ಮುಜಫ್ಫರ್‌ನಗರ(ಮೇ.19): ಉತ್ತರ ಪ್ರದೇಶಕ್ಕೆ ತೆರಳುವಾಗ ಮಾರ್ಗಮಧ್ಯೆ ಹಿಂದು ಸ್ನೇಹಿತನ ಪ್ರಾಣ ಉಳಿಸಲು ಟ್ರಕ್‌ನಿಂದ ಜಿಗಿದು, ರಸ್ತೆಯ ಪಕ್ಕದಲ್ಲಿ ಸ್ನೇಹಿತನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆರೈಕೆ ಮಾಡಿದ ಮುಸ್ಲಿಂ ಯವಕನ ತ್ಯಾಗವನ್ನು ನೋಡಿದಿರಿ. ಅದರ ಬೆನ್ನಲ್ಲೇ, ಕ್ವಾರಂಟೈನ್‌ನಲ್ಲಿ ಸ್ನೇಹಿತನಾದ ಅಂಗವಿಕಲ ಮುಸ್ಲಿಂ ವ್ಯಕ್ತಿಯನ್ನು ಮನೆಗೆ ತಲುಪಿಸಲು ಹಿಂದು ಯುವಕನೊಬ್ಬ ಮಹಾರಾಷ್ಟ್ರಕ್ಕೆ ಹೋಗುವ ಬದಲು ಉತ್ತರ ಪ್ರದೇಶಕ್ಕೆ ತೆರಳಿದ ಇನ್ನೊಂದು ಮನ ಮಿಡಿಯುವ ಘಟನೆ ಬೆಳಕಿಗೆ ಬಂದಿದೆ.

ಸಾವಿನ ನೋವಿನ ಯಾಕೂಬ್- ಅಮೃತ್ ಸ್ನೇಹ ವೈರಲ್‌!

ಉತ್ತರ ಪ್ರದೇಶ ಮೂಲದ ಅಂಗವಿಕಲ ಬಡಗಿ ಗಯೂರ್‌ ಅಹ್ಮದ್‌ (40) ಹಾಗೂ ಮಹಾರಾಷ್ಟ್ರದ ನಾಗಪುರದ ಪ್ರವಾಸಿಗ ಅನಿರುದ್ಧ ಝಾರೆ (28) ಜೋಧಪುರದ ಕ್ವಾರಂಟೈನ್‌ ಕೇಂದ್ರದಲ್ಲಿ ಸ್ನೇಹಿತರಾದರು. ಅಲ್ಲಿ ಕ್ವಾರಂಟೈನ್‌ ಮುಗಿದ ನಂತರ ರಾಜಸ್ಥಾನ ಸರ್ಕಾರ ಅವರನ್ನು ಭರತ್‌ಪುರ ಬಳಿ ಹೆದ್ದಾರಿಯಲ್ಲಿರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಗಡಿಯ ಬಳಿಗೆ ವಾಹನದಲ್ಲಿ ಕರೆದೊಯ್ದು ಬಿಟ್ಟಿತು.

ಅಲ್ಲಿಂದ ಗಯೂರ್‌ ಉತ್ತರ ಪ್ರದೇಶದ ಮುಜಫ್ಫರ್‌ನಗರಕ್ಕೂ, ಅನಿರುದ್ಧ ಮಹಾರಾಷ್ಟ್ರದ ನಾಗಪುರಕ್ಕೂ ಹೋಗಬೇಕಾಗಿತ್ತು. ಆದರೆ, ಅಂಗವಿಕಲ ಗಯೂರ್‌ ತನ್ನ ಟ್ರೈಸಿಕಲ್‌ ತಳ್ಳಲು ಪರದಾಡುತ್ತಿದ್ದುದನ್ನು ನೋಡಿದ ಅನಿರುದ್ಧಗೆ ಅಯ್ಯೋ ಅನ್ನಿಸಿತು. ಗಯೂರ್‌ನನ್ನು ಮನೆಗೆ ತಲುಪಿಸಲು ನಿರ್ಧರಿಸಿದ ಆತ, ಸತತ 5 ದಿನಗಳ ಕಾಲ 350 ಕಿ.ಮೀ. ದೂರದವರೆಗೆ ಟ್ರೈಸಿಕಲ್‌ ತಳ್ಳಿಕೊಂಡು ಮುಜಫ್ಫರ್‌ನಗರಕ್ಕೆ ತೆರಳಿದ್ದಾನೆ.

ನನ್ನ ಭಾರತ: ದೇಗುಲ ರಕ್ಷಿಸಿದ ಮುಸಲ್ಮಾನರು, ಮಸೀದಿಗೆ ಕಾವಲು ನಿಂತ ಹಿಂದೂಗಳು!

ಅನಿರುದ್ಧನ ಈ ತ್ಯಾಗಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಲಾಕ್‌ಡೌನ್‌ ಮುಗಿಯುವವರೆಗೂ ನೀನು ಇಲ್ಲೇ ಇರು ಎಂದು ಗಯೂರ್‌ನ ಕುಟುಂಬ ಬಲವಂತ ಮಾಡಿ ಅವನನ್ನು ಮುಜಫ್ಪರ್‌ಪುರದಲ್ಲೇ ಉಳಿಸಿಕೊಂಡಿದೆ.