ನವದೆಹಲಿ (ಫೆ.12): ಕೇಂದ್ರ ಸರ್ಕಾರದ 3 ನೂತನ ಕೃಷಿ ಕಾಯ್ದೆಗಳ ಹಿಂಪಡೆತಕ್ಕೆ ಅಕ್ಟೋಬರ್‌ 2ರ ಗಡುವು ವಿಧಿಸಿರುವ ರೈತ ಸಂಘಟನೆಗಳು, ಈ ಸುದೀರ್ಘ ಅವಧಿವರೆಗೆ ಪ್ರತಿಭಟನೆ ನಡೆಸಲು ಸಿಂಘೂ ಗಡಿಯಲ್ಲಿ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ. ಅಲ್ಲದೆ ಪ್ರತಿಭಟನಾ ಸ್ಥಳದಲ್ಲಿ ಮೂಲಸೌಕರ್ಯ ತೆಗೆದು, ಇಂಟರ್ನೆಟ್‌ ಕಡಿತ ಮಾಡಿದ್ದ ಸರ್ಕಾರಕ್ಕೆ ಸಡ್ಡು ಹೊಡೆಯಲು ತಮ್ಮದೇ ಪ್ರತ್ಯೇಕ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ.

ಕಾಯ್ದೆ ರದ್ದಿಲ್ಲ ಎಂಬ ಸರ್ಕಾರ ಸ್ಪಷ್ಟನೆ ಬೆನ್ನಲ್ಲೇ, ರೈತ ಸಂಘಟನೆಗಳು ಕೂಡಾ ತಮ್ಮ ಹೋರಾಟವನ್ನು ತೀವ್ರಗೊಳಿಸುವ ಸುಳಿವು ನೀಡಿವೆ. ಇದಕ್ಕೆ ಉದಾಹರಣೆ ಎಂಬಂತೆ ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಿಗಾ ವಹಿಸಲು 100 ಸಿಸಿ ಕ್ಯಾಮೆರಾಗಳು, ಮುಂಬರುವ ದಿನಗಳಲ್ಲಿ ಎದುರಾಗಲಿರುವ ಬಿರು ಬೇಸಿಗೆಯಿಂದ ರಕ್ಷಣೆಗಾಗಿ ಎಲೆಕ್ಟ್ರಿಕ್‌ ಫ್ಯಾನ್‌ಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ ಮಾಡಿವೆ. ಅಲ್ಲದೆ ಈ ಭಾಗದಲ್ಲಿ ಮತ್ತೆ ಇಂಟರ್ನೆಟ್‌ ಸ್ಥಗಿತಗೊಳ್ಳಬಹುದಾದ ಭೀತಿ ಹಿನ್ನೆಲೆಯಲ್ಲಿ ರೈತರ ವೈಫೈಗಾಗಿ ಪ್ರತ್ಯೇಕ ಆಪ್ಟಿಕಲ್‌ ಫೈಬರ್‌ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ರೈತರು ಮಾಡಿಕೊಂಡಿದ್ದಾರೆ. ಅಲ್ಲದೆ ಸಂಚಾರ ದಟ್ಟಣೆ, ರಾತ್ರಿ-ಹಗಲು ಗಸ್ತು ಕಾಯಲು 600 ಸ್ವಯಂ ಸೇವಕರನ್ನು ಸಹ ನೇಮಿಸಿಕೊಳ್ಳಲಾಗಿದೆ ಎಂದು ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್‌ ಮೋರ್ಚಾ ತಿಳಿಸಿದೆ.

ದೆಹಲಿ ಮಾದರಿಯಲ್ಲಿ ರಾಜ್ಯದಲ್ಲೂ ರೈತ ಹೋರಾಟ ರೂಪಿಸಲು ಸಿದ್ಧತೆ .

ಪ್ರತೀ ನಿತ್ಯ ಪ್ರತಿಭಟನಾ ಸ್ಥಳಗಳಿಗೆ ಸಾವಿರಾರು ಮಂದಿ ಭೇಟಿ ನೀಡಿ, ಮರಳುತ್ತಿದ್ದಾರೆ. ಹೀಗಾಗಿ ಅವರೆಲ್ಲರ ಮೇಲೆ ಕಣ್ಣಿಡಲು ಮುಖ್ಯ ವೇದಿಕೆಯ ಹಿಂಭಾಗದಲ್ಲಿ ನಿಯಂತ್ರಣ ಕೊಠಡಿ ನಿರ್ಮಿಸುತ್ತಿದ್ದೇವೆ. ಜೊತೆಗೆ ಮುಖ್ಯ ವೇದಿಕೆ ಬಳಿ ವಿಡಿಯೋ ರೆಕಾರ್ಡರ್‌ ಸೌಲಭ್ಯ ಹೊಂದಿದ 100 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ಸಂಚಾರ ನಿಯಂತ್ರಣ ಮತ್ತು ರಾತ್ರಿ ಗಸ್ತುಗಾಗಿ 600 ಸ್ವಯಂಸೇವಕರನ್ನೊಳಗೊಂಡ ತಂಡ ರಚಿಸಲಾಗಿದ್ದು, ಇವರನ್ನು ಸುಲಭವಾಗಿ ಗುರುತಿಸಲು ಐಡಿ ಕಾರ್ಡ್‌ ಮತ್ತುಹಸಿರು ಜಾಕೆಟ್‌ಗಳನ್ನು ನೀಡಲಾಗಿದೆ. ಅಲ್ಲದೆ ರೈತ ಮುಖಂಡರ ಭಾಷಣ ವೀಕ್ಷಣೆಗೆ 700-800 ಮೀಟರ್‌ ದೂರದಲ್ಲಿರುವ ರೈತರಿಗೆ ಅನುಕೂಲವಾಗುವಂತೆ 10 ಎಲ್‌ಸಿಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.