PUBG ಲವರ್ ಸೀಮಾ ಹೈದರ್ ಸೋದರ, ಅಂಕಲ್ ಪಾಕ್ ಸೇನೆಯಲ್ಲಿ ಕೆಲಸ: ಪಾಕ್ ಮಹಿಳೆ ಬಗ್ಗೆ ಮತ್ತಷ್ಟು ಅನುಮಾನ
ವಿಚಾರಣೆಯ ಸಮಯದಲ್ಲಿ, ಸೀಮಾ ಹೈದರ್ ತನ್ನ ಸಹೋದರ ಪಾಕಿಸ್ತಾನಿ ಸೈನ್ಯಕ್ಕೆ ಸೇರಿದ್ದ ಬಗ್ಗೆ ಬಹಿರಂಗಪಡಿಸಿದ್ದಾಳೆ. ಕೋಡ್ ವರ್ಡ್‌ಗಳ ಬಗ್ಗೆಯೂ ಎಟಿಎಸ್ ತನಿಖೆಯಲ್ಲಿ ಸೀಮಾ ಹೈದರ್‌ಳನ್ನು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ (ಜುಲೈ 19, 2023): ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ಇರಲು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಯುಪಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಜೊತೆಗಿನ ಸಂಭಾವ್ಯ ಸಂಪರ್ಕದ ಕುರಿತು ಎಟಿಎಸ್ ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಆಕೆಯನ್ನು ತನಿಖೆ ನಡೆಸುತ್ತಿದೆ.
ತನ್ನ ವಿಚಾರಣೆಯ ಸಮಯದಲ್ಲಿ, ಸೀಮಾ ಹೈದರ್ ತನ್ನ ಸಹೋದರ ಪಾಕಿಸ್ತಾನಿ ಸೈನ್ಯಕ್ಕೆ ಸೇರಿದ್ದ ಬಗ್ಗೆ ಬಹಿರಂಗಪಡಿಸಿದ್ದಾಳೆ. ಆದರೆ ಅವನು ಇನ್ನೂ ಸೇವೆ ಸಲ್ಲಿಸುತ್ತಿದ್ದಾನಾ ಅಥವಾ ಮಿಲಿಟರಿಯನ್ನು ತೊರೆದಿದ್ದಾನೆಯೇ ಎಂದು ಖಚಿತವಾಗಿ ತಿಳಿದಿಲ್ಲ ಎಂದು ಹೇಳಿಕೊಂಡಿದ್ದಾಳೆ. ಕೋಡ್ ವರ್ಡ್‌ಗಳ ಬಗ್ಗೆಯೂ ಎಟಿಎಸ್ ತನಿಖೆಯಲ್ಲಿ ಸೀಮಾ ಹೈದರ್‌ಳನ್ನು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: PubG ಲವ್: ಪಾಕ್ ಮಹಿಳೆ ವಾಪಸ್ ಕಳಿಸದಿದ್ದರೆ ಭಾರತದಲ್ಲಿ ಮತ್ತೊಂದು 26/ ಉಗ್ರ ದಾಳಿ; ಪೊಲೀಸರಿಗೆ ಬಂತು ಬೆದರಿಕೆ ಕರೆ!
ಈ ಸಂಬಂಧ ಅಧಿಕಾರಿಗಳು ಸೀಮಾ ಹೈದರ್ ಅವರ ಹೇಳಿಕೆಗಳನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿದುಬಂದಿದೆ. ಜತೆಗೆ, ಸಿಮಾ ಹೈದರ್ ಅವರ ಸಹೋದರ ಆಸಿಫ್ ಮತ್ತು ಅವರ ಚಿಕ್ಕಪ್ಪ ಗುಲಾಮ್ ಅಕ್ಬರ್ ಪಾಕಿಸ್ತಾನದ ಸೇನೆಯಲ್ಲಿದ್ದಾರೆ ಎಂದು ಮಹಿಳೆಯ ಮಾಜಿ ಪತಿ ಗುಲಾಂ ಹೈದರ್ ಸಹ ತಿಳಿಸಿದ್ದಾರೆ. ಕರಾಚಿಯಲ್ಲಿ ನಿಯೋಜಿತರಾಗಿರುವ ಸೀಮಾ ಹೈದರ್ ಅವರ ಸಹೋದರ ಆಸಿಫ್ ಅವರನ್ನು ಭೇಟಿಯಾಗಿದ್ದೆವು ಮತ್ತು ಅವರು ಆಗಾಗ್ಗೆ ಮಾತನಾಡುತ್ತಿದ್ದರು ಎಂದೂ ಅವರು ಹೇಳಿದರು.
ಸೀಮಾ ಹೈದರ್ ಅವರ ಚಿಕ್ಕಪ್ಪ ಪಾಕಿಸ್ತಾನದ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ ಮತ್ತು ಇಸ್ಲಾಮಾಬಾದ್‌ನಲ್ಲಿ ನೆಲೆಸಿದ್ದಾರೆ ಎಂದೂ ಗುಲಾಮ್ ಹೈದರ್ ಹೇಳಿದ್ದಾರೆ.
ಇದನ್ನೂ ಓದಿ: PubG ಲವ್: ನಾನೀಗ ಹಿಂದೂ, ಭಾರತವೀಗ ನಂದೇ ಎಂದ ಪಾಕ್‌ನಿಂದ ಓಡಿ ಬಂದ ಮಹಿಳೆ!
ಐಎಸ್‌ಐ ಜತೆ ಸಂಪರ್ಕದಲ್ಲಿದ್ದಾಳಾ ಸೀಮಾ ಹೈದರ್?
ಲಖನೌ: ಪಬ್‌ಜಿ ಆಡುವಾಗ ಪರಿಚಯವಾಗಿದ್ದ ತನ್ನ ಭಾರತದ ಗೆಳೆಯನಿಗಾಗಿ ಅಕ್ರಮವಾಗಿ ಭಾರತಕ್ಕೆ ಬಂದಿರುವ ವಿವಾಹಿತ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಳನ್ನು ಉತ್ತರ ಪ್ರದೇಶದ ಪೊಲೀಸರು ಮಂಗಳವಾರ ಮತ್ತೊಮ್ಮೆ ವಿಚಾರಣೆಗೊಳಪಡಿಸಿದ್ದಾರೆ.
ಸೀಮಾ ಪಾಕಿಸ್ತಾನ ಸೇನೆ ಅಥವಾ ಅಲ್ಲಿನ ಗುಪ್ತಚರ ಇಲಾಖೆ ಐಎಸ್‌ಐ ಜತೆ ಸಂಪರ್ಕದಲ್ಲಿದ್ದಾಳಾ ಎಂಬ ಶಂಕೆಯ ಮೇರೆಗೆ ತನಿಖೆ ನಡೆಸುತ್ತಿರುವ ಪೊಲೀಸರ ಭಯೋತ್ಪಾದಕ ನಿಗ್ರಹ ತಂಡ (ಎಟಿಎಸ್) ಇದರ ಭಾಗವಾಗಿ ಆಕೆಯ ಪ್ರಿಯಕರ ಸಚಿನ್ ಮೀನಾ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್‌ನನ್ನೂ ನೊಯ್ಡಾದಲ್ಲಿ ವಿಚಾರಣೆ ನಡೆಸಿದೆ.
ಸೋಮವಾರ ಸೀಮಾ ಮತ್ತು ಸಚಿನ್‌ರನ್ನು ಎಟಿಎಸ್ 6 ತಾಸುಗಳ ಕಾಲ ವಿಚಾರಣೆ ನಡೆಸಿತ್ತು. ಆಕೆಯ ಮೊಬೈಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ನೊಯ್ಡಾ ನಿವಾಸಿ ಸಚಿನ್‌ಗಾಗಿ ಕಳೆದ ಮೇ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ಸೀಮಾ ಈಗ ಆತನೊಂದಿಗೆ ವಾಸಿಸುತ್ತಿದ್ದಾಳೆ.
ಸೀಮಾಗಾಗಿ 26/11 ಮಾದರಿ ದಾಳಿ: ಅಪರಿಚಿತನ ಮೇಲೆ ಕೇಸು
ಇನ್ನು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ಳನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ 26/11ರ ಮುಂಬೈ ದಾಳಿ ರೀತಿಯೇ ಮತ್ತೆ ದಾಳಿ ನಡೆಸಲಾಗುವುದು ಎಂದು ಮುಂಬೈ ಪೊಲೀಸರ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.