ರಾಹುಲ್, ಪ್ರಿಯಾಂಕಾ ನಡೆಸಿದ ಸಂಧಾನ ಯಶಸ್ವಿ| ರಾಜಸ್ಥಾನದ ಬಂಡಾಯ ನಾಯಕ ಮತ್ತೆ ಕಾಂಗ್ರೆಸ್ಸಿಗೆ
ನವದೆಹಲಿ(ಆ.11): ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿಂಗಳ ಹಿಂದೆ ಬಂಡಾಯ ಸಾರುವ ಮೂಲಕ ಉಪಮುಖ್ಯಮಂತ್ರಿ ಹುದ್ದೆ ಕಳೆದುಕೊಂಡು, ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದ ಸಚಿನ್ ಪೈಲಟ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಮರಳಲು ಮುಂದಾಗಿದ್ದಾರೆ.
ರಾಜಸ್ಥಾನದ ಬಂಡಾಯ ನಾಯಕ ಪೈಲಟ್ ದಾರಿ ಬದಲಿಸಿದ್ದೇಕೆ?
ಅಶೋಕ್ ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಂಡಾಯ ಸಾರಿದ್ದ ಸಚಿನ್ ಪೈಲಟ್ ಅವರು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರ ಜತೆ ಸೋಮವಾರ ಹಲವು ತಾಸು ಮಾತುಕತೆ ನಡೆಸಿದರು. ಈ ವೇಳೆ ಪೈಲಟ್ ಅವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ಚರ್ಚೆ ನಡೆಯಿತು. ಇದಾದ ಬಳಿಕ ಪಕ್ಷವೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತು.
ಸಚಿನ್ ಪೈಲಟ್ ಅವರ ಜತೆ ರಾಹುಲ್, ಪ್ರಿಯಾಂಕಾ ಅವರು ಮುಕ್ತ ಮಾತುಕತೆ ನಡೆಸಿದ್ದಾರೆ. ಪಕ್ಷ ಹಾಗೂ ರಾಜಸ್ಥಾನದ ಸರ್ಕಾರ ಹಿತಕ್ಕಾಗಿ ದುಡಿಯುವ ಬದ್ಧತೆಯನ್ನು ಸಚಿನ್ ಪೈಲಟ್ ವ್ಯಕ್ತಪಡಿಸಿದ್ದಾರೆ. ಅವರು ಹಾಗೂ ಅವರ ಜತೆಗಿರುವ ಬಂಡಾಯ ಶಾಸಕರು ಎತ್ತಿರುವ ವಿಷಯಗಳ ಬಗ್ಗೆ ಗಮನಹರಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತ್ರಿಸದಸ್ಯ ಸಮಿತಿ ರಚನೆ ಮಾಡಿದ್ದಾರೆ ಎಂದು ಪಕ್ಷದ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರಾಹುಲ್-ಪ್ರಿಯಾಂಕಾ ಭೇಟಿ ಮಾಡಿ ಪೈಲಟ್ ನೀಡಿದ ವಾಗ್ದಾನ!
ಪತನ ಭೀತಿಯಿಂದ ಗೆಹ್ಲೋಟ್ ಪಾರು
ಆ.14ರಂದು ರಾಜಸ್ಥಾನ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದ್ದು, ಬಹುಮತ ಸಾಬೀತು ಪರೀಕ್ಷೆ ನಡೆಯುವ ನಿರೀಕ್ಷೆ ಇದೆ. ಪೈಲಟ್ ಅವರು ಮರಳಿ ಪಕ್ಷಕ್ಕೆ ಬಂದಿರುವುದರಿಂದ ಸರ್ಕಾರಕ್ಕಿದ್ದ ಪತನ ಭೀತಿ ನಿವಾರಣೆಯಾಗಿದೆ ಎಂದು ಹೇಳಲಾಗಿದೆ.
ನಾನು ಬಿಜೆಪಿ ಸೇರುವುದಿಲ್ಲ ಎಂದು ಆರಂಭದಿಂದಲೂ ಹೇಳಿಕೊಂಡು ಬಂದಿದ್ದೆ. ಅದರಂತೆ ನಡೆದುಕೊಂಡಿದ್ದೇನೆ.
- ಸಚಿನ್ ಪೈಲಟ್
ರಾಜಸ್ಥಾನದಿಂದ ಹೊರಗೆ ಹುದ್ದೆ?
ಬಂಡಾಯ ಸಾರುವ ಮುನ್ನ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜತೆಗೆ ಡಿಸಿಎಂ ಹುದ್ದೆಯನ್ನು ಸಚಿನ್ ಪೈಲಟ್ ನಿರ್ವಹಿಸುತ್ತಿದ್ದರು. ಇದೀಗ ಅದೇ ಹುದ್ದೆಗಳನ್ನು ಅವರಿಗೆ ನೀಡಲಾಗುತ್ತದಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ರಾಜಸ್ಥಾನದ ಹೊರಗೆ ಬಹುಶಃ ಎಐಸಿಸಿ ಮಟ್ಟದಲ್ಲಿ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ಗೆ ಮುಖ್ಯ ಕಚೇರಿಯೂ ಕೈತಪ್ಪುವ ಭೀತಿ!
ಪ್ರಿಯಾಂಕಾ ತಂತ್ರಗಾರಿಕೆ
ಸಚಿನ್ ಪೈಲಟ್ ಅವರು ಪಕ್ಷದ ವಿರುದ್ಧವೇ ಬಂಡಾಯ ಸಾರಿದ ಬಳಿಕ ಅವರನ್ನು ಭೇಟಿ ಮಾಡಿ ಅಸಮಾಧಾನ ನಿವಾರಣೆ ಮಾಡಲು ಪ್ರಿಯಾಂಕಾ ವಾದ್ರಾ ಯತ್ನಿಸಿದ್ದರು. ಕಳೆದ ತಿಂಗಳು ಭೇಟಿಗೂ ಯತ್ನಿಸಿದ್ದರು. ಆದರೆ ಪೈಲಟ್ ಒಪ್ಪಿರಲಿಲ್ಲ. ಎರಡು ವಾರಗಳ ಹಿಂದೆ ದೆಹಲಿಯಲ್ಲಿ ಪೈಲಟ್ ಜತೆ ಅವರು ಮಾತುಕತೆ ನಡೆಸಿದ್ದರು. ಅದು ಈಗ ಫಲಪ್ರದವಾಗಿದೆ ಎಂದು ಮೂಲಗಳು ತಿಳಿಸಿವೆ.
