ನವದೆಹಲಿ(ಡಿ.09): ಕೋವಿಶೀಲ್ಡ್‌ ಕೊರೋನಾ ಲಸಿಕೆ ಖರೀದಿಸಲು ಭಾರತ ಸರ್ಕಾರ ಹಾಗೂ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ನಡುವಿನ ಮಾತುಕತೆ ಅಂತಿಮ ಹಂತಕ್ಕೆ ಬಂದಿದ್ದು, 250 ರು.ಗೆ ಒಂದು ಡೋಸ್‌ ಖರೀದಿಸಲು ಶೀಘ್ರದಲ್ಲೇ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Covid-19 ವಿರುದ್ಧ ಲಸಿಕೆ ಹೋರಾಟ ಆರಂಭ; ಫೈಝರ್ ವ್ಯಾಕ್ಸಿನ್ ಪಡೆದ 2ನೇ ವ್ಯಕ್ತಿ ವಿಲಿಯಂ ಶೇಕ್ಸ್‌ಪಿಯರ್!

ಲಸಿಕೆ ಪೂರೈಸುವ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಈ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿರುವ ಒಬ್ಬರು ಹೇಳಿದರೆ, ಇನ್ನೂ ದರದ ಬಗ್ಗೆ ಚೌಕಾಶಿ ನಡೆಯುತ್ತಿದೆ ಎಂದು ಸರ್ಕಾರದ ಇನ್ನೊಂದು ಮೂಲ ತಿಳಿಸಿದೆ. ಒಪ್ಪಂದ ಏರ್ಪಟ್ಟನಂತರ ಆರಂಭದಲ್ಲಿ 6 ಕೋಟಿ ಡೋಸ್‌ ಸರ್ಕಾರಕ್ಕೆ ಸಿಗಲಿದೆ. ಜನವರಿ-ಫೆಬ್ರವರಿ ವೇಳೆಗೆ 10 ಕೋಟಿ ಡೋಸ್‌ ಸಿಗಲಿದೆ. ನಂತರ ಹಂತ-ಹಂತವಾಗಿ ಇನ್ನಷ್ಟುಲಸಿಕೆಗಳು ಸಿಗಲಿವೆ.

ಸೀರಂ ಕಂಪನಿ ಈಗಾಗಲೇ 4 ಕೋಟಿ ಕೋವಿಶೀಲ್ಡ್‌ ಲಸಿಕೆಯ ಡೋಸ್‌ ತಯಾರಿಸಿಟ್ಟಿದೆ. ಆದರೆ, ಬೇಡಿಕೆ ಬಹಳ ಜಾಸ್ತಿಯಿದೆ. ಭಾರತ ಸರ್ಕಾರಕ್ಕೆ ನೀಡುವುದರ ಜೊತೆಗೆ ಸೀರಂ ಕಂಪನಿಯು ಬಿಲ್‌ ಗೇಟ್ಸ್‌ ಪ್ರತಿಷ್ಠಾನದ ಜೊತೆಗೆ ಮಾಡಿಕೊಂಡ ‘ಗವಿ ಒಪ್ಪಂದ’ದ ಪ್ರಕಾರ ಜಗತ್ತಿನ ಬಡ ಹಾಗೂ ಮಧ್ಯಮ ಆದಾಯದ ದೇಶಗಳಿಗೂ 250 ರು.ಗೆ ಒಂದು ಡೋಸ್‌ನಂತೆ 20 ಕೋಟಿ ಡೋಸ್‌ ಕೋವಿಶೀಲ್ಡ್‌ ಹಾಗೂ ನೋವಾವ್ಯಾಕ್ಸ್‌ ಲಸಿಕೆ ನೀಡಬೇಕಿದೆ. ಸೀರಂ 2021ರಲ್ಲಿ ಒಟ್ಟು 100 ಕೋಟಿ ಡೋಸ್‌ ಕೋವಿಶೀಲ್ಡ್‌ ಲಸಿಕೆ ತಯಾರಿಸಲಿದ್ದು, ಅದರಲ್ಲಿ 50 ಕೋಟಿ ಡೋಸ್‌ ಭಾರತಕ್ಕೆ ಸಿಗಲಿದೆ.

ವಿಶ್ವದ ಮೊದಲ ಫೈಝರ್ ಕೊರೋನಾ ಲಸಿಕೆ ಪಡೆದ 90 ವರ್ಷದ ವೃದ್ಧೆ!

ಗವಿ ಒಪ್ಪಂದದ ಪ್ರಕಾರ ಬಡ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ಲಸಿಕೆ ನೀಡಲು ಬಿಲ್‌ ಗೇಟ್ಸ್‌ ಪ್ರತಿಷ್ಠಾನದಿಂದ ಮತ್ತು ಆಯಾ ದೇಶಗಳಿಂದ ಒಪ್ಪಿಗೆ ಬೇಕಾಗುತ್ತದೆ. ಅಲ್ಲಿಯವರೆಗೆ ಭಾರತಕ್ಕೆ ಮೊದಲ ಹಂತದಲ್ಲಿ ಅಗತ್ಯವಿರುವಷ್ಟುಲಸಿಕೆಗಳನ್ನು ಸೀರಂ ಪೂರೈಸಲು ಸಾಧ್ಯವಿದೆ ಎಂದು ಹೇಳಲಾಗಿದೆ. ಆದ್ಯತಾ ವಲಯದಲ್ಲಿರುವ 3 ಕೋಟಿ ಜನರಿಗೆ ಮೊದಲಿಗೆ ಲಸಿಕೆ ನೀಡಲು ಸರ್ಕಾರಕ್ಕೆ 6 ಕೋಟಿ ಡೋಸ್‌ ಬೇಕಾಗುತ್ತದೆ. ಇಷ್ಟುಲಸಿಕೆ ದೊರೆತರೆ ಅಗತ್ಯ ಸೇವೆಗಳಲ್ಲಿರುವವರು, ಆರೋಗ್ಯ ಕಾರ್ಯಕರ್ತರು, ಮುನ್ಸಿಪಾಲಿಟಿ ಸಿಬ್ಬಂದಿ ಹಾಗೂ ಸಾರ್ವಜನಿಕ ಸಾರಿಗೆ ಸಿಬ್ಬಂದಿಗೆ ಲಸಿಕೆ ನೀಡಬಹುದು. ನಂತರ ಅನಾರೋಗ್ಯವಿರುವವರಿಗೆ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ.

ಮಾಚ್‌ರ್‍ನಲ್ಲಿ ಮೆಡಿಕಲ್‌ ಸ್ಟೋರ್‌ನಲ್ಲಿ ಲಭ್ಯ?

ಮಾಚ್‌ರ್‍-ಏಪ್ರಿಲ್‌ ವೇಳೆಗೆ ಕೋವಿಶೀಲ್ಡ್‌ ಲಸಿಕೆ ಭಾರತದ ಮುಕ್ತ ಮಾರುಕಟ್ಟೆಯಲ್ಲೂ ಸಿಗಲಿದೆ. ಆದರೆ ಅದರ ದರ ಹೆಚ್ಚಿರಲಿದ್ದು, ಒಂದು ಡೋಸ್‌ಗೆ 500-600 ರು. ಇರಬಹುದು ಎಂದು ಸೀರಂ ಸಿಇಒ ಅದರ್‌ ಪೂನಾವಾಲಾ ಸುಳಿವು ನೀಡಿದ್ದಾರೆ.