ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯನ್ನು ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದು, ಇದೊಂದು ನಾಚಿಕೆಗೇಡಿನ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ (ಅ.7): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul gandhi) ಅವರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಶಶಿ ತರೂರ್(Shashi tarooru) ಕೇಂದ್ರ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ. ಸದ್ಯ ಬರ್ಲಿನ್‌ನಲ್ಲಿರುವ ಶಶಿ ತರೂರ್ ಅವರು ರಾಹುಲ್ ಗಾಂಧಿ ಅವರೊಂದಿಗೆ ನಡೆದ ಸಂಘರ್ಷದ ಘಟನೆಯಿಂದ ತಮಗೆ ಬೇಸರವಾಗಿದೆ, ಇದೊಂದು ನಾಚಿಕೆಗೇಡಿನ ಕೃತ್ಯ ಎಂದು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ರಾಹುಲ್ ಗಾಂಧಿ ಪ್ರತಿಭಟನೆ ನಡೆಸುತ್ತಿದ್ದರು. ರಾಹುಲ್ ಗಾಂಧಿ ಅವರೊಂದಿಗೆ ಪ್ರಿಯಾಂಕಾ ಗಾಂಧಿ, ವೇಣುಗೋಪಾಲ್, ಇಂಡಿಯಾ ಮೈತ್ರಿಕೂಟದ ಹಲವು ಸಂಸದರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಶಶಿ ತರೂರ್ ಎಕ್ಸ್ ಪೋಸ್ಟ್‌ನಲ್ಲಿ ಏನು ಬರೆದಿದ್ದಾರೆ?
ಸಂಸದ ಶಶಿ ತರೂರ್ ಅವರು ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು, 'ನವದೆಹಲಿಯಿಂದ ಬಂದಿರುವ ಚಿತ್ರಗಳಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ತಳ್ಳಾಡಿ, ಎಳೆದುಕೊಂಡು ಹೋಗಿ ವಶಕ್ಕೆ ಪಡೆಯುತ್ತಿರುವ ದೃಶ್ಯಗಳನ್ನು ನೋಡಿ ತುಂಬಾ ಬೇಸರವಾಗಿದೆ. ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ಸಂವಿಧಾನಬದ್ಧ ಹಕ್ಕುಗಳನ್ನೂ ಉಲ್ಲಂಘಿಸಲಾಗುತ್ತಿದೆ. ಸರ್ಕಾರದ ಈ ನಡೆ ಅತ್ಯಂತ ನಾಚಿಕೆಗೇಡಿನದ್ದು’ ಎಂದು ಬರೆದಿದ್ದಾರೆ.
ತಡರಾತ್ರಿ ರಾಹುಲ್-ಪ್ರಿಯಾಂಕಾ ವಶಕ್ಕೆ
ಇಂಡಿಯಾ ಮೈತ್ರಿಕೂಟ ಮಂಗಳವಾರ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನಾ ಮೆರವಣಿಗೆ ಆಯೋಜಿಸಿತ್ತು. ಮೈತ್ರಿಕೂಟದ ಸಂಸದರು ಸಂಸತ್ ಭವನದ ಆವರಣದಿಂದ ಚುನಾವಣಾ ಆಯೋಗದ ಕಚೇರಿಯತ್ತ ತೆರಳುತ್ತಿದ್ದರು. ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದರು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಚುನಾವಣಾ ಆಯೋಗದ ಕಚೇರಿಗೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಕಾಶವಾಣಿ ಭವನದಲ್ಲಿ ಕುಳಿತುಕೊಂಡರು. ಅವರು ಹಲವು ಗಂಟೆಗಳ ಕಾಲ ಅಲ್ಲೇ ಇದ್ದರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ನ್ಯೂ ಪೊಲೀಸ್ ಲೈನ್‌ಗೆ ಕರೆದೊಯ್ದರು.


