ಸುಪ್ರೀಂ ಕೋರ್ಟ್ ವಾರ್ನಿಂಗ್ ಬೆನ್ನಲ್ಲೇ ಚುನಾವಣಾ ಬಾಂಡ್ ವಿವರ ಸಲ್ಲಿಸಿದ ಎಸ್‌ಬಿಐ!
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಖರೀದಿಸಿದವರ ಮಾಹಿತಿ ನೀಡಲು ಹಿಂದೇಟು ಹಾಕಿದ್ದ ಎಸ್‌ಬಿಐ ಇದೀಗ ಸುಪ್ರೀಂ ಕೋರ್ಟ್ ತಪರಾಕಿ ಬೆನ್ನಲ್ಲೇ ಎಲ್ಲಾ ಮಾಹಿತಿ ನೀಡಿದೆ. ಚುನಾವಣಾ ಆಯೋಗಕ್ಕೆ ಈ ಮಾಹಿತಿ ಸಲ್ಲಿಕೆ ಮಾಡಿದೆ. ಇದೀಗ ಬಾಂಡ್ ಮೂಲಕ ದೇಣಿಗೆ ನೀಡಿದವರ ಎದೆಯಲ್ಲಿ ನಡುಕು ಹೆಚ್ಚಾಗಿದೆ.
ನವದೆಹಲಿ(ಮಾ.12) ಲೋಕಸಭಾ ಚುನಾವಣಾ ಸನಿಹದಲ್ಲೇ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಬ್ಯಾನ್ ಮಾಡಿ ತೀರ್ಪು ನೀಡಿತ್ತು. ಇದೇ ವೇಳೆ ಚುನಾವಣಾ ಬಾಂಡ್ ಖರೀದಿಸಿದವರ ಮಾಹಿತಿ ನೀಡುವಂತೆ ಕೋರ್ಟ್ ಎಸ್‌ಬಿಐ ಸೂಚಿಸಿತ್ತು. ಮಾರ್ಚ್ 6ರೊಳಗೆ ಬಾಂಡ್ ವಿವರ ಸಲ್ಲಿಸುವಂತೆ ಸೂಚಿಸಿದ್ದರೂ ಎಸ್‌ಬಿಐ ವಿಸ್ತರಣೆ ಕೇಳುವ ಮೂಲಕ ಮಾಹಿತಿ ನೀಡಲು ನಿರಾಕರಿಸಿತ್ತು. ಆದರೆ ಖಡಕ್ ವಾರ್ನಿಂಗ್ ನೀಡಿದ ಬೆನ್ನಲ್ಲೇ ಇದೀಗ ಎಸ್‌ಬಿಐ ಚುನಾವಣಾ ಬಾಂಡ್ ವಿವರಣೆಯನ್ನು ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಿದೆ. ಎಸ್‌ಬಿಐ ಸಲ್ಲಿಸಿದ ಚುನಾವಣಾ ಬಾಂಡ್ ವಿವರಗಳನ್ನು ಚುನಾವಣಾ ಆಯೋಗ ಶುಕ್ರವಾರ ಸಂಜೆ 5 ಗಂಟೆಯೊಳಗೆ ಪ್ರಕಟಿಸಬೇಕು ಎಂದು ಕೋರ್ಟ್ ಸೂಚಿಸಿದೆ.
2019ರ ಏಪ್ರಿಲ್ 12ರಿಂದ ಈವರೆಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ವಿವರವನ್ನು ಮಾರ್ಚ್ 6ರೊಳಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಫೆ.15ರಂದು ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸುವ ಆದೇಶದೊಂದಿಗೆ ತಾಕೀತು ಮಾಡಿತ್ತು. ಅದನ್ನು ಜೂ.30ರ ವರೆಗೆ ವಿಸ್ತರಿಸುವಂತೆ ಎಸ್‌ಬಿಐ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಗಡುವು ವಿಸ್ತರಿಸಲು ನಿರಾಕರಿಸಿ ತಕ್ಷಣವೇ ವಿವರ ಸಲ್ಲಿಸಲು ಸಿಬಿಐಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಸಿಬಿಐ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದೆ.
ಚುನಾವಣಾ ಬಾಂಡ್: ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್
ಮಾರ್ಚ್ 15ರೊಳಗೆ ಚುನಾವಣಾ ಆಯೋಗ ಈ ಬಾಂಡ್ ಖರೀದಿಸಿದವರ ವಿವರ, ಮೊತ್ತದ ಕುರಿತ ಮಾಹಿತಿಯನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಮಾರ್ಚ್ 11ರಂದು ಎಸ್‌ಬಿಐ ಸಲ್ಲಿಸಿದ ಗಡುವು ವಿಸ್ತರಣೆ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಸಾಂವಿಧಾನಿಕ ಪೀಠ, ಮಾ.12ರ ವ್ಯವಹಾರದ ಅವಧಿ ಮುಗಿಯುವುದರೊಳಗೆ ಚುನಾವಣಾ ಆಯೋಗಕ್ಕೆ ಎಸ್‌ಬಿಐ ವಿವರ ಸಲ್ಲಿಸಬೇಕು. ಚುನಾವಣಾ ಆಯೋಗವು ಮಾ.15ರ ಸಂಜೆ 5 ಗಂಟೆಯೊಳಗೆ ಅದನ್ನು ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕು ಎಂದು ಆದೇಶ ನೀಡಿತು.
ಇದೇ ವೇಳೆ ಕಳೆದ 26 ದಿನಗಳಲ್ಲಿ ನೀವು ಏನು ಮಾಡಿದ್ದೀರಿ? ನಿಮ್ಮ ಅರ್ಜಿಯಲ್ಲಿ ಅದರ ಬಗ್ಗೆ ಏನೂ ವಿವರವಿಲ್ಲ’ ಎಂದು ಎಸ್‌ಬಿಐಯನ್ನು ಸುಪ್ರೀಂಕೋರ್ಟ್ ಇದೇ ವೇಳೆ ತರಾಟೆ ತೆಗೆದುಕೊಂಡಿತು.
ಚುನಾವಣಾ ಬಾಂಡ್‌ಗಳಿಂದ 16518 ಕೋಟಿ ಸಂಗ್ರಹ: ಯಾವ ಪಕ್ಷಕ್ಕೆ ಎಷ್ಟು ಇಲ್ಲಿದೆ ಡಿಟೇಲ್ಸ್