Asianet Suvarna News Asianet Suvarna News

ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ನಿಂದ ಪ್ರತ್ಯೇಕ ಪಡೆ?

*  ಪ್ರತಿ ಬ್ಲಾಕ್‌ ಮಟ್ಟದಲ್ಲಿ ಸಂಘ ವಿರೋಧಿ ಕಾರ್ಯಕರ್ತರ ನೇಮಕ
*  ಸಾಮಾಜಿಕ ನ್ಯಾಯ ಸಮಿತಿ ಶಿಫಾರಸು ಗಂಭೀರವಾಗಿ ಪರಿಗಣನೆ
*  ಜಿಎಸ್‌ಟಿ ಪರಿಹಾರ ಇನ್ನೂ 3 ವರ್ಷ ವಿಸ್ತರಿಸಿ 
 

Separate Team From Congress Against RSS in India grg
Author
Bengaluru, First Published May 15, 2022, 9:19 AM IST | Last Updated May 15, 2022, 9:19 AM IST

ನವದೆಹಲಿ(ಮೇ.15):  ಬಿಜೆಪಿಯ(BJP) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಲಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಕಾರ್ಯಕರ್ತರ ವಿರುದ್ಧ ತನ್ನದೇ ಆದ ಪಡೆ ಸೃಷ್ಟಿಸುವ ಪ್ರಸ್ತಾಪವನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸುತ್ತಿದೆ. ದೇಶಾದ್ಯಂತ ಪ್ರತಿ ಬ್ಲಾಕ್‌ ಹಂತದಲ್ಲಿ ಸಂಘ ವಿರೋಧಿ ಕಾರ್ಯಕರ್ತರನ್ನು ನೇಮಕ ಮಾಡುವ ಮೂಲಕ ಆರ್‌ಎಸ್‌ಎಸ್‌ ಕಾರ್ಯಕರ್ತರ ತಂತ್ರವನ್ನು ನಿಷ್ಫಲಗೊಳಿಸಲು ಕಾಂಗ್ರೆಸ್‌(Congress) ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿ ಪಕ್ಷದ ಪುನರುತ್ಥಾನಕ್ಕೆ ಹಲವು ಅಂಶಗಳನ್ನು ಸೂಚಿಸಿದ್ದು, ಅದರಲ್ಲಿ ಆರ್‌ಎಸ್‌ಎಸ್‌ ವಿರುದ್ಧ ಕಾರ್ಯಕರ್ತರ ಪಡೆ ಸೃಷ್ಟಿ ಅಂಶವೂ ಇದೆ.
ಇಂತಹ ಕಾರ್ಯಕರ್ತನಿಗೆ ಸ್ಥಳೀಯ ಭಾಷೆ ಗೊತ್ತಿರಬೇಕು. ಸಾಮಾಜಿಕ ಜಾಲತಾಣ(Social Media) ಬಳಕೆ, ಬೂತ್‌ ನಿರ್ವಹಣೆಯಲ್ಲಿ ಪರಿಣತಿ ಹೊಂದಿರಬೇಕು ಎಂದು ಸಮಿತಿ ಸಲಹೆ ಮಾಡಿದೆ.

ಡಿಕೆಶಿ ಗ್ಯಾಂಗ್ ಹಣಿಯಲು ಸಿದ್ದು ಗ್ಯಾಂಗ್ ಹೊಸ ತಂತ್ರ, ಕಾಂಗ್ರೆಸ್‌ನ ಸ್ಫೋಟಕ ರಾಜಕೀಯ ಕಹಾನಿ

ಇದೇ ವೇಳೆ, ಪಕ್ಷದ ಅರ್ಧದಷ್ಟು ಹುದ್ದೆಗಳನ್ನು ದಲಿತರು, ಬುಡಕಟ್ಟು ವರ್ಗ, ಒಬಿಸಿ ಹಾಗೂ ಅಲ್ಪಸಂಖ್ಯಾತರಿಗೆ ನೀಡಬೇಕು. ತೃತೀಯ ಲಿಂಗಿಗಳಿಗೂ ಸಾಕಷ್ಟು ಪ್ರಾತಿನಿಧ್ಯ ಕೊಡಬೇಕು. ಐದು ವರ್ಷಗಳ ಕಾಲ ಎಸ್ಸಿ, ಎಸ್ಟಿ, ಒಬಿಸಿ, ಅಲ್ಪಸಂಖ್ಯಾತ ವಿಭಾಗ ಹಾಗೂ ಮಹಿಳಾ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದವರಿಗೆ ಪಕ್ಷದ ಪ್ರಮುಖ ಸಮಿತಿಗಳಲ್ಲಿ ಸ್ಥಾನ ಕೊಡಬೇಕು. ದೇಶದ ಜನಸಂಖ್ಯೆ, ಗುರುತು, ಅಲ್ಲಿನ ಸಮಸ್ಯೆಗಳು, ದಲಿತರು, ಬುಡಕಟ್ಟು ವರ್ಗ, ಒಬಿಸಿ ಹಾಗೂ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಕುರಿತು ಸರಣಿ ಸಮೀಕ್ಷೆಗಳನ್ನು ನಡೆಸಬೇಕು. ಈ ಅಧ್ಯಯನ ಒಂದು ತಿಂಗಳಲ್ಲಿ ನಡೆಯಬೇಕು. ಈ ಮಾಹಿತಿಯನ್ನು ಎಐಸಿಸಿ, ರಾಜ್ಯ ಹಾಗೂ ಜಿಲ್ಲಾ ಘಟಕಗಳು ಚುನಾವಣೆಗೆ ಬಳಸಬೇಕು ಎಂದು ಹೇಳಿದೆ.

ಜನ ಜಾಗೃತಿ ಅಭಿಯಾನ 2.0 ಆರಂಭಕ್ಕೆ ಕಾಂಗ್ರೆಸ್‌ ಯೋಜನೆ

ಉದಯಪುರ: ಹೆಚ್ಚಾಗುತ್ತಿರುವ ಹಣದುಬ್ಬರ ಸೇರಿದಂತೆ ಕೇಂದ್ರ ಸರ್ಕಾರದ(Central Government) ನೀತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ 2ನೇ ಹಂತರ ಅಭಿಯಾನ ಕುರಿತಂತೆ ಪಕ್ಷದ ಕ್ರಿಯಾ ಯೋಜನೆಯ ಕುರಿತಾಗಿ ಶನಿವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಶುಕ್ರವಾರ ಚರ್ಚೆ ನಡೆಸಿದರು.

ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನಾ ಶಿಬಿರದ 2ನೇ ದಿನ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೀತಿಗಳು, ಹೆಚ್ಚುತ್ತಿರುವ ಹಣದುಬ್ಬರ, ನಿರೋದ್ಯೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 2ನೇ ಹಂತದ ಸಾಮೂಹಿಕ ಸಂಪರ್ಕ ಕಾರ್ಯಕ್ರಮದ ಅವಶ್ಯಕತೆಗಳ ಕುರಿತು ವಿವರಿಸಿದರು. ಈ ಚಿಂತನಾ ಶಿಬಿರದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರು, ಕಾಂಗ್ರೆಸ್‌ನ ನಾಯಕರು ಭಾಗವಹಿಸಿದ್ದರು.

ಜನ ಜಾಗರಣ ಅಭಿಯಾನ 2ನೇ ಹಂತದ ಕ್ರಿಯಾಯೋಜನೆ ತಯಾರಿಸುವ ಸಲುವಾಗಿ ಸಭೆ ಕರೆಯಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ(Rahul Gandhi) ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಆರ್ಥಿಕ ಕುಸಿತ, ನಿರುದ್ಯೋಗ ಮುಂತಾದ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನ.14ರಿಂದ 29ರವರೆಗೆ ಕಾಂಗ್ರೆಸ್‌ ಪಕ್ಷ ಮೊದಲ ಹಂತದ ಜನ ಜಾಗರಣ ಅಭಿಯಾನವನ್ನು ಹಮ್ಮಿಕೊಂಡಿತ್ತು.

ಜಿಎಸ್‌ಟಿ ಪರಿಹಾರ ಇನ್ನೂ 3 ವರ್ಷ ವಿಸ್ತರಿಸಿ: 

ಉದಯ್‌ಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಣ ಆರ್ಥಿಕ ಬಾಂಧವ್ಯದ ಬಗ್ಗೆ ಸಮಗ್ರ ಪರಿಶೀಲನೆಯಾಗಬೇಕು. ಸರಕು ಮತ್ತು ಸೇವಾ ತೆರಿಗೆ (GST) ಅಡಿ ರಾಜ್ಯಗಳಿಗೆ ನೀಡಲಾಗುವ ಪರಿಹಾರವನ್ನು ಇನ್ನೂ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಕಾಂಗ್ರೆಸ್‌ ಪಕ್ಷ ಕೇಂದ್ರ ಸರ್ಕಾರಕ್ಕೆ ಆಗ್ರಹಪಡಿಸಿದೆ.

ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ತೀವ್ರ ಕಳವಳವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಜಾಗತಿಕ ಹಾಗೂ ದೇಶೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು ಆರ್ಥಿಕ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂದು ಒತ್ತಾಯಿಸಿದೆ.

ರಾಜಸ್ಥಾನದ ಉದಯ್‌ಪುರದಲ್ಲಿ ನಡೆಯುತ್ತಿರುವ ಮೂರು ದಿನಗಳ ‘ನವ ಸಂಕಲ್ಪ ಚಿಂತನ ಶಿಬಿರ’ದಲ್ಲಿ ಆರ್ಥಿಕ ನೀತಿಗಳ ಕುರಿತು ಚರ್ಚೆ ನಡೆಸುವ ಸಮಿತಿಯ ಸಂಚಾಲಕರಾಗಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಸುದ್ದಿಗಾರರ ಜತೆ ಮಾತನಾಡಿ ಈ ಸಲಹೆಗಳನ್ನು ನೀಡಿದರು.

ಹಣದುಬ್ಬರ, ನಿರುದ್ಯೋಗಕ್ಕೆ ಸರ್ಕಾರವೇ ತುಪ್ಪ ಸುರಿಯುತ್ತಿದೆ. ರಾಜ್ಯಗಳ ಆರ್ಥಿಕ ಸ್ಥಿತಿ ದುರ್ಬಲವಾಗಿದೆ. ಇದಕ್ಕಾಗಿ ತುರ್ತಾಗಿ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.
ಉಕ್ರೇನ್‌- ರಷ್ಯಾ ಯುದ್ಧದಿಂದಾಗಿ ಹಣದುಬ್ಬರ ಏರಿಕೆಯಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಯುದ್ಧಕ್ಕೂ ಮುನ್ನವೇ ಇಂತಹ ಪರಿಸ್ಥಿತಿ ಇತ್ತು ಎಂದರು.
 

Latest Videos
Follow Us:
Download App:
  • android
  • ios