*ಆಪರೇಷನ್‌ ಗಂಗಾ ಮೂಲಕ ಸ್ವದೇಶಕ್ಕೆ ಕರೆತರುವ ಕೆಲಸ*ಈ ಹಿಂದಿನ ಸರ್ಕಾರಗಳು ಆತ್ಮನಿರ್ಭರ ಭಾರತ ನಿರ್ಮಿಸಲಿಲ್ಲ*ಶಸ್ತ್ರಾಸ್ತ್ರಗಳಿಗಾಗಿ ಹಿಂದಿನ ಸರ್ಕಾರಗಳು ವಿದೇಶಗಳ ಮೇಲೆ ನಿರ್ಭರ*ಆದರೆ ನಮ್ಮ ಸರ್ಕಾರದಿಂದ ಆತ್ಮ ನಿರ್ಭರಕ್ಕೆ ಹೆಚ್ಚಿನ ಆದ್ಯತೆ: ಮೋದಿ 

ಬಸ್ತಿ (ಉತ್ತರ ಪ್ರದೇಶ) (ಫೆ. 28): ಯಾವುದೇ ಸಂಕಷ್ಟದ ಸಂದರ್ಭದಲ್ಲಿ ಭಾರತೀಯರ ರಕ್ಷಣೆಗೆ ಮೊದಲ ಆದ್ಯತೆ ನೀಡಿದೆ. ಅದೇ ರೀತಿ ಈಗ ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗಾಗಿ ಹಗಲಿರುಳು ಎನ್ನದೇ ದಣಿವರಿಯದೇ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.ಉತ್ತರ ಪ್ರದೇಶದ ಬಸ್ತಿಯಲ್ಲಿ ಭಾನುವಾರ ಬಿಜೆಪಿಯ ಚುನಾವಣಾ ರಾರ‍ಯಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ‘ಪ್ರತಿಯೊಂದು ಸಂಕಷ್ಟದ ಸನ್ನಿವೇಶದಲ್ಲಿ ಭಾರತೀಯರ ಜೀವಗಳಿಗೆ ಸರ್ಕಾರ ಹೆಚ್ಚು ಆದ್ಯತೆ ನೀಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಇರುವ ಎಲ್ಲಾ ಮಾರ್ಗಗಳನ್ನು ನಾವು ಬಳಸಿಕೊಂಡಿದ್ದು, ‘ಆಪರೇಷನ್‌ ಗಂಗಾ’ ಕಾರಾರ‍ಯಚರಣೆ ಹೆಸರಿನಲ್ಲಿ ಅವರನ್ನು ಸ್ವದೇಶಕ್ಕೆ ಕರೆತರುವ ಕಾರ್ಯ ನಡೆಯುತ್ತಿದೆ’ ಎಂದರು.

‘ಇಡೀ ವಿಶ್ವಾದ್ಯಂತ ಪ್ರಕ್ಷುಬ್ಧಿ ಸ್ಥಿತಿ ನಿರ್ಮಾಣವಾಗುತ್ತಿದ್ದು, ಆತ್ಮನಿರ್ಭರತೆ (ಸ್ವಾವಲಂಬನೆ) ಮೂಲಕ ಭಾರತವನ್ನು ಶಕ್ತಿಯುತಗೊಳಿಸಬೇಕು’ ಎಂದು ಕರೆ ನೀಡಿದರು. ಆದರೆ ಈ ಹಿಂದಿನ ಸರ್ಕಾರಗಳು ಭದ್ರತಾ ಸಲಕರಣೆಗಳಿಗಾಗಿ ಇತರ ದೇಶಗಳ ಮೇಲೆ ನಿರ್ಭರ್‌ (ಅವಲಂಬನೆ)ವಾಗಿದ್ದವು. ಅಲ್ಲದೆ ಭಯೋತ್ಪಾದನೆಗೆ ನೆರವು ನೀಡಿದ ಕುಟುಂಬ ರಾಜಕಾರಣಿಗಳು ದೇಶಕ್ಕೆ ಬಲ ನೀಡಲಿಲ್ಲ. ಆದರೆ ನಾವಿಂದು ಆತ್ಮನಿರ್ಭರ ಭಾರತಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ರಾಷ್ಟ್ರ ಭಕ್ತಿ ಮತ್ತು ಕುಟುಂಬದ ಭಕ್ತಿಗಳ ಮಧ್ಯೆ ಭಾರೀ ವ್ಯತ್ಯಾಸವಿದೆ. 

ಇದನ್ನೂ ಓದಿ:ಅಂತಾರಾಷ್ಟ್ರೀಯ ಕೋರ್ಟ್‌ಗೆ ಉಕ್ರೇನ್‌ ಮೊರೆ: ಭದ್ರತಾ ಮಂಡಳಿಯಿಂದ ರಷ್ಯಾ ವಜಾಗೆ ಬಿಗಿಪಟ್ಟು

ಬಾಲಾಕೋಟ್‌ ಮೇಲಿನ ವಾಯುದಾಳಿಯ 3ನೇ ವರ್ಷದ ಸಂಭ್ರಮಾಚರಣೆಯನ್ನು ಫೆ.26ರಂದು ಆಚರಿಸಲಾಗಿದೆ. ಆದರೆ ಕುಟುಂಬ ರಾಜಕಾರಣಿಗಳು ಈ ಬಗ್ಗೆ ಸಾಕ್ಷ್ಯ ಕೇಳಿದ್ದರು ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.ಉತ್ತರ ಪ್ರದೇಶದ 10 ಜಿಲ್ಲೆಗಳಲ್ಲಿ ವ್ಯಾಪಿಸಿಕೊಂಡ 57 ವಿಧಾನಸಭೆ ಕ್ಷೇತ್ರಗಳಿಗೆ ಮಾ.3ರಂದು 6ನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಪೂರ್ವ ಉಕ್ರೇನ್‌ ಬಿಟ್ಟು, ಪಶ್ಚಿಮ ಉಕ್ರೇನ್‌ಗೆ ತೆರಳಿ: ಭಾರತೀಯರಿಗೆ ಸೂಚನೆ: ಸಂಘರ್ಷದ ಪ್ರದೇಶ ಬಿಟ್ಟು ಪಶ್ಚಿಮ ಉಕ್ರೇನ್‌ಗೆ ತೆರಳುವಂತೆ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‌ನಲ್ಲಿನ ಭಾರತೀಯರಿಗೆ ಸೂಚನೆ ನೀಡಿದೆ. ಪೂರ್ವ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರು ಸುರಕ್ಷತೆಯ ನಿಟ್ಟಿನಲ್ಲಿ ಉಚಿತ ತುರ್ತು ರೈಲು ಸೇವೆಯನ್ನು ಬಳಸಿಕೊಳ್ಳಬೇಕು. ಉಕ್ರೇನಿನ ರೇಲ್ವೆ ಇಲಾಖೆಯು ಮೊದಲು ಬಂದವರಿಗೆ ಸೇವೆ ಆಧಾರದ ಮೇಲೆ ಉಚಿತ ತುರ್ತು ರೈಲುಗಳನ್ನು ಕೀವ್‌ನಿಂದ ಆಯೋಜಿಸುತ್ತಿದೆ. ರೇಲ್ವೆ ನಿಲ್ದಾಣದಲ್ಲೇ ಈ ರೈಲುಗಳು ಹೊರಡುವ ವೇಳಾಪಟ್ಟಿಯೂ ಲಭ್ಯವಿದೆ. 

ಹೀಗಾಗಿ ಶೀಘ್ರ ಈ ಸೇವೆಯನ್ನು ಬಳಸಿ ಉಕ್ರೇನಿನ ನೆರೆಯ ದೇಶಗಳಾದ ಪೋಲಂಡ್‌, ಸ್ಲೊವಾಕಿಯಾ, ರೋಮಾನಿಯಾ ಅಥವಾ ಹಂಗೇರಿಯನ್ನು ತಲುಪಬೇಕು ಎಂದು ಭಾರತೀಯ ರಾಯಭಾರ ಕಚೇರಿ ಭಾನುವಾರ ಟ್ವೀಟ್‌ ಮಾಡಿದೆ.

ಇದನ್ನೂ ಓದಿ:Russia Ukraine Crisis: 31 ಕನ್ನಡಿಗರು ತವರಿಗೆ ವಾಪಸ್:‌ ಸಚಿವ ಜೋಶಿ, ಅಶೋಕ್‌ ಸ್ವಾಗತ

ರಷ್ಯಾ ಮೇಲೆ ಗೂಗಲ್‌, ಫೇಸ್ಬುಕ್‌, ಯುಟ್ಯೂಬ್‌ ನಿರ್ಬಂಧ: ಪುಟ್ಟದೇಶ ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಮೇಲೆ ಅಮೆರಿಕ, ಬ್ರಿಟನ್‌ ಮತ್ತಿತರ ದೇಶಗಳು ಆರ್ಥಿಕ ನಿರ್ಬಂಧ ಹೇರಿದ ಬೆನ್ನಲ್ಲೇ, ಅಮೆರಿಕದ ಜಗದ್ವಿಖ್ಯಾತ ಐಟಿ ಕಂಪನಿಗಳು ವ್ಲಾದಿಮಿರ್‌ ಪುಟಿನ್‌ ದೇಶದ ಮೇಲೆ ಕೆಲವೊಂದು ಕ್ರಮಗಳನ್ನು ಪ್ರಕಟಿಸಿವೆ. ತಮ್ಮ ಸೇವೆಯನ್ನು ಬಳಸುತ್ತಿರುವ ರಷ್ಯಾ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆಗಳ ಜತೆ ಜಾಹೀರಾತು ಹಣ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿವೆ.

ಹೊಸ ಬೆಳವಣಿಗೆಗಳನ್ನು ಸಕ್ರಿಯವಾಗಿ ನಿಗಾ ವಹಿಸಲಾಗುತ್ತಿದೆ. ಅಗತ್ಯ ಬಿದ್ದರೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಗೂಗಲ್‌ ಹೇಳಿದೆ. ಮತ್ತೊಂದೆಡೆ, ರಷ್ಯಾದ ಕೆಲವೊಂದು ಚಾನಲ್‌ಗಳು ವಿಡಿಯೋದಿಂದ ಗಳಿಸುತ್ತಿದ್ದ ಹಣಕ್ಕೆ ಕಡಿವಾಣ ಹಾಕಿರುವುದಾಗಿ ಯುಟ್ಯೂಬ್‌ ಪ್ರಕಟಿಸಿದೆ. ರಷ್ಯಾದ ಸರ್ಕಾರಿ ಮಾಧ್ಯಮಗಳು ಜಾಹೀರಾತು ಪ್ರಸಾರ ಮಾಡುವುದಕ್ಕೆ ಹಾಗೂ ತನ್ನ ವೇದಿಕೆ ಬಳಸಿ ಹಣ ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿರುವುದಾಗಿ ಫೇಸ್‌ಬುಕ್‌ ಕೂಡ ಹೇಳಿದೆ.

ಯುರೋಪ್‌ನಲ್ಲಿ ರಷ್ಯಾ ವಿಮಾನ ಹಾರಾಟಕ್ಕೆ ನಿರ್ಬಂಧ: ಉಕ್ರೇನಿನ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದಕ್ಕಾಗಿ ಯುರೋಪಿಯನ್‌ ಒಕ್ಕೂಟದ 27 ರಾಷ್ಟ್ರಗಳು ತಮ್ಮ ವಾಯುಗಡಿಯಲ್ಲಿ ರಷ್ಯಾದ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿವೆ ಯುರೋಪಿಯನ್‌ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಭಾನುವಾರ ಹೇಳಿದ್ದಾರೆ.

ಯುರೋಪಿಯನ್‌ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವೊನ್‌ ಡೆರ್‌ ಲೇಯೆನ್‌ ‘ಮೊಟ್ಟಮೊದಲ ಬಾರಿ ಯುರೋಪಿಯನ್‌ ಒಕ್ಕೂಟವು ಯುದ್ಧವನ್ನು ಎದುರಿಸುತ್ತಿರುವ ರಾಷ್ಟ್ರಕ್ಕೆ (ಉಕ್ರೇನಿಗೆ) ಶಸ್ತ್ರಾಸ್ತ್ರಗಳು, ಇನ್ನಿತರ ಸಾಮಗ್ರಿಗಳ ಖರೀದಿ ಹಾಗೂ ವಿತರಣೆಗೆ ಹಣಕಾಸು ಒದಗಿಸಲಿದೆ. ರಷ್ಯಾದ ವಿಮಾನಗಳನ್ನು 27 ರಾಷ್ಟ್ರಗಳ ವಾಯುಗಡಿಯಲ್ಲಿ ನಿರ್ಬಂಧಿಸಲಾಗಿದೆ. 

ರಷ್ಯಾ ಒಡೆತನದ, ರಷ್ಯಾ ನೋಂದಾಯಿತ ಅಥವಾ ರಷ್ಯಾ ನಿಯಂತ್ರಿತ ಎಲ್ಲ ವಿಮಾನಗಳ ಮೇಲೂ ನಿಷೇಧ ಹೇರಲು ನಾವು ಪ್ರಸ್ತಾಪಿಸಿದ್ದೇವೆ. ರಷ್ಯಾ ವಿಮಾನಗಳು ನಮ್ಮ ದೇಶಗಳಲ್ಲಿ ಭೂಸ್ಪರ್ಶ ಮಾಡುವಂತಿಲ್ಲ. ನಮ್ಮ ವಾಯುಗಡಿಯಲ್ಲಿ ಹಾರಾಡುವಂತಿಲ್ಲ’ ಎಂದಿದ್ದಾರೆ.

‘ರಷ್ಯಾದ ಮಾಧ್ಯಮಗಳ ಮೇಲೂ ನಿರ್ಬಂಧ ಹೇರಲಾಗಿದೆ. ಇನ್ನು ರಷ್ಯಾ ಟುಡೇ, ಸ್ಪುಟ್ನಿಕ್‌ , ಇನ್ನಿತರ ಪತ್ರಿಕೆಗಳು ಪುಟಿನ್‌ ಸಾರಿದ ಯುದ್ಧದ ಬಗ್ಗೆ ರಷ್ಯಾದ ಸುಳ್ಳು ಸ್ಪಷ್ಟನೆಗಳನ್ನು ಪ್ರಕಟಿಸುವಂತಿಲ್ಲ. ಒಕ್ಕೂಟವು ರಷ್ಯಾಕ್ಕೆ ಬೆಂಬಲಿಸಿದ ಬೆಲಾರಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಲುಕಾಶೆಂಕೊ ವಿರುದ್ಧವೂ ಶೀಘ್ರ ಕ್ರಮ ಕೈಗೊಳ್ಳಲಿದೆ’ ಎಂದಿದ್ದಾರೆ.