡರಂಗದ ಗ್ರೀನ್ ಸಿಗ್ನಲ್: ಅಂತಿಮ ನಿರ್ಧಾರ ಯಾರದ್ದು?
ತರೂರ್ ಅವರ ಸೇರ್ಪಡೆ ಬಗ್ಗೆ ಎಡರಂಗದ ಸಂಚಾಲಕ ಟಿ.ಪಿ. ರಾಮಕೃಷ್ಣನ್ ಅವರು ಪರೋಕ್ಷವಾಗಿ ಒಪ್ಪಿಗೆ ಸೂಚಿಸಿದ್ದಾರೆ. 'ಎಡಪಂಥೀಯ ನಿಲುವನ್ನು ಒಪ್ಪುವ ಯಾರೇ ಆದರೂ ನಮ್ಮ ಪಕ್ಷಕ್ಕೆ ಬರಬಹುದು ಎಂದು ಹೇಳುವ ಮೂಲಕ ಅವರು ತರೂರ್ ಅವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ಅತ್ತ ಹೈಕಮಾಂಡ್ ಮಂಗಳವಾರ ರಾಹುಲ್ ಗಾಂಧಿ ಮೂಲಕ ತರೂರ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದೆ. ಆದರೆ, ತಿರುವನಂತಪುರದ ಸಭೆಗೆ ತರೂರ್ ಗೈರಾಗುತ್ತಿರುವುದು ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
