ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.

ನವದೆಹಲಿ (ಮೇ.18): ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.

ಅಸ್ಸಾಂ ಯುವ ಕಾಂಗ್ರೆಸ್‌ ಅಧ್ಯಕ್ಷೆ(BV Shrinivas Youth congress president)ಯಾಗಿದ್ದ ಅಂಕಿತಾ ದತ್ತ ಅವರು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣ (sexual harassment) ಸಂಬಂಧ ಗುವಾಹಟಿ ಹೈಕೋರ್ಚ್‌ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಸುಪ್ರೀಂ ಕೋರ್ಟ್(Supreme court of india) ಮೊರೆ ಹೋಗಿದ್ದರು.

ಲೈಂಗಿಕ ದೌರ್ಜನ್ಯ ಕೇಸ್‌: ‘ಕೈ’ ನಾಯಕ ಶ್ರೀನಿವಾಸ್‌ ವಿರುದ್ಧ ಎಫ್‌ಐಆರ್‌; ಅಸ್ಸಾಂ ಪೊಲೀಸರಿಂದ ಬಂಧನ ಸಾಧ್ಯತೆ

ಈ ಕುರಿತು ಬುಧವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಚ್‌, ದೂರುದಾರೆ ದೂರು ದಾಖಲಿಸುವಲ್ಲಿ ಎರಡು ತಿಂಗಳಿಗೂ ಅಧಿಕ ಸಮಯ ವಿಳಂಬ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಶ್ರೀನಿವಾಸ್‌ ಅವರಿಗೆ ನಿರೀಕ್ಷಣಾ ಜಾಮೀನು(Bail) ಮಂಜೂರು ಮಾಡಿದೆ.

ಅಲ್ಲದೆ, ಒಂದು ವೇಳೆ ಅರ್ಜಿದಾರರನ್ನು ಬಂಧಿಸಿದರೆ 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ತನಿಖಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹಾಗೆಯೇ, ಅರ್ಜಿದಾರರು ಮೇ 22ರಂದು ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸುವಂತೆ ನಿರ್ದೇಶಿಸಿರುವ ಸುಪ್ರೀಂ ಕೋರ್ಟ್ , ಅರ್ಜಿಗೆ ಉತ್ತರಿಸುವಂತೆ ಅಸ್ಸಾಂ ಸರ್ಕಾರಕ್ಕೆ ಸೂಚಿಸಿ ಜು.10ಕ್ಕೆ ವಿಚಾರಣೆ ಮುಂದೂಡಿದೆ.

ಪ್ರಕರಣದಲ್ಲಿ ಶ್ರೀನಿವಾಸ್‌ ತನಿಖೆಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅಸ್ಸಾಂ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಂಡಿಸಿದ ವಾದವನ್ನು ಲಘು ಧಾಟಿಯಲ್ಲೇ ಬದಿಗೆ ಸರಿಸಿದ ಸುಪ್ರೀಂ ಕೋರ್ಟ್ , ಅದಕ್ಕೆ ನಿಮ್ಮ ಖ್ಯಾತಿಯೇ ಕಾರಣವಾಗಿರಬಹುದು. ನೀವು ವಿಮಾನ ನಿಲ್ದಾಣದಲ್ಲಿ (ಕಾಂಗ್ರೆಸ್‌ ನಾಯಕ ಪವನ್‌ ಖೇರಾ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದನ್ನು ಪರೋಕ್ಷವಾಗಿ ನೆನಪಿಸುತ್ತಾ) ಬಂಧನ ಮಾಡಿದ್ದೀರಲ್ಲವೇ ಎಂದು ನುಡಿಯಿತು.

ಇನ್ನು ವಿಚಾರಣೆಗೆ ಅಸ್ಸಾಂ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಹಾಜರಾದಾಗ, ನೀವು ಸಿಬಿಐ ಅಥವಾ ಜಾರಿ ನಿರ್ದೇಶನಾಲಯ (ಇ.ಡಿ.) ಪರ ಹಾಜರಾಗುತ್ತಿದ್ದೀರಾ ಎಂದು ನ್ಯಾಯಪೀಠ ಪ್ರಶ್ನಿಸಿತು.

ಅಸ್ಸಾಂ ಸರ್ಕಾರದ ಪರ ರಾಜು ಅವರು ಉತ್ತರಿಸಿದಾಗ, ‘ಸಿಬಿಐ ಮತ್ತು ಇ.ಡಿ. ಇನ್ನೂ ಬಂದಿಲ್ಲವೇ’? ಎಂದು ನ್ಯಾಯಪೀಠ ಲಘುಧಾಟಿಯಲ್ಲಿ ಮರು ಪ್ರಶ್ನೆ ಮಾಡಿತು.

ಮಧ್ಯಂತರ ರಕ್ಷಣೆಗೆ ಶ್ರೀನಿವಾಸ್‌ ಅರ್ಹ:

‘2023ರ ಫೆ.24ರಿಂದ 26ರ ನಡುವೆ ರಾಯ್‌ಪುರ್‌ನಲ್ಲಿ ಶ್ರೀನಿವಾಸ್‌ರಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ದೂರುದಾರೆ ಹೇಳಿದ್ದಾರೆ. ಆದರೆ, ಏಪ್ರಿಲ್‌ನಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುವ ಮುನ್ನ ದೂರುದಾರೆ ಮಾಡಿರುವ ಟ್ವೀಟ್‌ ಹಾಗೂ ಮಾಧ್ಯಮ ಸಂದರ್ಶನದಲ್ಲಿ ಲೈಂಗಿಕ ಕಿರುಕುಳದ ವಿಚಾರವಾಗಿ ಅರ್ಜಿದಾರರ ವಿರುದ್ಧ ಚಕಾರ ಎತ್ತಿರಲಿಲ್ಲ. ಎರಡು ತಿಂಗಳಿಗೂ ಅಧಿಕ ಕಾಲ ದೂರು ದಾಖಲಿಸಲು ವಿಳಂಬ ಮಾಡಿರುವುದನ್ನು ಪರಿಗಣಿಸಿದಾಗ ಅರ್ಜಿದಾರರು ಮಧ್ಯಂತರ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ’ ಎಂದು ತಿಳಿಸಿದ ನ್ಯಾಯಪೀಠ ಶ್ರೀನಿವಾಸ್‌ಗೆ ನಿರೀಕ್ಷಣಾ ಜಾಮೀನು ನೀಡಿದೆ.

ವರುಣಾದಲ್ಲಿ ವಿಜಯೇಂದ್ರ ನಿಂತ್ರೂ ಗೆಲ್ಲೋದು ಸಿದ್ರಾಮಯ್ಯ ಎಂದ ಬಿವಿ ಶ್ರೀನಿವಾಸ್‌!

ರಾಜು ಅವರು ವಾದ ಮಂಡಿಸಿ, ದೂರುದಾರರು ಸಹ ಅರ್ಜಿದಾರರ ಪಕ್ಷದ ಸದಸ್ಯರಾಗಿರುವ ಕಾರಣ ಪ್ರಕರಣವನ್ನು ರಾಜಕೀಯ ಪ್ರೇರಿತ ಎಂಬುದಾಗಿ ವ್ಯಾಖ್ಯಾನಿಸಲಾಗದು. ನೋಟಿಸ್‌ ನೀಡಿದ ಹೊರತಾಗಿಯೂ ತನಿಖಾಧಿಕಾರಿಗಳ ಮುಂದೆ ಅರ್ಜಿದಾರರು ಹಾಜರಾಗಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗವು ಜಾರಿ ಮಾಡಿದ ನೋಟಿಸ್‌ಗೂ ಅರ್ಜಿದಾರರು ಉತ್ತರಿಸಿಲ್ಲ. ಎರಡನೇ ನೋಟಿಸ್‌ ನೀಡಿದಾಗ, ತಾವು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ತಿಳಿಸಿದ್ದರು. ಸತತವಾಗಿ ನೋಟಿಸ್‌ಗಳನ್ನು ಬದಿಗೊತ್ತಿದ್ದಾರೆ ಎಂದು ಆಕ್ಷೇಪಿಸಿದರು.