ಸೈಫ್ ಅಲಿ ಖಾನ್ ಮನೆಗೆ ನುಸುಳಿದ ಆರೋಪಿ ಬಾಂಗ್ಲಾದೇಶ ಮೂಲದವನೆಂಬ ಶಂಕೆ ವ್ಯಕ್ತವಾಗಿದೆ. ಆರೋಪಿಯ ಬಳಿ ಭಾರತೀಯ ದಾಖಲೆಗಳಿಲ್ಲದ ಕಾರಣ ಪೊಲೀಸರು ಈ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆ ಬಾಂಗ್ಲಾದೇಶಿ ನುಸುಳುಕೋರರ ಬಗ್ಗೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕು ದಾಳಿ ಪ್ರಕರಣದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಕಳ್ಳತನ ಮಾಡುವ ಉದ್ದೇಶದಿಂದ ಸೈಫ್ ಅಲಿಖಾನ್ ಮನೆಗೆ ಪ್ರವೇಶಿಸಿದ್ದ ಎಂದು ಆರೋಪಿ ಬಾಯ್ಬಿಟ್ಟಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಆದರೆ ಆರೋಪಿಗಳ ವಿಚಾರಣೆ ವೇಳೆ ಭಾರತೀಯ ಪ್ರಜೆ ಎಂಬುದಕ್ಕೆ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆ ಇಲ್ಲದಿರುವುದರಿಂದ ಆರೋಪಿಗಳು ಬಾಂಗ್ಲಾದೇಶ ಮೂಲದವನೆಂದು ಪೊಲೀಸರು ಶಂಕಿಸಿದ್ದು, ಅದಕ್ಕೆ ಇಂಬು ಕೊಡುವಂತೆ ಬಾಂಗ್ಲಾದೇಶದೊಂದಿಗೆ ಸಂಪರ್ಕವಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಶಿವಸೇನೆ ಏಕನಾಥ್ ಶಿಂಧೆ ಬಣದ ನಾಯಕ ಸಂಜಯ್ ನಿರುಪಮ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಇಲ್ಲ, ದಾಖಲೆ ಇಲ್ಲ.. ಸೈಫ್ ಅಲಿ ಖಾನ್ ಮೇಲೆ ದಾಳಿ ಆರೋಪಿಗಳು ಇಲ್ಲಿನವರಲ್ಲ! ಬೆಚ್ಚಿಬಿದ್ದ ಮುಂಬೈ ಪೊಲೀಸರು!
ಸಂಜಯ್ ನಿರುಪಮ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದು, ಅಕ್ರಮವಾಗಿ ದೇಶದೊಳಗೆ ನುಸುಳಿರುವ ಬಾಂಗ್ಲಾದೇಶಿಯರನ್ನು ಓಡಿಸುವ ಅಭಿಯಾನವನ್ನು ಇಡೀ ದೇಶದಲ್ಲಿ ಪ್ರಾರಂಭಿಸಬೇಕಾದ ಸಮಯ ಬಂದಿದೆ, ದಯವಿಟ್ಟು ಈಗ ಜಾತ್ಯತೀತತೆಯನ್ನು ನಿಲ್ಲಿಸಿಬಿಡಿ ಎಂದಿದ್ದಾರೆ.
ಸಂಜಯ್ ನಿರುಪಮ್ ಹೇಳಿಕೆಗೆ ಶಿವಸೇನೆ ಯುಬಿಟಿ ಸಂಸದ ಪ್ರಿಯಾಂಕಾ ಚತುರ್ವೇದಿ ತಿರುಗೇಟು ನೀಡಿದ್ದು, 'ಐದು ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಅವುಗಳಲ್ಲಿ ನಾಲ್ಕು ಬಿಜೆಪಿ ಆಳ್ವಿಕೆಯಲ್ಲಿವೆ. ಬಾಂಗ್ಲಾದೇಶಿಯರು ಭಾರತದೊಳಗೆ ಹೇಗೆ ನುಸುಳಿದರು? ದಯವಿಟ್ಟು ಮುಚ್ಕೊಂಡಿರಿ'ಎಂದು ಅವರು ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಪೊಲೀಸರು ಹೇಳಿದ್ದೇನು?
ಡಿಸಿಪಿ ದೀಕ್ಷಿತ್ ಗೆಡಮ್ ಪ್ರಕಾರ, ಆರೋಪಿಗಳು ಕಳ್ಳತನದ ಉದ್ದೇಶದಿಂದ ಸೈಫ್ ಅಲಿಖಾನ್ ಮನೆಗೆ ಪ್ರವೇಶಿಸಿದ್ದರು. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು. ಭಾರತೀಯರೆಂಬುದಕ್ಕೆ ಯಾವುದೇ ದಾಖಲೆ ನೀಡುತ್ತಿಲ್ಲವಾದ್ದರಿಂದ ಅವರು ಬಾಂಗ್ಲಾದೇಶ ಮೂಲದವರೆಂದು ಪೊಲೀಸರು ಶಂಕಿಸಿದ್ದಾರೆ, ಆದರೆ ನಾವು ಆ ವಿಚಾರವಾಗಿ ತನಿಖೆ ನಡೆಸುತ್ತಿದ್ದೇವೆ. ಆತ ಬಾಂಗ್ಲಾದೇಶಿ ಎಂಬುದಕ್ಕೆ ಪ್ರಾಥಮಿಕ ಸಾಕ್ಷ್ಯವೆಂದರೆ ಆತನ ಬಳಿ ಭಾರತೀಯ ದಾಖಲೆಗಳಿಲ್ಲ. ಆರೋಪಿ ಬಾಂಗ್ಲಾದೇಶ ಮೂಲದವನಾಗಿದ್ದು, ಪಾಸ್‌ಪೋರ್ಟ್ ಕಾಯ್ದೆಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಪ್ರಕರಣಕ್ಕೆ ಸೇರಿಸಲಾಗಿದೆ. ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ ಬಳಿಕ ಇನ್ನಷ್ಟು ಮಾಹಿತಿ ಹೊರಬರಲಿದೆ.
