ಮಾಸಾಂತ್ಯಕ್ಕೆ ಬಾಬ್ರಿ ತೀರ್ಪು ಸಂಭವ: ಅಡ್ವಾಣಿಗೆ ಡವಡವ| ವಿಚಾರಣೆ ಪೂರ್ಣ, ಇಂದಿನಿಂದ ಉಕ್ತಲೇಖನ|  ಜೋಶಿ, ಉಮಾ ಭಾರತಿ, ಕಲ್ಯಾಣ ಸಿಂಗ್‌ ಆರೋಪಿಗಳು

 ಲಖನೌ(ಸೆ.02); 1992ರಲ್ಲಿ ಅಯೋಧ್ಯೆ ರಾಮಜನ್ಮಭೂಮಿಯಲ್ಲಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಮಂಗಳವಾರ ಪೂರ್ಣಗೊಂಡಿದೆ. ಬುಧವಾರದಿಂದ ತೀರ್ಪಿನ ಉಕ್ತಲೇಖನ ಅರಂಭವಾಗಲಿದ್ದು, ಈ ತಿಂಗಳ ಅಂತ್ಯಕ್ಕೆ ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ. ಇದರಿಂದಾಗಿ ಪ್ರಕರಣದಲ್ಲಿ ಆರೋಪಿಗಳಾಗಿರುವ ಬಿಜೆಪಿ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಮತ್ತಿತರರಿಗೆ ಆತಂಕ ಎದುರಾಗಿದೆ.

ರಾಮ ಮಂದಿರ ಕೆಡವಿ ಮತ್ತೆ ಮಸೀದಿ ನಿರ್ಮಿಸುತ್ತೇವೆ; ಎಚ್ಚರಿಕೆ ನೀಡಿದ ಮುಸ್ಲಿಂ ಮೌಲ್ವಿ!

ಪ್ರಕರಣದಲ್ಲಿ 32 ಆಪಾದಿತರಿದ್ದು, ಅವರ ಪರ ವಕೀಲರು ತಮ್ಮ ಅಂತಿಮ ವಾದವನ್ನು ಮಂಡಿಸಿದರು. ಬಳಿಕ ವಿಶೇಷ ನ್ಯಾಯಾಧೀಶ ಎಸ್‌.ಕೆ. ಯಾದವ್‌ ಅವರು ಬುಧವಾರದಿಂದ ತೀರ್ಪಿನ ಉಕ್ತಲೇಖನ ಆರಂಭಿಸುವುದಾಗಿ ತಿಳಿಸಿದರು. ಸುಪ್ರೀಂ ಕೋರ್ಟು ಈ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ ಅಂತ್ಯದ ಒಳಗೆ ಮುಗಿಸಬೇಕು ಎಂದು ಈ ಹಿಂದೆ ಗಡುವು ನೀಡಿತ್ತು. ಹೀಗಾಗಿ ಮಾಸಾಂತ್ಯಕ್ಕೆ ತೀರ್ಪು ಪ್ರಕಟಣೆ ಖಚಿತವಾಗಿದೆ.

ಪ್ರಕರಣದಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ಬಿಜೆಪಿ ಮುಖಂಡರಾದ ವಿನಯ್‌ ಕಟಿಯಾರ್‌, ಸಾಕ್ಷಿ ಮಹಾರಾಜ್‌ ಮೊದಲಾದವರು ಕೂಡ ಪ್ರಮುಖ ಆಪಾದಿತರಾಗಿದ್ದಾರೆ.

ಸಿಬಿಐ ಬಾಬ್ರಿ ಧ್ವಂಸದ ತನಿಖೆ ನಡೆಸಿ 350 ಸಾಕ್ಷಿಗಳನ್ನು ಹಾಜರುಪಡಿಸಿತ್ತು ಹಾಗೂ 600 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿತ್ತು.

'ಬಾಬ್ರಿ ಮಸೀದಿ ಇತ್ತು, ಇದೆ, ಅಲ್ಲೇ ಇರುತ್ತದೆ'

ಮಸೀದಿಯು ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ ಎಂದು 1992ರ ಡಿಸೆಂಬರ್‌ 6ರಂದು ‘ಕರಸೇವಕರು’ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಇದಕ್ಕೆ ಅಡ್ವಾಣಿ ಹಾಗೂ ಇತರ ಬಿಜೆಪಿ ನಾಯಕರೇ ಕುಮ್ಮಕ್ಕು ನೀಡಿದ್ದರು ಎಂದು ಆಪಾದಿಸಲಾಗಿತ್ತು.

ಈಗಾಗಲೇ ಜನ್ಮಭೂಮಿ ವಿವಾದ ಬಗೆಹರಿದಿದ್ದು, ವಿವಾದಿತ ಸ್ಥಳ ರಾಮಜನ್ಮಭೂಮಿ ಎಂದು ಸುಪ್ರೀಂ ಕೋರ್ಟ್‌ ಕಳೆದ ವರ್ಷವೇ ತೀರ್ಪು ನೀಡಿತ್ತು. ಆಗಸ್ಟ್‌ 5ರಂದು ರಾಮಮಂದಿರ ನಿರ್ಮಾಣದ ಭೂಮಿಪೂಜೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೆರವೇರಿತ್ತು.