ಸಾವಿನ ನೋವಿನ ಯಾಕೂಬ್- ಅಮೃತ್ ಸ್ನೇಹ ವೈರಲ್!
ಸಾವಿನ ನೋವಿನ ಹಿಂದು-ಮುಸ್ಲಿಂ ಸ್ನೇಹ ವೈರಲ್| ಗೆಳೆಯನ ರಕ್ಷಿಸಲು ಟ್ರಕ್‌ನಿಂದ ಜಿಗಿದ ವಲಸೆ ಕಾರ್ಮಿಕ| ತೊಡೆ ಮೇಲೆ ಮಲಗಿಸಿಕೊಂಡು ನೆರವಿಗೆ ಮೊರೆ| ಹೃದಯವಿದ್ರಾವಕ ಘಟನೆ ಸಾವಿನಲ್ಲಿ ಅಂತ್ಯ| ಗುಜರಾತಿಂದ ಉತ್ತರಪ್ರದೇಶಕ್ಕೆ ಹೊರಟಿದ್ದ ಕಾರ್ಮಿಕ ಸಾವು
ಭೋಪಾಲ್(ಮೇ.18): ಆ ಟ್ರಕ್‌ನಲ್ಲಿ 50-60 ಜನರಿದ್ದರು. ಎಲ್ಲರೂ ವಲಸೆ ಕಾರ್ಮಿಕರು. ಗುಜರಾತ್‌ನ ಸೂರತ್‌ನಿಂದ ಉತ್ತರ ಪ್ರದೇಶದಲ್ಲಿರುವ ತಮ್ಮೂರಿಗೆ ಹೊರಟಿದ್ದರು. ಸಾವಿರಾರು ಕಿ.ಮೀ. ಪ್ರಯಾಣ. ನಿಂತುಕೊಂಡು ಹೋಗುವುದಕ್ಕೇ ಅವರೆಲ್ಲ ತಲಾ 4000 ರು. ಪಾವತಿಸಿದ್ದರು! ಈ ಪ್ರಯಾಣದ ಮಧ್ಯೆ ನಡೆದ ಘಟನೆಯೊಂದು ಇಂಟರ್ನೆಟ್‌ನಲ್ಲೀಗ ವೈರಲ್ ಆಗಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಟ್ರಕ್ ಸಾಗುತ್ತಿದ್ದಾಗ ಅಮೃತ್ ಎಂಬ ಕಾರ್ಮಿಕನಿಗೆ ವಾಂತಿ ಆರಂಭವಾಗಿದೆ. ಕೊರೋನಾ ಇರಬಹುದು ಎಂದು ಹೆದರಿದ ಇತರ ಕಾರ್ಮಿಕರು ಬಲವಂತ ಮಾಡಿ ಅವನನ್ನು ಇಳಿಸಿದ್ದಾರೆ. ಟ್ರಕ್ ಮುಂದೆ ಹೊರಡುತ್ತಿದ್ದಂತೆ ಅದರಲ್ಲಿದ್ದ ಅವನ ಸ್ನೇಹಿತ ಯಾಕೂಬ್ ಮೊಹಮ್ಮದ್ ಕೆಳಗೆ ಜಿಗಿದು ಅಮೃತ್‌ನ ರಕ್ಷಣೆಗೆ ಧಾವಿಸಿದ್ದಾನೆ. ಅಮೃತ್ ಉಸಿರಾಡಲು ಕಷ್ಟಪಡುತ್ತಿದ್ದಾಗ ರಸ್ತೆ ಬದಿಯಲ್ಲಿ ತೊಡೆ ಮೇಲೆ ತಲೆಯಿರಿಸಿಕೊಂಡು ಆರೈಕೆ ಮಾಡುತ್ತ ಸಹಾಯಕ್ಕಾಗಿ ಯಾಚಿಸಿದ್ದಾನೆ. ಅದನ್ನೊಬ್ಬ ಫೋಟೋ ತೆಗೆದು ಸೋಷಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದಾನೆ.
ನನ್ನ ಭಾರತ: ದೇಗುಲ ರಕ್ಷಿಸಿದ ಮುಸಲ್ಮಾನರು, ಮಸೀದಿಗೆ ಕಾವಲು ನಿಂತ ಹಿಂದೂಗಳು!
ನಂತರ ದಾರಿಹೋಕರೊಬ್ಬರು ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಶಿವಪುರಿ ಜಿಲ್ಲಾಸ್ಪತ್ರೆಯಲ್ಲಿ ಕೃತಕ ಉಸಿರಾಟ ನೀಡಿದರೂ ಅಮೃತ್ ಕೆಲವೇ ಗಂಟೆಯಲ್ಲಿ ಸಾವನ್ನಪ್ಪಿದ್ದಾನೆ. ಸ್ನೇಹಿತರಿಬ್ಬರಿಗೂ ಕೊರೋನಾ ಟೆಸ್ಟ್ ಮಾಡಿದ್ದು, ವರದಿ ಬರುವವರೆಗೆ ಯಾಕೂಬ್‌ಗೆ ಆಸ್ಪತ್ರೆಯಲ್ಲೇ ಇರಲು ಸೂಚಿಸಲಾಗಿದೆ. ಶವಾಗಾರದಲ್ಲಿರುವ ಗೆಳೆಯನ ಶವವನ್ನು ಯಾವಾಗ ತನಗೆ ಹಸ್ತಾಂತರಿಸುತ್ತಾರೆಂದು ಕಾಯುತ್ತಾ ಯಾಕೂಬ್ ಅಲ್ಲೇ ಇದ್ದಾನೆ. ಗೆಳೆಯನನ್ನು ಉಳಿಸಿಕೊಳ್ಳಲು ಕೊರೋನಾ ಅಪಾಯವನ್ನೂ ಕಡೆಗಣಿಸಿದ ವಲಸೆ ಕಾರ್ಮಿಕ ಯಾಕೂಬ್‌ನ ಹೃದಯವೈಶಾಲ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಸಿಲಿನ ಆಘಾತದಿಂದ ನಿರ್ಜಲೀಕರಣ ಉಂಟಾಗಿ ಅಮೃತ್ ಮೃತಪಟ್ಟಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.