ಅಯೋಧ್ಯೆ(ಜ.18): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಆಗಾಗ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಖುದ್ದು ತಾವೇ ದೇಗುಲ ನಿರ್ಮಾಣಕ್ಕೆ 1,11,111 ರೂ. ದೇಣಿಗೆ ನೀಡಿದ್ದಾರೆ. ಅದಕ್ಕೂ ಅಚ್ಚರಿಯ ವಿಚಾರವೆಂದರೆ ಅವರು ಪದೇ ಪದೇ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸಂಬಂಧಿಸಿದಂತೆ ಸವಾಲೆಸೆಯುತ್ತಿದ್ದರು. 

ಇನ್ನು ಜನವರಿ 15 ರಿಂದ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರಕ್ಕೆ ದೇಶಾದ್ಯಂತ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮ ಆರಂಭವಾಗಿದ್ದು, ಕೇವಲ ಮೂರು ದಿನದಲ್ಲಿ ನೂರು ಕೋಟಿ ರೂಪಾಯಿಗಿಂತ ಅಧಿಕ ಮೊತ್ತ ಸಂಗ್ರಹವಾಗಿದೆ. ಈ ಅಭಿಯಾನದಡಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸುಮಾರು ಐದು ಲಕ್ಷದ ಐವತ್ತು ಸಾವಿರ ಕಾರ್ಯಕರ್ತರು ದೇಶದ ಹಳ್ಳಿ ಹಳ್ಳಿಗೂ ತೆರಳಿ ದೇಣಿಗೆ ಸಂಗ್ರಹಿಸಲಿದ್ದಾರೆ. ಒಟ್ಟು 13 ಲಕ್ಷ ಮಂದಿಯಿಂದ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ಕೋವಿಂದ್ ಕೂಡಾ ಐದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. 

ದಿಗ್ವಿಜಯ್ ಸಿಂಗ್‌ರವರು ದೇಣಿಗೆಯ ಚೆಕ್ ನರೇಂದ್ರ ಮೋದಿ ಮೂಲಕ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡಿದ್ದಾರೆ. ದಿಗ್ವಿಜಯ್ ಸಿಂಗ್ ಮೋದಿಗೆ ಪತ್ರವನ್ನೂ ಬರೆದಿದ್ದಾರೆ. ಇದರಲ್ಲಿ ದೇಣಿಗೆ ಸಂಗ್ರಹಿಸುವ ಕೆಲಸ ಸೌಹಾರ್ದಯುತವಾಗಿ ನಡೆಸಲು ಆಗ್ರಹಿಸಿದ್ದಾರೆ. ಜೊತೆಗೆ ವಿಶ್ವ ಹಿಂದೂ ಪರಿಷದ್‌ನ ಈ ಹಿಂದಿನ ದೇಣಿಗೆಯ ವಿವರವನ್ನು ಜನರೆದುರು ಇಡಲು ಸೂಚಿಸಿದ್ದಾರೆ.