ಮೈಸೂರು(ಫೆ.11): ಕೇಂದ್ರದ ಮೂರು ಕೃಷಿ ಕಾಯ್ದೆಗಳೂ ಸೇರಿದಂತೆ ರಾಜ್ಯದ ಎಂಪಿಎಂಸಿ ತಿದ್ದುಪಡಿ, ಭೂಸುಧಾರಣಾ ಕಾಯ್ದೆ, ಕಾರ್ಮಿಕರ ಕಾಯ್ದೆ, ಗೋಹತ್ಯೆ ನಿಷೇಧದ ಕಾಯ್ದೆ ವಿರುದ್ಧ ರಾಜ್ಯದಲ್ಲೂ ದೆಹಲಿ ಮಾದರಿ ಹೋರಾಟ ರೂಪಿಸಲು ಸಂಯುಕ್ತ ಹೋರಾಟ ಸಮಿತಿ ನಿರ್ಧರಿಸಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟದ ರೂಪುರೇಶೆ ವಿವರಿಸಿದರು. ಇದಕ್ಕಾಗಿ ರೈತ ನಾಯಕ ರಾಕೇಶ್‌ ಟಿಕಾಯತ್‌ ಅವರ ಸಮಯ ಕೇಳಲಾಗಿದ್ದು, ಫೆಬ್ರವರಿ ಕೊನೆಯ ವಾರ ಅಥವಾ ಮಾಚ್‌ರ್‍ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ 48 ರೈತ ಸಂಘಟನೆಗಳಡಿ ಒಂದು ಸಾವಿರ ಮುಖಂಡರ ಸಭೆ ನಡೆಯಲಿದೆ. ಮರುದಿನವೇ ಉತ್ತರ ಕರ್ನಾಟಕ ಹುಬ್ಬಳ್ಳಿಯಲ್ಲಿ 25 ಸಾವಿರ ರೈತರನ್ನು ಸೇರಿಸಿ ಬಹಿರಂಗ ಸಭೆ ನಡೆಸಲಾಗುವುದು. ಬಜೆಟ್‌ ಮಂಡನೆಯಾದ ನಂತರ ಚರ್ಚೆ ನಡೆಯುವ ಕಾಲಕ್ಕೆ ಅಂದರೆ ರಾಮ್‌ಮನೋಹರ್‌ ಲೋಹಿಯಾ ಹಾಗೂ ಭಗತ್‌ಸಿಂಗ್‌ ಅವರ ಜನ್ಮದಿನದಂದು 50 ಸಾವಿರ ಮಂದಿಯನ್ನು ಸೇರಿಸಿ ವಿಧಾನಸೌಧ ಚಲೋ ನಡೆಸಲಾಗುವುದು ಎಂದರು.

ಸಿದ್ದರಾಮಯ್ಯ ಹೊಸ ರಾಜಕೀಯ ಆಟ: ಉಳಿದವರಲ್ಲಿ ಶುರುವಾಯ್ತು ತಳಮಳ

150 ತಾಲೂಕು ಕೇಂದ್ರಗಳಲ್ಲಿ ಸಭೆ: 

ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟದ ಹೆಸರಿನಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮಿತಿಯ ಮಾದರಿದಲ್ಲಿ ಈ ಹೋರಾಟ ರೂಪಿಸಲು ಫೆ.7 ರಂದು ಬೆಂಗಳೂರಿನಲ್ಲಿ ನಡೆದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದಕ್ಕೂ ಮೊದಲು ರಾಜ್ಯದ 150 ತಾಲೂಕು ಕೇಂದ್ರಗಳಲ್ಲಿ ರೈತರ ಸಂಘಟನಾ ಸಭೆಗಳನ್ನು ನಡೆಸಲಾಗುವುದು ಎಂದರು.

ಪ್ರಕಾಶ್‌ ಕಮ್ಮರಡಿ ನೇತೃತ್ವದ ಕೃಷಿ ಬೆಲೆ ನಿಗದಿ ಆಯೋಗವು 22 ಬೆಳೆಗಳ ಸ್ಥಿರತೆ ಕಾಪಾಡಲು ಎಂಎಸ್‌ಪಿಗೆ ಸೂಚಿಸಿದೆ. ಅದು ಕಾರ್ಯಗತವಾಗಿಲ್ಲ. ಕಳೆದ 21 ವರ್ಷಗಳಲ್ಲಿ ರಾಜ್ಯದಲ್ಲಿ 13 ವರ್ಷ ಬರಗಾಲ, ಎರಡು ವರ್ಷ ಪ್ರವಾಹದಿಂದ ನಷ್ಟವಾಗಿದೆ. ಇದಕ್ಕೆ 2 ಲಕ್ಷ ಕೋಟಿ ಪರಿಹಾರ ನೀಡಬೇಕು ಎಂದು ಕೇಂದ್ರಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಅವರು ಹೇಳಿದರು.