ತಿರುವನಂತಪುರ[ಫೆ.04]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಉತ್ತರಪ್ರದೇಶದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುವಂತೆ ಮಾಡಲು ಕೇರಳ ಮೂಲದ ಇಸ್ಲಾಮಿಕ್‌ ಸಂಘಟನೆ ಪಿಎಫ್‌ಐ ಹಣಕಾಸು ನೆರವು ನೀಡಿತ್ತು ಎಂಬ ವರದಿಗಳ ಬೆನ್ನಲ್ಲೇ, ಪಿಎಫ್‌ಐನ ರಾಜಕೀಯ ವಿಭಾಗವಾದ ಎಸ್‌ಡಿಪಿಐ ಉಗ್ರಗಾಮಿ (Extremist) ಸಂಘಟನೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ದೂಷಿಸಿದ್ದಾರೆ. ಈ ಸಂಘಟನೆಯ ಕಾರ್ಯಕರ್ತರು ಪ್ರತಿಭಟನಾಕಾರರ ಮಧ್ಯೆ ತೂರಿಕೊಂಡು ಕೋಮು ಸೌಹಾರ್ದಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಲ್ಲಿ ದಾಳಿಗೆ 9 ತಿಂಗಳು ಸಮೀಕ್ಷೆ ನಡೆಸಿದ್ದ ಬಾಂಗ್ಲಾ ಉಗ್ರ

ಕೇರಳ ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಸಿಎಎ ವಿರುದ್ಧ ಕೇರಳದಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಆದರೆ ಎಸ್‌ಡಿಪಿಐ ಎಂಬ ಸಂಘಟನೆ ಉಗ್ರಗಾಮಿ ರೀತಿ ಯೋಚಿಸುತ್ತಿದೆ. ಪ್ರತಿಭಟನೆಗಳ ಮಧ್ಯೆ ಸೇರಿಕೊಂಡು ವಿಷಯಾಂತರ ಮಾಡಲು ಪ್ರಯತ್ನಿಸುತ್ತಿವೆ ಎಂಬ ಮಾಹಿತಿ ಸರ್ಕಾರಕ್ಕೆ ಲಭಿಸಿದೆ. ಆ ಸಂಘಟನೆಯವರು ಹಿಂಸಾಚಾರದಲ್ಲಷ್ಟೇ ತೊಡಗುತ್ತಿಲ್ಲ, ಜನರನ್ನು ವಿಭಜಿಸಿ, ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ನಿಂದ ಆಕ್ಷೇಪ ವ್ಯಕ್ತವಾಯಿತು. ಆಗ ಮಾತಿನ ಚಕಮಕಿ ನಡೆಯಿತು.

ಇಂದಿರಾ ಜೈಸಿಂಗ್‌, ಕಪಿಲ್ ಸಿಬಲ್, ದುಷ್ಯಂತ್‌ಗೂ PFIನಿಂದ ಹಣ!

ಇದೇ ವೇಳೆ, ನಾನು ಎಸ್‌ಡಿಪಿಐ ಹೆಸರು ಪ್ರಸ್ತಾಪ ಮಾಡಿದಕ್ಕೆ ವಿಪಕ್ಷಗಳೇಕೆ ಸಿಟ್ಟಿಗೇಳಬೇಕು? ಅದರರ್ಥ ನಾನು ಎಸ್‌ಡಿಪಿಐ ಮತ್ತು ಉಗ್ರಗಾಮಿತನದ ಬಗ್ಗೆ ಮಾತನಾಡಬಾರದು ಎಂದೇ? ಎಂದು ವಿಜಯನ್‌ ವಿಪಕ್ಷಗಳಿಗೆ ತಿರುಗೇಟು ನೀಡಿದರು.