ಯಾವುದೇ ಸೇವೆ ನೀಡದಿದ್ದಾಗ 'ಶುಲ್ಕ ವಾಪಸ್ ನೀಡುವ ನೀತಿ ಇಲ್ಲ' ಎಂದು ಹೇಳಿ ಹಣ ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಗುರುಗ್ರಾಮದ ಗ್ರಾಹಕ ಆಯೋಗವು ಖಡಕ್ ತೀರ್ಪು ನೀಡಿದೆ. ಜಿಡಿ ಗೋಯೆಂಕಾ ಶಾಲೆಗೆ, ಪೋಷಕರಿಗೆ ₹90,000 ಶುಲ್ಕ ಹಾಗೂ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಗುರುಗ್ರಾಮ (ಜು.25): ಶಾಲಾ ಶೈಕ್ಷಣಿಕ ವರ್ಷವೇ ಆರಂಭವಾಗದಿದ್ದಾಗ ಮತ್ತು ಯಾವುದೇ ಸೇವೆಯನ್ನು ನೀಡದಿರುವಾಗ, 'ಶುಲ್ಕ ವಾಪಸ್ ನೀಡುವ ನೀತಿ ಇಲ್ಲ' (No Refund Policy) ಎಂಬ ನೆಪ ಹೇಳಿ ಪೋಷಕರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಗುರುಗ್ರಾಮ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಖಡಕ್ ತೀರ್ಪು ನೀಡಿದೆ.

ದಾಖಲಾತಿಯಾದ ಕೇವಲ 24 ಗಂಟೆಗಳಲ್ಲಿ ತನ್ನ ಇಬ್ಬರು ಮಕ್ಕಳ ಅಡ್ಮಿಷನ್ ರದ್ದುಗೊಳಿಸಿದ್ದರೂ ಶುಲ್ಕ ಹಿಂತಿರುಗಿಸಲು ನಿರಾಕರಿಸಿದ್ದ ಗುರುಗ್ರಾಮದ ಪ್ರಸಿದ್ಧ 'ಜಿಡಿ ಗೋಯೆಂಕಾ ಸಿಗ್ನೇಚರ್ ಶಾಲೆ'ಗೆ (GD Goenka Signature School) ಆಯೋಗವು ತರಾಟೆ ತೆಗೆದುಕೊಂಡಿದೆ. ಸೇವೆಯಲ್ಲಿ ತೀವ್ರ ಲೋಪ ಎಸಗಿರುವುದನ್ನು ಎತ್ತಿಹಿಡಿದ ಆಯೋಗವು, ಶಾಲೆಯು ತಾಯಿಗೆ ಶೇಕಡಾ 100 ರಷ್ಟು ಶುಲ್ಕವಾದ ₹90,000 ವಾಪಸ್ ನೀಡುವಂತೆ ಆದೇಶಿಸಿದೆ. ಇದರ ಜೊತೆಗೆ, ಸಂಕಷ್ಟಕ್ಕೀಡುಮಾಡಿದ್ದಕ್ಕಾಗಿ ₹20,000 ನಷ್ಟಪರಿಹಾರ ಹಾಗೂ ₹11,000 ಕಾನೂನು ವೆಚ್ಚ ಸೇರಿದಂತೆ ಒಟ್ಟು ಸುಮಾರು ₹1.21 ಲಕ್ಷ ನೀಡುವಂತೆ ಆದೇಶಿಸಿದೆ.

ಜುಲೈ 15 ರಂದು ಆಯೋಗದ ಅಧ್ಯಕ್ಷ ಸಂಜೀವ್ ಜಿಂದಾಲ್ ಹಾಗೂ ಸದಸ್ಯರಾದ ಜ್ಯೋತಿ ಸಿವಾಚ್ ಮತ್ತು ಖುಷ್ವಿಂದರ್ ಕೌರ್ ಅವರಿದ್ದ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಇನ್ನೂ ಮಕ್ಕಳ ಅಡ್ಮಿಷನ್ ಸಂದರ್ಶನವೇ ನಡೆದಿರಲಿಲ್ಲ. ಅಷ್ಟೇ ಅಲ್ಲದೆ, ಪ್ರವೇಶ ಪ್ರಕ್ರಿಯೆಗೆ ಕಡ್ಡಾಯವಾಗಿ ಬೇಕಾಗಿದ್ದ ಹಿಂದಿನ ಶಾಲೆಯ ವರ್ಗಾವಣೆ ಪತ್ರ (TC), ಜನನ ಪ್ರಮಾಣಪತ್ರ ಅಥವಾ ಅಂಕಪಟ್ಟಿಗಳಂತಹ ಯಾವುದೇ ಅಧಿಕೃತ ದಾಖಲೆಗಳನ್ನು ಸಲ್ಲಿಸುವಂತೆ ಶಾಲೆಯು ಆ ಪೋಷಕರಿಗೆ ಸೂಚಿಸಿಯೇ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೂರುದಾರೆ ಹಣ ಪಾವತಿಸಿದ ಮರುದಿನವೇ, ಅಂದರೆ ಕೇವಲ 24 ಗಂಟೆಗಳ ಒಳಗೆ ನೋಂದಣಿ ರದ್ದುಗೊಳಿಸಿ ಹಣ ಹಿಂತಿರುಗಿಸುವಂತೆ ಕೋರಿದ್ದಾರೆ. ಶಾಲೆಯು ಯಾವುದೇ ರೀತಿಯ ಸೇವೆಯನ್ನು ನೀಡುವುದಕ್ಕಿಂತ ಮುಂಚೆಯೇ ಈ ಮನವಿ ಸಲ್ಲಿಕೆಯಾಗಿರುವುದರಿಂದ, ಶುಲ್ಕ ನೀಡದಿರುವುದು ಶಾಲೆಯ ಕಡೆಯಿಂದ ಎಸಗಲ್ಪಟ್ಟ ತೀವ್ರ ಸೇವಾ ಲೋಪವಾಗಿದೆ ಎಂದು ಆಯೋಗ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಘಟನೆ ಏನು?

ದೂರುದಾರ ಮಹಿಳೆಯು ತಮ್ಮ ಕುಟುಂಬದೊಂದಿಗೆ ಗುರುಗ್ರಾಮದ ಸೆಕ್ಟರ್-92 ರ ಕ್ರಿಸೆಂಟ್ ಪಾರ್ಕ್‌ನಿಂದ ಸೋಹ್ನಾಗೆ ವಾಸಸ್ಥಳ ಬದಲಾಯಿಸಲು ಯೋಜಿಸಿದ್ದರು. ಇವರು ಇರಲು ಉದ್ದೇಶಿಸಿದ್ದ ಮನೆಗೆ ಜಿಡಿ ಗೋಯೆಂಕಾ ಸಿಗ್ನೇಚರ್ ಶಾಲೆಯು ಕಾಲ್ನಡಿಗೆ ದೂರದಲ್ಲಿತ್ತು. ಈ ಕಾರಣದಿಂದಾಗಿ ಅವರು ತಮ್ಮ ಇಬ್ಬರು ಮಕ್ಕಳನ್ನು ಆ ಶಾಲೆಗೆ ಸೇರಿಸಲು ನಿರ್ಧರಿಸಿ, 2021ರ ಜನವರಿ 29 ರಂದು ತಲಾ ₹5,000 ನೋಂದಣಿ ಶುಲ್ಕ ಹಾಗೂ ತಲಾ ₹40,000 ಅಡ್ಮಿಷನ್ ಶುಲ್ಕ ಸೇರಿದಂತೆ ಒಟ್ಟು ₹90,000 ಪಾವತಿಸಿದ್ದರು.

ಆದರೆ, ತದನಂತರ ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರತೆಯಿಂದ ಎದುರಾದ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಅವರ ಕುಟುಂಬ ಸೋಹ್ನಾಗೆ ಸ್ಥಳಾಂತರಗೊಳ್ಳುವ ಯೋಜನೆಯನ್ನು ರದ್ದುಗೊಳಿಸಿತು. ಹೀಗಾಗಿ, ಮರುದಿನವೇ (ಜನವರಿ 30, 2021) ಅಂದರೆ 24 ಗಂಟೆಯೊಳಗೆ ಆ ತಾಯಿ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ, ಮಕ್ಕಳ ಅಡ್ಮಿಷನ್ ರದ್ದುಗೊಳಿಸಿ ಪಾವತಿಸಿದ್ದ ಹಣವನ್ನು ಮರಳಿಸುವಂತೆ ಮನವಿ ಮಾಡಿದರು. ಆದರೆ, ಶಾಲೆಯು 'ತಮ್ಮಲ್ಲಿ ಶುಲ್ಕ ವಾಪಸ್ ನೀಡುವ ಯಾವುದೇ ನೀತಿ ಇಲ್ಲ' ಎಂದು ಹೇಳಿ ನೇರವಾಗಿ ನಿರಾಕರಿಸಿತ್ತು. ಇದರಿಂದ ನೊಂದ ತಾಯಿ ಗ್ರಾಹಕ ಆಯೋಗದ ಬಾಗಿಲು ತಟ್ಟಿದ್ದರು.

'ನಮ್ಮದು ನಾನ್-ರೀಫಂಡಬಲ್ ಪಾಲಿಸಿ' ಎಂದಿದ್ದ ಶಾಲೆ

ಆಯೋಗದ ಮುಂದೆ ತನ್ನ ವಾದ ಮಂಡಿಸಿದ್ದ ಶಾಲಾ ಆಡಳಿತ ಮಂಡಳಿಯು, "ನಮ್ಮ ಪ್ರವೇಶ ಮತ್ತು ನೋಂದಣಿ ಶುಲ್ಕಗಳು 'ರಿಫಂಡ್ ಮಾಡಲಾಗುವುದಿಲ್ಲ' (Non-refundable) ಎಂಬ ನಿಯಮಕ್ಕೆ ಒಳಪಟ್ಟಿವೆ. ಹಣ ಪಾವತಿಸುವಾಗಲೇ ದೂರುದಾರರು ಈ ಷರತ್ತುಗಳನ್ನು ಒಪ್ಪಿಕೊಂಡಿದ್ದರು. ಆದ್ದರಿಂದ ಅವರ ಹಣವನ್ನು ಹಿಂತಿರುಗಿಸದಿರುವುದು ಕಾನೂನುಬದ್ಧ ಹಾಗೂ ಸಮರ್ಥನೀಯ. ಇದರಲ್ಲಿ ಯಾವುದೇ ಸೇವಾ ಲೋಪವಾಗಿಲ್ಲ" ಎಂದು ಸಮರ್ಥಿಸಿಕೊಂಡಿತ್ತು.

ಆದೇಶದಲ್ಲಿ ಆಯೋಗ ಹೇಳಿದ್ದೇನು?:

ದೂರುದಾರರು ಸಲ್ಲಿಸಿದ್ದ ಪಾವತಿ ರಸೀದಿಗಳು, ಇಮೇಲ್ ಸಂವಹನಗಳು ಹಾಗೂ ರವಾನಿಸಿದ್ದ ಲೀಗಲ್ ನೋಟಿಸ್‌ಗಳನ್ನು ಪರಿಶೀಲಿಸಿದ ಆಯೋಗವು, ದೂರುದಾರರ ಪರವಾಗಿ ತೀರ್ಪು ನೀಡಿದೆ. ಶಾಲೆಯು ತನ್ನ 'ನೋ-ರೀಫಂಡ್' ನಿಯಮದ ನೆಪವನ್ನಷ್ಟೇ ನೆಚ್ಚಿಕೊಂಡಿತ್ತೇ ವಿನಃ ದೂರುದಾರರ ದಾಖಲೆಗಳನ್ನು ಸುಳ್ಳೆಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯ ಒದಗಿಸಿರಲಿಲ್ಲ.

"ಪಾವತಿ ರಸೀದಿಯಲ್ಲಿ ಶುಲ್ಕ ಹಿಂತಿರುಗಿಸುವುದಿಲ್ಲ ಎಂದು ನಮೂದಿಸಲಾಗಿದ್ದರೂ, ಶಾಲೆಯು ಇನ್ನೂ ಯಾವುದೇ ಬೋಧನಾ ಸೇವೆಯನ್ನು ಪ್ರಾರಂಭಿಸಿರಲಿಲ್ಲ. ಶೈಕ್ಷಣಿಕ ವರ್ಷವೇ ಆರಂಭವಾಗದೇ ಇರುವಾಗ, ಯಾವುದೇ ಸೇವೆ ನೀಡದೆ ಶಾಲೆ ಹಣವನ್ನು ತನ್ನ ಬಳಿಯೇ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಣ ಪಾವತಿಸಿದ 24 ಗಂಟೆಯೊಳಗೆ ಪ್ರವೇಶ ರದ್ದುಪಡಿಸಲು ಕೋರಿದ್ದರೂ ಹಣ ತಡೆದಿಟ್ಟಿರುವುದು ಅನ್ಯಾಯ" ಎಂದು ಆಯೋಗ ಅಭಿಪ್ರಾಯಪಟ್ಟಿದೆ.