ತಮಿಳುನಾಡಿಗೆ ಸ್ವಾಯತ್ತೆ ಕೇಳಿದ ಡಿಎಂಕೆ ರಾಜಾ!
* ಪ್ರತ್ಯೇಕ ರಾಜ್ಯ ಕೇಳುವಂತೆ ಮಾಡಬೇಡಿ
* ತಮಿಳುನಾಡಿಗೆ ಸ್ವಾಯತ್ತೆ ಕೇಳಿದ ಡಿಎಂಕೆ ರಾಜಾ
* ಕೇಂದ್ರಕ್ಕೆ ಒತ್ತಾಯ ಬಿಜೆಪಿ ಆಕ್ರೋಶ
ನಮಕ್ಕಲ್ (ತ.ನಾಡು): ಪರೋಕ್ಷವಾಗಿ ಪ್ರತ್ಯೇಕ ರಾಜ್ಯ ಬೇಡಿಕೆ ಇಡುವ ಮೂಲಕ ಡಿಎಂಕೆ ಸಂಸದ ಎ.ರಾಜಾ ವಿವಾದ ಸೃಷ್ಟಿಸಿದ್ದಾರೆ. ಅವರ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ನಮಕ್ಕಲ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಜಾ, ತಮಿಳುನಾಡಿಗೆ ಸ್ವಾಯತ್ತೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸ್ವಾಯತ್ತೆ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಮ್ಮುಖವೇ ಆಗ್ರಹಿಸಿದ್ದಾರೆ.
ಸೈದ್ಧಾಂತಿಕ ನಾಯಕ ಪೆರಿಯಾರ್ ಅವರು ತಮಿಳುನಾಡು ಭಾರತದಿಂದ ಪ್ರತ್ಯೇಕಗೊಳ್ಳಬೇಕು ಎಂದು ಪ್ರತಿಪಾದಿಸಿದ್ದರು. ಪ್ರಜಾಪ್ರಭುತ್ವ ಹಾಗೂ ಭಾರತದ ಏಕತೆಗಾಗಿ ನಾವು ಈ ಬೇಡಿಕೆಯನ್ನು ಬದಿಗೆ ಇಟ್ಟಿದ್ದೆವು. ಆ ಬೇಡಿಕೆಯನ್ನು ಪುನಾ ಇಡುವಂತಹ ಸ್ಥಿತಿಗೆ ನಮ್ಮನ್ನು ದೂಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸುತ್ತೇನೆ. ಹೀಗಾಗಿ ನಮಗೆ ಸ್ವಾಯತ್ತೆ ಕೊಡಿ. ನಾವು ಭಾರತದಲ್ಲಿರುವವರೆಗೂ ತಮಿಳರ ಆರ್ಥಿಕ ಪ್ರಗತಿಯಾಗುವುದಿಲ್ಲ ಅಥವಾ ಅವರಿಗೆ ಉದ್ಯೋಗ ಸಿಗುವುದಿಲ್ಲ ಎಂದು ಹೇಳಿದರು.
ಬಿಜೆಪಿ ತಿರುಗೇಟು:
ರಾಜಾ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. ಡಿಎಂಕೆ ಪ್ರತ್ಯೇಕತಾವಾದಿ ಆಕಾಂಕ್ಷೆಗಳಿಗೆ ಇಂಬು ನೀಡುತ್ತಿದೆ ಎಂದು ಕಿಡಿಕಾರಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವನ್ನು ವಿರೋಧಿಸುವ ಭರದಲ್ಲಿ ಒಂದೇ ಭಾರತ ಎಂಬ ಪರಿಕಲ್ಪನೆಯನ್ನೇ ಇದು ವಿರೋಧಿಸಿದಂತಾಗುವುದಿಲ್ಲವೇ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.