Asianet Suvarna News Asianet Suvarna News

ಅಂತಾರಾಷ್ಟ್ರೀಯ ಕೋರ್ಟ್‌ಗೆ ಉಕ್ರೇನ್‌ ಮೊರೆ: ಭದ್ರತಾ ಮಂಡಳಿಯಿಂದ ರಷ್ಯಾ ವಜಾಗೆ ಬಿಗಿಪಟ್ಟು

*ಯುದ್ಧ ನಿಲ್ಲಿಸುವಂತೆ ಅರ್ಜಿಯಲ್ಲಿ ಕೋರಿಕೆ: ದಾಳಿಗೆ ರಷ್ಯಾ ಹೊಣೆ ಮಾಡಲು ಮನವಿ
*ಉಕ್ರೇನ್‌ ಕ್ಷಿಪಣಿ ದಾಳಿಗೆ ಪ್ರಮುಖ ಚೆಚೆನ್‌ ನಾಯಕ ಸೇರಿ ನೂರಾರು ಸಾವು
*ರಷ್ಯಾದ ವಿಶೇಷ ಕಾರ್ಯಾಚರಣೆ ಪಡೆಗಳಿಗೆ ಪುಟಿನ್‌ ಧನ್ಯವಾದ

Ukraine approaches International Court of Justice against Russia mnj
Author
Bengaluru, First Published Feb 28, 2022, 5:54 AM IST

ಕೀವ್‌ (ಫೆ. 28): ತನ್ನ ಮೇಲಿನ ದಾಳಿಯಲ್ಲಿ ತಡೆಯಲು ನ್ಯಾಯಾಂಗದ ಮೊರೆ ಹೋಗಿರುವ ಉಕ್ರೇನ್‌ ಸರ್ಕಾರ, ರಷ್ಯಾ ಸರ್ಕಾರದ ದಾಳಿಯ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.‘ತನ್ನ ದಾಳಿಯನ್ನು ಸಮರ್ಥಿಸಿಕೊಳ್ಳಲು, ನರಮೇಧದ ಪರಿಕಲ್ಪನೆಯನ್ನೇ ತಿರುಚಿರುವ ರಷ್ಯಾವನ್ನು ದಾಳಿಗೆ ಹೊಣೆ ಮಾಡಬೇಕು. ತಕ್ಷಣವೇ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ರಷ್ಯಾಕ್ಕೆ ಸೂಚಿಸಬೇಕು ಮತ್ತು ಮುಂದಿನ ವಾರವೇ ತಮ್ಮ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಕ್ರೇನ್‌ ಸರ್ಕಾರ ಮನವಿ ಮಾಡಿದೆ.
ಈ ಬಗ್ಗೆ ಸ್ವತಃ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಯಾವುದೀ ಕೋರ್ಟ್‌?: ಅಂತಾರಾಷ್ಟ್ರೀಯ ನ್ಯಾಯಾಲಯವು, ವಿಶ್ವಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ನ್ಯಾಯಾಂಗ ಸಂಸ್ಥೆ. ಎರಡು ದೇಶಗಳ ನಡುವಿನ ಬಿಕ್ಟಟಿನ ಸಂದರ್ಭದಲ್ಲಿ ಇದು ವಿಚಾರಣೆ ನಡೆಸುತ್ತದೆ. ಈ ಹಿಂದೆ ಉಕ್ರೇನ್‌ನ ಕ್ರೆಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಾಗಲೂ ಅದರ ವಿರುದ್ಧ ಉಕ್ರೇನ್‌ ನ್ಯಾಯಾಲಯಕ್ಕೆ ದೂರು ನೀಡಿತ್ತು. ಆ ಪ್ರಕರಣದಲ್ಲಿ ತನಗೆ ಮಧ್ಯಪ್ರವೇಶ ಮಾಡುವ ಹಕ್ಕು ಇದೆ ಎಂದು 2019ರಲ್ಲಿ ನೀಡಿದ್ದ ತೀರ್ಪಿನ ವೇಳೆ ನ್ಯಾಯಾಲಯ ಸ್ಪಷ್ಟನೆ ನೀಡಿತ್ತು.

ಜೆಲೆನ್‌ಸ್ಕೀ ಹತ್ಯೆಗೆ ಬಂದಿದ್ದ ಚೆಚೆನ್‌ ಉಗ್ರರೇ ಉಕ್ರೇನ್‌ ದಾಳಿಗೆ ಬಲಿ!: ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಸೇರಿದಂತೆ ಪ್ರಮುಖ ಉಕ್ರೇನಿ ನಾಯಕರ ಹತ್ಯೆಗೆಂದೇ ರಷ್ಯಾ ಅಧ್ಯಕ್ಷ ಪುಟಿನ್‌ ನಿಯೋಜಿಸಿದ್ದ ಚೆಚೆನ್‌ ಪಾತಕಿಗಳಿಗೆ ಭರ್ಜರಿ ಏಟು ಬಿದ್ದಿದೆ. ಉಕ್ರೇನಿ ಪಡೆಗಳು ನಡೆಸಿದ ಮಾರಕ ಕ್ಷಿಪಣಿ ದಾಳಿಯಲ್ಲಿ ಚೆಚೆನ್‌ ಉಗ್ರ ಪಡೆಯ ನೂರಾರು ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Russia Ukraine Crisis: ಉಕ್ರೇನ್‌ನ 2ನೇ ದೊಡ್ಡ ನಗರಕ್ಕೆ ರಷ್ಯಾ ಸೇನೆ ಲಗ್ಗೆ

ರಕ್ತಪಿಪಾಸುಗಳು ಎಂದೇ ಕುಖ್ಯಾತಿ ಹೊಂದಿರುವ ಈ ಚೆಚೆನ್‌ ಉಗ್ರರ ಪಡೆ ಶನಿವಾರ ವಾಹನವೊಂದರಲ್ಲಿ ಆಗಮಿಸುತ್ತಿದ್ದ ವೇಳೆ ಉಕ್ರೇನಿ ಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ಈ ದಾಳಿಯಲ್ಲಿ ಪಡೆಯ ಪ್ರಮುಖ ನಾಯಕ ಜ.ಮೊಗಮೆದ್‌ ತುಶ್ಚೇವ್‌ ಸೇರಿದಂತೆ ನೂರಾರು ಬಂಡುಕೋರರು ಸಾವನ್ನಪ್ಪಿದ್ದಾರೆ. ಇದು ತಂಡಕ್ಕೆ ಬಿದ್ದ ಭಾರೀ ಹೊಡೆತ ಎಂದು ಹೇಳಲಾಗಿದೆ. ಜೊತೆಗೆ ಪ್ರಮುಖ ಉಕ್ರೇನಿ ನಾಯಕರನ್ನು ಸೆರೆ ಹಿಡಿಯುವ ಅಥವಾ ಹತ್ಯೆಗೈಯುವ ಅಧ್ಯಕ್ಷ ಪುಟಿನ್‌ ಗುರಿಗೆ ಈ ಬೆಳವಣಿಗೆ ಭಾರೀ ಪೆಟ್ಟು ನೀಡಿದೆ ಎಂದು ವಿಶ್ಲೇಷಿಸಲಾಗಿದೆ.

ರಷ್ಯಾದ ವಿಶೇಷ ಕಾರ್ಯಾಚರಣೆ ಪಡೆಗಳಿಗೆ ಪುಟಿನ್‌ ಧನ್ಯವಾದ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ತಮ್ಮ ಸೇನೆಯ ವಿಶೇಷ ಕಾರ್ಯಾಚರಣೆ ಪಡೆಗಳು ಉಕ್ರೇನಿನ ಯುದ್ಧದಲ್ಲಿ ಸಲ್ಲಿಸಿದ ಸೇವೆಗಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

‘ರಷ್ಯಾ ಸೇನಾಪಡೆಯಲ್ಲಿರುವ ವಿಶೇಷ ಕಾರ್ಯಾಚರಣೆ ಪಡೆಗಳು ಹಾಗೂ ಅವುಗಳ ಪರಿಣತ ಮುಖಂಡರು ತಮ್ಮ ಮಾತೃಭೂಮಿಗೆ ನಿಷ್ಠರಾಗಿರುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದ್ದರು. ಅದರಂತೆ ಯುದ್ಧದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳು’ ಎಂದು ರಷ್ಯಾ ಅಧ್ಯಕ್ಷರ ಕಚೇರಿ ಕ್ರೆಮ್ಲಿನ್‌ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ. ರಷ್ಯಾದ ರಕ್ಷಣಾ ಸಚಿವಾಲಯವು ಭಾನುವಾರ ಉಕ್ರೇನಿನ ಹೆನಿಚೆಸ್ಕ್‌ ಹಾಗೂ ಖೇರ್ಸನ್‌ ವಿಮಾನ ನಿಲ್ದಾಣವನ್ನು ರಷ್ಯಾಪಡೆಗಳು ತಮ್ಮ ವಶಕ್ಕೆ ಪಡೆದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜುಡೋ ಫೆಡೆರೇಶನ್‌ ಗೌರವಾಧ್ಯಕ್ಷ ಸ್ಥಾನದಿಂದ ಪುಟಿನ್‌ ಅಮಾನತು: ಉಕ್ರೇನಿನ ಮೇಲೆ ರಷ್ಯಾ ಅಪ್ರಚೋದಿತ ದಾಳಿ ನಡೆಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಜುಡೋ ಫೆಡೆರೇಶನ್‌ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ರನ್ನು ಗೌರವಾಧ್ಯಕ್ಷ ಸ್ಥಾನದಿಂದ ಭಾನುವಾರ ಅಮಾನತುಗೊಳಿಸಿದೆ.

ಇದನ್ನೂ ಓದಿ: Russia Ukraine Crisis: ಯುದ್ಧಪೀಡಿತ ದೇಶದಿಂದ ಒಂದೇ ದಿನ 688 ಭಾರತೀಯರ ರಕ್ಷಣೆ

‘ಉಕ್ರೇನಿನ ಮೇಲೆ ಯುದ್ಧ ಸಾರಿದ್ದಕ್ಕಾಗಿ ಅಂತಾರಾಷ್ಟ್ರೀಯ ಜುಡೋ ಫೆಡರೇಶನ್‌ ಗೌರವಾಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಜುಡೋ ಫೆಡೆರೇಶನ್‌ ರಾಯಭಾರಿ ಸ್ಥಾನದಿಂದ ವ್ಲಾದಿಮಿರ್‌ ಪುಟಿನ್‌ರನ್ನು ಅಮಾನತುಗೊಳಿಸುತ್ತದೆ’ ಎಂದು ಐಜೆಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಟ್ಲರ್‌ ಸೋಲಿಸಿದ್ದೆವು, ಪುಟಿನ್‌ರನ್ನು ಸೋಲಿಸುತ್ತೇವೆ: ಉಕ್ರೇನ್‌ನನ್ನು ರಕ್ಷಿಸಲು ಬಯಸುವ ವಿದೇಶಿ ಸ್ವಯಂಸೇವಕರಿಗಾಗಿ ಉಕ್ರೇನ್‌ ಅಂತಾರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿಲಿದೆ ಎಂದು ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ ಭಾನುವಾರ ಹೇಳಿದ್ದಾರೆ.‘ಇದು ನಮ್ಮ ದೇಶಕ್ಕೆ ನೀವೆಲ್ಲ ನೀಡುತ್ತಿರುವ ಬೆಂಬಲವನ್ನು ಸೂಚಿಸಲಿದೆ’ ಎಂದೂ ಝೆಲೆನ್‌ಸ್ಕಿ ಹೇಳಿದ್ದಾರೆ.

ಈ ನಡುವೆ, ಉಕ್ರೇನಿನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಉಕ್ರೇನನ್ನು ರಕ್ಷಿಸಲು ಸ್ವಯಂಸೇವಕರ ಸೇನೆಯನ್ನು ಸೇರಲು ಸಿದ್ಧವಿರುವ ವಿದೇಶೀಯರು ತಮ್ಮ ದೇಶದಲ್ಲಿದ್ದ ಉಕ್ರೇನಿನ ರಾಜತಾಂತ್ರಿಕ ಕಚೇರಿಯನ್ನು ಸಂಪರ್ಕಿಸಬಹುದು. ನಾವೆಲ್ಲ ಒಟ್ಟಾಗಿ ಹಿಂದೆ ಹಿಟ್ಲರ್‌ನನ್ನು ಸೋಲಿಸಿದ್ದೆವು, ನಾವು ಈಗ ಪುಟಿನ್‌ನನ್ನೂ ಸೋಲಿಸುತ್ತೇವೆ’ ಎಂದಿದ್ದಾರೆ.

ಭದ್ರತಾ ಮಂಡಳಿಯಿಂದ ರಷ್ಯಾ ಹೊರ ಹಾಕಿ: ಜೆಲೆನ್‌ಸ್ಕಿ ಆಗ್ರಹ: ತಮ್ಮ ದೇಶದ ಮೇಲೆ ದಾಳಿ ನಡೆಸಿರುವ ರಷ್ಯಾವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಒತ್ತಾಯ ಮಾಡಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜೆಲೆನ್‌ಸ್ಕಿ ‘ಉಕ್ರೇನ್‌ ಮೇಲಿನ ರಷ್ಯಾ ದಾಳಿಯು ಹತ್ಯಾಕಾಂಡಕ್ಕೆ ಸಮ. ದುಷ್ಟತನದ ಹಾದಿ ಹಿಡಿದಿರುವ ರಷ್ಯಾ ವಿರುದ್ಧ ಜಾಗತಿಕ ಸಮುದಾಯ ಒಂದಾಗಿ, ಅದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸ್ಥಾನದಿಂದ ಹೊರಹಾಕುವ ಕೆಲಸ ಮಾಡಬೇಕು. ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ಕುರಿತು ಅಂತಾರಾಷ್ಟ್ರೀಯ ಯುದ್ಧಾಪರಾಧ ನ್ಯಾಯಾಧಿಕರಣದಿಂದ ತನಿಖೆ ನಡೆಸಬೇಕು ಮತ್ತು ದಾಳಿಯನ್ನು ಭಯೋತ್ಪಾದನೆ ಎಂದು ಘೋಷಿಸಬೇಕು’ ಎಂದು ಒತ್ತಾಯಿಸಿದರು.

Follow Us:
Download App:
  • android
  • ios