ಸಾತಾರದಲ್ಲಿ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಕಾಲೇಜು ಹುಡುಗನೊಬ್ಬ ಚಾಕು ತೋರಿಸಿ ಬೆದರಿಸಿದ್ದಾನೆ. ಆದರೆ ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾತಾರ: ತಮ್ಮ ಪ್ರೀತಿಯನ್ನು ಒಪ್ಪಲಿಲ್ಲ ಎಂಬ ಕಾರಣಕ್ಕೆ ಭಗ್ನಪ್ರೇಮಿಗಳು ಕಾಲೇಜು ಯುವತಿಯರನ್ನು ಚಾಕುವಿನಿಂದ ಇರಿದು ಇರಿದು ಕೊಂದಂತಹ ಹಲವು ಘಟನೆಗಳು ದೇಶದಲ್ಲಿ ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಶಾಲೆಗೆ ಹೋಗುವ ಬಾಲಕಿ ಹಿಂದೆ ಬಿದ್ದ ಕಾಲೇಜು ಹುಡುಗನೋರ್ವ ಕೈಯಲ್ಲಿ ಚಾಕು ಹಿಡಿದುಕೊಂಡು ಆಕೆಯನ್ನು ಹಾಗೂ ಸುತ್ತಮುತ್ತಲಿದ್ದ ಜನರನ್ನು ಬೆದರಿಸಿದಂತಹ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಪಿಯುಸಿ ವಿದ್ಯಾರ್ಥಿಯ ಒನ್‌ವೇ ಲವ್
ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ ಕಾಲೇಜು ಹುಡುಗ ಆಕೆ ಶಾಲೆಯಿಂದ ಮನೆಗೆ ಹೋಗುವ ವೇಳೆ ದಿನವೂ ಆಕೆಯನ್ನು ಮನೆಯವರೆಗೂ ಫಾಲೋ ಮಾಡಿಕೊಂಡು ಬರುತ್ತಿದ್ದ. ಆದರೆ ಆತ ಬಾಲಕಿಗೆ ತನ್ನ ಪ್ರೀತಿಯನ್ನು ಹೇಳಿ ಆಕೆ ತಿರಸ್ಕರಿಸಿದ್ದಳೋ ಎಂಬ ಬಗ್ಗೆ ಮಾಹಿತಿ ಇಲ್ಲ, ಸೋಮವಾರ ಆತ ಚಾಕುವಿನೊಂದಿಗೆ ಬಂದಿದ್ದು, ಬಾಲಕಿಯ ಕತ್ತಿನ ಸುತ್ತಲೂ ತನ್ನ ಕೈ ಹಾಕಿ ಮತ್ತೊಂದು ಕೈಯಲ್ಲಿ ಚಾಕುವನ್ನು ಇರಿಸಿಕೊಂಡು ಬಾಲಕಿಯನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ.
ಆದರೆ ಈ ಸಮಯದಲ್ಲಿ ಅಲ್ಲಿದ್ದ ವ್ಯಕ್ತಿಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದು, ನಿಧಾನಕ್ಕೆ ಆ ಕಾಲೇಜು ಹುಡುಗನ ಹಿಂದಿನಿಂದ ಹೋಗಿ ಹಿಡಿದುಕೊಂಡಿದ್ದಾರೆ. ಈ ವೇಳೆ ಅಲ್ಲಿದ್ದ ಇತರರು ಸೇರಿಕೊಂಡಿದ್ದು, ಬಾಲಕಿಯನ್ನು ಆತನ ಕೈನಿಂದ ಬಿಡಿಸಿ ಅಪಾಯದಿಂದ ಪಾರು ಮಾಡಿದ್ದಾರೆ. ಇತ್ತ ಆ ಕಾಲೇಜು ಹುಡುಗನಿಗೆ ಅಲ್ಲಿದ್ದ ಸಾರ್ವಜನಿಕರು ಸರಿಯಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋದಲ್ಲಿ ಕಾಣುವಂತೆ ಹಸಿರು ಬಣ್ಣದ ಟೀ ಶರ್ಟ್ ಧರಿಸಿರುವ ಪಿಯುಸಿ ಓದುತ್ತಿರುವ ಹುಡುಗನೋರ್ವ ಸ್ಕೂಲ್ ಯುನಿಫಾರ್ಮ್ ಧರಿಸಿರುವ ಬಾಲಕಿಯನ್ನು ಒಂದು ಕೈನಲ್ಲಿ ಹಿಡಿದುಕೊಂಡು ಮತ್ತೊಂದು ಕೈನಲ್ಲಿ ಚಾಕುವಿನಿಂದ ಸ್ಥಳೀಯರನ್ನು ಬೆದರಿಸುತ್ತಿರುವುದನ್ನು ಕಾಣಬಹುದಾಗಿದೆ.
ಹೀಗೆ ಶಾಲಾ ಬಾಲಕಿಗೆ ಚಾಕು ಹಿಡಿದು ಬೆದರಿಸಿದ ಕಾಲೇಜು ಹುಡುಗನನ್ನು 18 ವರ್ಷದ ಆರ್ಯನ್ ವಾಗ್ಮಲೆ ಎಂದು ಗುರುತಿಸಲಾಗಿದೆ. ಈತ ಪಿಯುಸಿ ಓದುತ್ತಿದ್ದು, ಬಾಲಕಿಯನ್ನು ದಿನವೂ ಹಿಂಬಾಲಿಸುತ್ತ ಬರುತ್ತಿದ್ದ. ಸೋಮವಾರ ಬಸಪ್ಪ ಪೇಠ ಕರಂಜೆ ಪ್ರದೇಶದಲ್ಲಿ ಆತ ಚಾಕು ಹಿಡಿದು ಬಾಲಕಿಯನ್ನು ಒತ್ತೆಯಾಳಿನಂತೆ ಇರಿಸಿಕೊಂಡು ಇತರರನ್ನು ಬೆದರಿಸಿದ್ದಾನೆ. ಈ ವೇಳೆ ಕರ್ತವ್ಯದಲ್ಲಿಲ್ಲದ ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸ್ ಒಬ್ಬರು ಉಪಾಯವಾಗಿ ಯುವಕನ ಹಿಂದಿನಿಂದ ಬಂದು ಆತನನ್ನು ಗಟ್ಟಿಯಾಗಿ ಹಿಡಿದುಕೊಳ್ಳುವ ಮೂಲಕ ಬಾಲಕಿಯನ್ನು ರಕ್ಷಿಸಿದ್ದಾರೆ.
ಘಟನೆಯಲ್ಲಿ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ ಹಾಗೂ ಒಬ್ಬರು ಸ್ಥಳೀಯರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಶಹುಪುರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಸ್ಜಿ ಮೆಹತ್ರೆ ಹೇಳಿದ್ದಾರೆ.
ಜನವರಿಯಲ್ಲಿ ಬಾಲಕಿ ಆ ಹುಡುಗನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ ಮೇಲೂ ಈ ಕಾಲೇಜು ಹುಡುಗ ಹಲವಾರು ತಿಂಗಳುಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಶಾಹುಪುರಿ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಅಪಹರಣ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಕಾಲೇಜಿಗೆ ಹೋಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಪೋಷಕರು ಕಳುಹಿಸಿದರೆ ಇಲ್ಲಿ ಈಗಷ್ಟೇ 18ರ ಹರೆಯಕ್ಕೆ ಕಾಲಿರಿಸಿದ ಯುವಕನೋರ್ವ ಪ್ರೀತಿಯ ಹೆಸರಲ್ಲಿ ಏನೋ ಮಾಡುವುದಕ್ಕೆ ಹೋಗಿ ಭವಿಷ್ಯದ ಮೇಲೆ ಬರೆ ಎಳೆದುಕೊಂಡಿದ್ದಾನೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೋಡುಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ.
