ಮೆಟ್ರೋದಲ್ಲಿ ವರ್ಷಗಳಿಂದ ಪ್ರಯಾಣಿಕರಿಗೆ ನಿಲ್ದಾಣಗಳ ಹೆಸರನ್ನು ಪರಿಚಯಿಸುತ್ತಿರುವ ಧ್ವನಿ ಯಾರಿಗೆ ತಾನೇ ಗೊತ್ತಿಲ್ಲ? ಆ ಧ್ವನಿಯ ಹಿಂದಿರುವವರು ಖ್ಯಾತ ಅನೌನ್ಸರ್ ಶಮ್ಮಿ ನಾರಂಗ್. ಇದೀಗ ತಮ್ಮ ಮೊಮ್ಮಗ ರುಷಾನ್‌ನ ಮೊದಲ ಮೆಟ್ರೋ ಪ್ರಯಾಣದ ವಿಡಿಯೋ ಹಂಚಿಕೊಂಡಿದ್ದಾರೆ.

ಮೆಟ್ರೋದಲ್ಲಿ ವರ್ಷಗಳಿಂದ ಪ್ರಯಾಣಿಕರಿಗೆ ನಿಲ್ದಾಣಗಳ ಹೆಸರನ್ನು ಪರಿಚಯಿಸುತ್ತಿರುವ ಧ್ವನಿ ಯಾರಿಗೆ ತಾನೇ ಗೊತ್ತಿಲ್ಲ? ಆ ಧ್ವನಿಯ ಹಿಂದಿರುವವರು ಖ್ಯಾತ ಅನೌನ್ಸರ್ ಶಮ್ಮಿ ನಾರಂಗ್. ಇದೀಗ ತಮ್ಮ ಮೊಮ್ಮಗ ರುಷಾನ್‌ನ ಮೊದಲ ಮೆಟ್ರೋ ಪ್ರಯಾಣದ ವಿಡಿಯೋ ಹಂಚಿಕೊಂಡಿರುವ ಅವರು, ನೆನಪಿನಲ್ಲುಳಿಯುವ ಭಾವನಾತ್ಮಕ ಕ್ಷಣವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಶಮ್ಮಿ ನಾರಂಗ್ ಅವರ ಮೊಮ್ಮಗ ರುಷಾನ್ ಮೊದಲ ಬಾರಿಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾನೆ. ಕುಟುಂಬದವರೊಂದಿಗೆ ಯೆಲ್ಲೋ ಲೈನ್‌ನಲ್ಲಿ ಸಂಚರಿಸುತ್ತಿದ್ದ ಪುಟ್ಟ ಬಾಲಕ, ಮೆಟ್ರೋ ನಿಲ್ದಾಣಗಳು, ಪ್ಲಾಟ್‌ಫಾರ್ಮ್‌ಗಳು ಹಾಗೂ ರೈಲಿನ ಒಳಭಾಗವನ್ನು ಕುತೂಹಲದಿಂದ ಗಮನಿಸುತ್ತಿದ್ದ. ಆದರೆ, ಪ್ರಯಾಣದ ವೇಳೆ ಕೇಳಿಬಂದ ಪರಿಚಿತ ಧ್ವನಿಯೇ ಈ ಕ್ಷಣವನ್ನು ವಿಶೇಷವಾಗಿಸಿತು.

ಮೆಟ್ರೋದಲ್ಲಿ ತಾತನ ಧ್ವನಿ ಕೇಳಿ ಅಚ್ಚರಿಗೊಂಡ ಮೊಮ್ಮಗ!

ಮೆಟ್ರೋದಲ್ಲಿ ಎಂದಿನಂತೆ ನಿಲ್ದಾಣಗಳ ಘೋಷಣೆ ಆರಂಭವಾಯಿತು. ಆದರೆ, ಈ ಬಾರಿ ಆ ಧ್ವನಿ ರುಷಾನ್‌ಗೆ ಹೊಸ ಅನುಭವವಾಗಿತ್ತು. ಪ್ರತಿದಿನದ ಜೀವನದಲ್ಲಿ ಪರಿಚಿತವಾಗಿರುವ ತನ್ನ ತಾತನ ಧ್ವನಿಯನ್ನು ಮೆಟ್ರೋ ರೈಲಿನಲ್ಲಿ ಕೇಳಿದ ಪುಟ್ಟ ಬಾಲಕನ ಕುತೂಹಲ ನೋಡುಗರ ಗಮನ ಸೆಳೆಯಿತು. ಪ್ರಯಾಣದ ವೇಳೆ ಶಮ್ಮಿ ನಾರಂಗ್ ತಮ್ಮ ಮೊಮ್ಮಗನನ್ನು ಎತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗುವಿನ ಪೋಷಕರು ಕೂಡ ಆ ಧ್ವನಿ ಯಾರದ್ದು ಎಂಬುದನ್ನು ಗುರುತಿಸುವಂತೆ ಪ್ರೋತ್ಸಾಹಿಸುತ್ತಾರೆ.

ನಿಧಾನವಾಗಿ ತನ್ನ ತಾತನ ಧ್ವನಿಯೇ ಮೆಟ್ರೋದಲ್ಲಿ ಕೇಳಿಬರುತ್ತಿದೆ ಎಂಬುದನ್ನು ಅರಿಯುವ ಮಗುವಿನ ಕ್ಷಣ ಮನಮಿಡಿಯುವಂತಿದೆ. ವಿಡಿಯೋದ ಕೊನೆಯಲ್ಲಿ ಶಮ್ಮಿ ನಾರಂಗ್ ಅವರು ಸುಲ್ತಾನ್‌ಪುರ ನಿಲ್ದಾಣದ ಪರಿಚಿತ ಘೋಷಣೆಯನ್ನು ಸ್ವತಃ ಹೇಳುವ ಮೂಲಕ ಈ ವಿಶೇಷ ಪ್ರಯಾಣಕ್ಕೆ ಮತ್ತಷ್ಟು ಮೆರುಗು ನೀಡಿದ್ದಾರೆ.

'ನನ್ನ ಧ್ವನಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಲಿದೆ'

ಈ ವಿಶೇಷ ಕ್ಷಣದ ಕುರಿತು ಶಮ್ಮಿ ನಾರಂಗ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವನಾತ್ಮಕ ಬರಹವೊಂದನ್ನು ಹಂಚಿಕೊಂಡಿದ್ದಾರೆ. "ನಾನು ಎಂದೆಂದಿಗೂ ಈ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರೊಂದಿಗೆ ಇರಲು ಸಾಧ್ಯವಾಗದಿರಬಹುದು. ಆದರೆ, ನನ್ನ ಧ್ವನಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಲಿದೆ ಎಂಬ ಹೆಮ್ಮೆ ನನಗಿದೆ. ನನ್ನಿಂದ ನನ್ನ ಪುಟ್ಟ ಮೊಮ್ಮಗ ರುಷಾನ್‌ಗೆ, ಬಹುಶಃ ಒಂದು ದಿನ ಅವನ ಮೊಮ್ಮಕ್ಕಳಿಗೂ... ಹೀಗೆ ಮುಂದಿನ ಪೀಳಿಗೆಗಳಿಗೂ ನನ್ನ ಧ್ವನಿ ತಲುಪಬಹುದು" ಎಂದು ಅವರು ಬರೆದುಕೊಂಡಿದ್ದಾರೆ.

ಇಂದು ನಾವು ರುಷಾನ್‌ನನ್ನು ಅವನ ಮೊದಲ ಮೆಟ್ರೋ ಪ್ರಯಾಣಕ್ಕೆ ಕರೆದುಕೊಂಡು ಹೋದೆವು. ರೈಲಿನಲ್ಲಿ ತನ್ನ ತಾತನ ಧ್ವನಿ ಪ್ರತಿಧ್ವನಿಸುವುದನ್ನು ಕೇಳಿ ಅವನು ಅಚ್ಚರಿ ಹಾಗೂ ಕುತೂಹಲದಿಂದ ಪ್ರತಿಕ್ರಿಯಿಸಿದ. ಆ ಧ್ವನಿ ಅವನಿಗೆ ಪರಿಚಿತವಾಗಿತ್ತು. ಆದರೆ, ಈ ಹಿಂದೆ ಇಂತಹ ಸ್ಥಳದಲ್ಲಿ ಅದನ್ನು ಕೇಳಿರಲಿಲ್ಲ. ಇದು ನಮ್ಮ ಪಾಲಿಗೆ ಅತ್ಯಂತ ವಿಶೇಷ ಕ್ಷಣ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ತಾತ-ಮೊಮ್ಮಗನ ವಿಡಿಯೋ

ಶಮ್ಮಿ ನಾರಂಗ್ ಹಂಚಿಕೊಂಡಿರುವ ಈ ವಿಡಿಯೋ ಎಕ್ಸ್‌ನಲ್ಲಿ 60 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕರು ತಾತ ಮತ್ತು ಮೊಮ್ಮಗನ ನಡುವಿನ ಈ ಮಧುರ ಕ್ಷಣವನ್ನು ಮೆಚ್ಚಿಕೊಂಡಿದ್ದಾರೆ. ದೆಹಲಿ ಮೆಟ್ರೋದೊಂದಿಗಿನ ನಾರಂಗ್ ಅವರ ದೀರ್ಘಕಾಲದ ನಂಟು ಮತ್ತು ಮೊಮ್ಮಗನ ಮೊದಲ ಪ್ರಯಾಣ ಒಂದೇ ಕ್ಷಣದಲ್ಲಿ ಬೆಸೆದುಕೊಂಡಿರುವುದು ಹಲವರ ಮನಗೆದ್ದಿದೆ. "ಇದೊಂದು ಸುಂದರವಾದ ಪೂರ್ಣವೃತ್ತದ ಕ್ಷಣ. ಜನರೇಷನ್ ಎಕ್ಸ್‌ನಿಂದ ಜನರೇಷನ್ ಆಲ್ಫಾವರೆಗೆ, ಇದು ಕೇವಲ ಮೆಟ್ರೋ ಪ್ರಯಾಣವಲ್ಲ, ಒಂದು ಪರಂಪರೆಯ ಪಯಣ. ತನ್ನ ತಾತನ ಧ್ವನಿ ರೈಲಿನಲ್ಲಿ ಮೊದಲ ಬಾರಿಗೆ ಪ್ರತಿಧ್ವನಿಸುವುದನ್ನು ಮೊಮ್ಮಗ ಕೇಳುವ ದೃಶ್ಯವೇ ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ನೀಡುತ್ತದೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, "ಅದ್ಭುತವಾಗಿದೆ! ನಿಮ್ಮ ಧ್ವನಿ ಮತ್ತು ಟಿವಿಯಲ್ಲಿನ ನಿಮ್ಮ ಉಪಸ್ಥಿತಿ ನನ್ನ ಬಾಲ್ಯದ ಅಮೂಲ್ಯ ನೆನಪುಗಳ ಭಾಗವಾಗಿದೆ. ನಿಮ್ಮ ಧ್ವನಿ ಖಂಡಿತವಾಗಿಯೂ ಮುಂದಿನ ಪೀಳಿಗೆಗಳಿಗೂ ತಲುಪುವ ಪರಂಪರೆಯಾಗಲಿದೆ" ಎಂದು ಬರೆದುಕೊಂಡಿದ್ದಾರೆ. ವರ್ಷಗಳಿಂದ ಲಕ್ಷಾಂತರ ಪ್ರಯಾಣಿಕರಿಗೆ ಪರಿಚಿತವಾಗಿರುವ ಧ್ವನಿಯನ್ನು ಮೊಮ್ಮಗ ಮೊದಲ ಬಾರಿಗೆ ಮೆಟ್ರೋದಲ್ಲಿ ಕೇಳಿದ ಈ ಘಟನೆ, ತಂತ್ರಜ್ಞಾನ ಮತ್ತು ದೈನಂದಿನ ಪ್ರಯಾಣದ ನಡುವೆಯೂ ಕುಟುಂಬದ ನೆನಪುಗಳು ಎಷ್ಟು ಅಮೂಲ್ಯ ಎಂಬುದನ್ನು ನೆನಪಿಸುವಂತಿದೆ.