2019-2024ರ ಅವಧಿಯಲ್ಲಿ 22,217 ಚುನಾವಣಾ ಬಾಂಡ್‌ ಖರೀದಿ, ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮಾಹಿತಿ!

2019 ರಿಂದ 2024 ರವರೆಗೆ 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಬಿಐ ಅಫಿಡವಿಟ್  ತಿಳಿಸಿದೆ. ಪಕ್ಷಗಳು 22,030 ಬಾಂಡ್‌ಗಳ ಹಣವನ್ನು ಎನ್‌ಕ್ಯಾಶ್ ಮಾಡಿಕೊಂಡಿದೆ.
 

SBI affidavit in Supreme Court  22217 electoral bonds were purchased from 2019 to 2024 san

ನವದೆಹಲಿ (ಮಾ.13): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ದಿನೇಶ್ ಕುಮಾರ್ ಬುಧವಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ಸೂಚನೆಯಂತೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಲಭ್ಯವಿರುವ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಎಸ್‌ಬಿಐ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದ್ದು, ನಾವು ಎರಡು ಫೈಲ್‌ಗಳನ್ನು ಪೆನ್‌ಡ್ರೈವ್‌ನಲ್ಲಿ ಇಸಿಐಗೆ ನೀಡಿದ್ದೇವೆ.  ಒಂದು ಫೈಲ್‌ನಲ್ಲಿ ಬಾಂಡ್‌ ಖರೀದಿ ಮಾಡಿರುವವರ ವಿವರಗಳನ್ನು ಒಳಗೊಂಡಿದೆ. ಇದು ಬಾಂಡ್ ಖರೀದಿಸಿದ ದಿನಾಂಕ ಮತ್ತು ಮೊತ್ತವನ್ನು ಉಲ್ಲೇಖಿಸುತ್ತದೆ. ಎರಡನೇ ಕಡತವು ರಾಜಕೀಯ ಪಕ್ಷಗಳು ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡುವ ಮಾಹಿತಿಯನ್ನು ಒಳಗೊಂಡಿದೆ.  ಪೆನ್‌ಡ್ರೈವ್‌ನಲ್ಲಿ ಇರುವ ಎರಡು ಪಿಡಿಎಫ್‌ ಫೈಲ್‌ಗಳಿ ಪಾಸ್‌ವರ್ಡ್‌ಗಳಿದ್ದು, ಈ ಪಾಸ್‌ವರ್ಡ್‌ಗಳನ್ನು ಕೂಡ ಲಕೋಟೆಯಲ್ಲಿ ನೀಡಲಾಗಿದೆ. 

ಎಸ್‌ಬಿಐನ ಅಫಿಡವಿಟ್ ಪ್ರಕಾರ, 2019ರ ಏಪ್ರಿಲ್ 1 ರಿಂದ 2024ರ ಫೆಬ್ರವರಿ 15 ರವರೆಗೆ 22,217 ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿದೆ. ಈ ಪೈಕಿ 22,030 ಬಾಂಡ್‌ಗಳ ಹಣವನ್ನು ರಾಜಕೀಯ ಪಕ್ಷಗಳು ಎನ್‌ಕ್ಯಾಶ್ ಮಾಡಿಕೊಂಡಿವೆ. ಪಕ್ಷಗಳು 15 ದಿನಗಳ ಸಿಂಧುತ್ವದೊಳಗೆ 187 ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿಲ್ಲ. ಇದರ ಮೊತ್ತವನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದೆ.

ಮಾರ್ಚ್ 11 ರಂದು, ಚುನಾವಣಾ ಬಾಂಡ್ ಬಗ್ಗೆ ಮಾಹಿತಿ ನೀಡುವ ಪ್ರಕರಣದಲ್ಲಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸುಮಾರು 40 ನಿಮಿಷಗಳ ಕಾಲ ವಿಚಾರಣೆ ನಡೆಸಿತ್ತು. ಈ ವೇಳೆ ನ್ಯಾಯಾಲಯಕ್ಕೆ ತಿಳಿಸಿದ ಎಸ್‌ಬಿಐ ಬಾಂಡ್‌ಗೆ ಸಂಬಂಧಿಸಿದ ಮಾಹಿತಿ ನೀಡಲು ನಮಗೆ ಯಾವುದೇ ತೊಂದರೆ ಇಲ್ಲ, ಆದರೆ ಸ್ವಲ್ಪ ಸಮಯ ಬೇಕು. ಈ ಕುರಿತು ಸಿಜೆಐ ಡಿವೈ ಚಂದ್ರಚೂಡ್ ಅವರು, ಕಳೆದ ವಿಚಾರಣೆಯಿಂದ (ಫೆಬ್ರವರಿ 15) 26 ದಿನಗಳಲ್ಲಿ ನೀವು ಏನು ಮಾಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದರು.

ತೀರ್ಪು ನೀಡುವಾಗ, ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಸಂವಿಧಾನ ಪೀಠವು, ಮಾರ್ಚ್ 12 ರೊಳಗೆ ಎಸ್‌ಬಿಐ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕು. ಚುನಾವಣಾ ಆಯೋಗವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಮಾರ್ಚ್ 15 ರ ಸಂಜೆ 5 ಗಂಟೆಯೊಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ತಿಳಿಸಿತ್ತು. ಮಾರ್ಚ್ 4 ರಂದು, ಎಸ್‌ಬಿಐ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ , ಚುನಾವಣಾ ಬಾಂಡ್‌ ಮಾಹಿತಿ ನೀಡಲು ಜೂನ್ 30 ರವರೆಗೆ ಸಮಯ ಕೋರಿತ್ತು. ಇದಲ್ಲದೆ, ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಅರ್ಜಿಯನ್ನು ಸಹ ನ್ಯಾಯಾಲಯವು ವಿಚಾರಣೆ ನಡೆಸಿತು, ಇದರಲ್ಲಿ ಮಾರ್ಚ್ 6 ರವರೆಗೆ ಮಾಹಿತಿ ನೀಡದಿದ್ದಕ್ಕಾಗಿ ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲಾಗಿತ್ತು.

ಎಡಿಆರ್ ಮಾರ್ಚ್ 7 ರಂದು ಸುಪ್ರೀಂ ಕೋರ್ಟ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವಿರುದ್ಧ ನಿಂದನೆ ಅರ್ಜಿಯನ್ನು ಸಲ್ಲಿಸಿತು. ಎಸ್‌ಬಿಐ ವಿಸ್ತರಣೆಯ ಬೇಡಿಕೆಯು ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಎಡಿಆರ್ ಹೇಳಿದೆ. ಎಸ್‌ಬಿಐನ ಐಟಿ ವ್ಯವಸ್ಥೆಯು ಇದನ್ನು ಸುಲಭವಾಗಿ ನಿರ್ವಹಿಸಬಹುದು. ಪ್ರತಿಯೊಂದು ಬಾಂಡ್‌ಗಳು ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತದೆ. ಈ ಮೂಲಕ ವರದಿ ಸಿದ್ಧಪಡಿಸಿ ಚುನಾವಣಾ ಆಯೋಗಕ್ಕೆ ನೀಡಬಹುದು ಎಂದು ಹೇಳಿತ್ತು.

ಸುಪ್ರೀಂ ಕೋರ್ಟ್ ವಾರ್ನಿಂಗ್ ಬೆನ್ನಲ್ಲೇ ಚುನಾವಣಾ ಬಾಂಡ್ ವಿವರ ಸಲ್ಲಿಸಿದ ಎಸ್‌ಬಿಐ!

ಸುಪ್ರೀಂ ಕೋರ್ಟ್‌ನಿಂದ ನಿಷೇಧಕ್ಕೂ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 29 ಆಯ್ದ ಶಾಖೆಗಳಲ್ಲಿ ಚುನಾವಣಾ ಬಾಂಡ್‌ಗಳು ಲಭ್ಯವಿದ್ದವು. ಖರೀದಿದಾರ ಈ ಬಾಂಡ್ ಅನ್ನು ತನ್ನ ಆಯ್ಕೆಯ ಪಕ್ಷಕ್ಕೆ ದಾನ ಮಾಡಬಹುದು. ಬಾಂಡ್ ಸ್ವೀಕರಿಸುವ ಪಕ್ಷವು ಇದನ್ನು ಯಾವುದೇ ಸಮಸ್ಯೆ ಇಲ್ಲದೆ ಪಡೆಯಬಹುದಾಗಿತ್ತು. ಖರೀದಿದಾರರು ರೂ 1000 ರಿಂದ ರೂ 1 ಕೋಟಿವರೆಗಿನ ಬಾಂಡ್‌ಗಳನ್ನು ಖರೀದಿಸಬಹುದು. ಇದಕ್ಕಾಗಿ ಅವರು ತನ್ನ ಸಂಪೂರ್ಣ ಕೆವೈಸಿ ಅನ್ನು ಬ್ಯಾಂಕ್‌ಗೆ ನೀಡಬೇಕಾಗುತ್ತದೆ. ಈ ಬಾಂಡ್ ದೇಣಿಗೆ ಪಡೆದ ಪಕ್ಷವು ಕಳೆದ ಲೋಕಸಭೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 1% ಮತಗಳನ್ನು ಪಡೆಯುವುದು ಕಡ್ಡಾಯವಾಗಿತ್ತು.

2022-23ರಲ್ಲಿ ಚುನಾವಣಾ ಬಾಂಡ್ ಮೂಲಕ ಬಿಜೆಪಿ-ಕಾಂಗ್ರೆಸ್ ಪಡೆದ ದೇಣಿಗೆ ಎಷ್ಟು?

ದಾನಿಗಳು ಬಾಂಡ್ ನೀಡಿದ 15 ದಿನಗಳಲ್ಲಿ, ಬಾಂಡ್ ಸ್ವೀಕರಿಸುವ ರಾಜಕೀಯ ಪಕ್ಷವು ಚುನಾವಣಾ ಆಯೋಗದಿಂದ ಪರಿಶೀಲಿಸಲ್ಪಟ್ಟ ಬ್ಯಾಂಕ್ ಖಾತೆಯ ಮೂಲಕ ಅದನ್ನು ನಗದು ಮಾಡಿಕೊಳ್ಳಬಹುದು. ನಿಯಮಗಳ ಪ್ರಕಾರ ಯಾವುದೇ ಭಾರತೀಯ ಇದನ್ನು ಖರೀದಿಸಬಹುದು. ಬಾಂಡ್ ಖರೀದಿಸುವವರ ಗುರುತು ರಹಸ್ಯವಾಗಿಯೇ ಉಳಿದಿದೆ. ಅದನ್ನು ಖರೀದಿಸುವ ವ್ಯಕ್ತಿಗೆ ತೆರಿಗೆ ರಿಯಾಯಿತಿಯೂ ಸಿಗುತ್ತದೆ. ಈ ಬಾಂಡ್‌ಗಳು ವಿತರಣೆಯ ನಂತರ 15 ದಿನಗಳವರೆಗೆ ಮಾನ್ಯವಾಗಿರುತ್ತವೆ.

Latest Videos
Follow Us:
Download App:
  • android
  • ios