Asianet Suvarna News Asianet Suvarna News

Drugs Case: ಶಾರುಖ್‌ ಪುತ್ರನ ಬಂಧಿಸಿದ್ದ ವಾಂಖೇಡೆ ಮಾತೃ ಇಲಾಖೆಗೆ, NCB ಸೇವೆ ಅಂತ್ಯ!

* ಮಾದಕ ವಸ್ತು ನಿಗ್ರಹ ದಳದಲ್ಲಿ ಸೇವೆ ಅಂತ್ಯ

* ಶಾರುಖ್‌ ಪುತ್ರನ ಬಂಧಿಸಿದ್ದ ವಾಂಖೇಡೆ ಮಾತೃ ಇಲಾಖೆಗೆ

Sameer Wankhede deattached from NCB to report at DRI headquarters in Delhi pod
Author
Bangalore, First Published Jan 4, 2022, 7:03 AM IST

ಮುಂಬೈ(ಜ,04): ಡ್ರಗ್ಸ್‌ ಪ್ರಕರಣದಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರನನ್ನು ಬಂಧಿಸುವ ಮೂಲಕ ದೇಶದ ಗಮನಸೆಳೆದಿದ್ದ ಮಾದಕ ವಸ್ತು ನಿಗ್ರಹ ದಳ (ಎನ್‌ಸಿಬಿ)ದ ಮುಂಬೈ ವಲಯ ಮುಖ್ಯಸ್ಥ ಸಮೀರ್‌ ವಾಂಖೇಡೆ ಅವರನ್ನು ಮಾತೃ ಇಲಾಖೆಗೆ ಎನ್‌ಸಿಬಿ ವಾಪಸ್‌ ಕಳುಹಿಸಿದೆ.

ಎನ್‌ಸಿಬಿಯಲ್ಲಿ ಡಿ.31ರವರೆಗೆ ವಾಂಖೇಡೆ ಅವಧಿ ಇತ್ತು. ಅದನ್ನು ವಿಸ್ತರಿಸಲು ಅವರು ಯಾವುದೇ ಮನವಿ ಮಾಡಲಿಲ್ಲ. ಆದ ಕಾರಣ ವಾಂಖೇಡೆ ಅವರು ಮಾತೃ ಇಲಾಖೆಯಾದ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ವರದಿ ಮಾಡಿಕೊಂಡಿದ್ದಾರೆ.

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣ ಬಳಿಕ ಚಿತ್ರ ನಟರ ವಿರುದ್ಧ ತನಿಖೆ ತೀವ್ರಗೊಳಿಸಿದ್ದ ವಾಂಖೇಡೆ, ಸುಶಾಂತ್‌ ಅವರ ಪ್ರೇಯಸಿ ರಿಯಾ ಚಕ್ರವರ್ತಿ ಸೇರಿದಂತೆ ಹಲವು ನಟರನ್ನು ಬಂಧಿಸಿದ್ದರು. ಶಾರುಖ್‌ ಪುತ್ರನನ್ನೂ ಡ್ರಗ್ಸ್‌ ಪ್ರಕರಣದಲ್ಲಿ ಜೈಲಿಗಟ್ಟುವ ಮೂಲಕ ಗಮನಸೆಳೆದಿದ್ದರು.

ಈ ಪ್ರಕರಣದ ಬಳಿಕ ನಕಲಿ ದಾಖಲೆ ಕೊಟ್ಟು ಸರ್ಕಾರ ಕೆಲಸ ಗಿಟ್ಟಿಸಿಕೊಂಡಿದ್ದಾರೆ, ಧರ್ಮದ ಬಗ್ಗೆ ಸುಳ್ಳು ಹೇಳಿದ್ದಾರೆ, ಬೋಗಸ್‌ ಡ್ರಗ್ಸ್‌ ಪ್ರಕರಣಗಳಲ್ಲಿ ಜನರನ್ನು ಬಂಧಿಸಿದ್ದಾರೆ, ಐಷಾರಾಮಿ ಜೀವನ ನಡೆಸುತ್ತಾರೆ ಎಂಬ ಮಹಾರಾಷ್ಟ್ರ ಸಚಿವ ನವಾಬ್‌ ಮಲಿಕ್‌ ಅವರ ಆರೋಪಗಳಿಗೆ ವಾಂಖೇಡೆ ತುತ್ತಾಗಿದ್ದರು. ಅದಕ್ಕೆ ತಿರುಗೇಟು ಕೂಡ ಕೊಟ್ಟಿದ್ದರು.

ವಾಂಖೇಡೆ ವಿರುದ್ಧದ 25 ಕೋಟಿ ರು. ಸುಲಿಗೆ ಆರೋಪ ಠುಸ್‌!

 

ಐಷಾರಾಮಿ ಹಡಗಿನಲ್ಲಿ ನಡೆದಿದೆ ಎನ್ನಲಾದ ರೇವ್‌ ಪಾರ್ಟಿ ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಪುತ್ರ ಆರ್ಯನ್‌ ಖಾನ್‌ ಅವರನ್ನು ಬಿಡಲು 25 ಕೋಟಿ ರು. ಬೇಡಿಕೆ ಇಡಲಾಗಿತ್ತು ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಇಲ್ಲಿಗೇ ನಿಲ್ಲಿಸುತ್ತಿರುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಆರ್ಯನ್‌ ಖಾನ್‌ ಬಂಧನದ ಮುಖಾಂತರ ಸಮೀರ್‌ ವಾಂಖೇಡೆ ಅವರು ಪ್ರಕರಣ ಮುಚ್ಚಿಹಾಕಲು 25 ಕೋಟಿ ರು. ಸುಲಿಗೆಗೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಬಗ್ಗೆ ಮುಂಬೈ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ನಡೆಸಿದ್ದರು. ಪ್ರಕರಣ ಸಂಬಂಧ 20 ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಆದರೆ, ಯಾವುದೇ ಸಾಕ್ಷ್ಯಾಧಾರ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನೂ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios