ಭಯೋತ್ಪಾದನೆಯನ್ನು ತಡೆಗಟ್ಟಲು ಎಲ್ಲಾ ದೇಶಗಳು ಒಗ್ಗಟ್ಟಾಗಿ ಪ್ರಯತ್ನಿಸಬೇಕು’ ಎಂಬ ಭುಟ್ಟೋ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ವಿಶ್ವಾಸಾರ್ಹತೆ ಅವರ ವಿದೇಶಿ ವ್ಯವಹಾರ ನಿಧಿಗಿಂತ ವೇಗವಾಗಿ ಕರಗುತ್ತಿದೆ’ ಎಂದು ಜೈಶಂಕರ್‌ ಚಾಟಿ ಬೀಸಿದರು.

ಬೆನೌಲಿಂ (ಗೋವಾ) (ಮೇ 6, 2023): ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಭೆಯಲ್ಲಿ ಭಾಗಿಯಾಗಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಅವರಿಗೆ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಭರ್ಜರಿ ‘ತಪರಾಕಿ’ ಹಾಕಿದ್ದಾರೆ. ಭುಟ್ಟೋ ಅವರನ್ನು ‘ಭಯೋತ್ಪಾದನೆ ಉದ್ಯಮದ ಪ್ರಚಾರಕ ಮತ್ತು ವಕ್ತಾರ’ ಎಂದು ವಿದೇಶಾಂಗ ಜೈಶಂಕರ್‌ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೈಶಂಕರ್‌, ‘ಭಯೋತ್ಪಾದನೆಯನ್ನು ತಡೆಗಟ್ಟಲು ಎಲ್ಲಾ ದೇಶಗಳು ಒಗ್ಗಟ್ಟಾಗಿ ಪ್ರಯತ್ನಿಸಬೇಕು’ ಎಂಬ ಭುಟ್ಟೋ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನದ ವಿಶ್ವಾಸಾರ್ಹತೆ ಅವರ ವಿದೇಶಿ ವ್ಯವಹಾರ ನಿಧಿಗಿಂತ ವೇಗವಾಗಿ ಕರಗುತ್ತಿದೆ’ ಎಂದು ಚಾಟಿ ಬೀಸಿದರು.

ಇದನ್ನು ಓದಿ: ಎದೆಗೆ ಗನ್ನಿಟ್ಟು ನಮ್ಮ ಬಳಿ ಇದ್ದುದ್ದನ್ನೆಲ್ಲ ದೋಚಿದ್ರು: ಸೂಡಾನ್‌ನಿಂದ ಪಾರಾದ ಭಾರತೀಯರ ಸಂಕಷ್ಟ ಕಥನ

ಇನ್ನು ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಮಾತುಕತೆಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಯೋತ್ಪಾದನೆಗೆ ಬಲಿಪಶುವಾಗಿರುವವರು ಭಯೋತ್ಪಾದನೆಯ ಅಪರಾಧಿಗಳ ಜೊತೆ ಕೂರಲು ಸಾಧ್ಯವಿಲ್ಲ. ಕಾಶ್ಮೀರದ ವಿಷಯದಲ್ಲಿ ಸದಾ ತೊಂದರೆ ನೀಡುತ್ತಿರುವ ಪಾಕಿಸ್ತಾನದ ಜೊತೆ ಮಾತುಕತೆ ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಈ ಹಿಂದೆ ಭಾರತದ ಭಾಗವಾಗಿತ್ತು. ಈಗಲೂ ಭಾರತದ ಭಾಗವಾಗಿದೆ. ಮುಂದೆಯೂ ಭಾರತದ ಭಾಗವಾಗಿರಲಿದೆ’ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಜೈಶಂಕರ್‌ ‘ಭಯೋತ್ಪಾದನೆಯನ್ನು ಮಟ್ಟ ಹಾಕುವುದು ಶಾಂಘೈ ಸಹಕಾರ ಸಂಘದ ಪ್ರಮುಖ ನಿರ್ಧಾರವಾಗಿದೆ. ಅಲ್ಲದೇ ಭಯೋತ್ಪಾದನೆಗೆ ಯಾವುದೇ ಸಮರ್ಥನೆಗಳಿಲ್ಲ ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ. ಹಾಗಾಗಿ ಭಯೋತ್ಪಾದನೆ ಯಾವ ರೀತಿಯಲ್ಲಿದ್ದರೂ ನಾವು ಅದನ್ನು ತಡೆಗಟ್ಟಬೇಕು’ ಎಂದು ಹೇಳಿದ್ದರು.

ಇದನ್ನೂ ಓದಿ: ಸೂಡಾನ್‌ನಲ್ಲಿ ಸಿಕ್ಕಿಬಿದ್ದ ಕನ್ನಡಿಗರು ಸೇರಿ 3000 ಭಾರತೀಯರ ರಕ್ಷಣೆಗೆ ಏರ್‌ಲಿಫ್ಟ್‌ ಮಾಡಲು ಮೋದಿ ಸೂಚನೆ

ಚೀನಾಗೂ ಜೈಶಂಕರ್‌ ಚಾಟಿ
ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಬಗ್ಗೆ ಪ್ರತಿಕ್ರಿಯಿಸಿದ ಜೈಶಂಕರ್‌, ಅಭಿವೃದ್ಧಿಗಾಗಿ ಪರಸ್ಪರ ಸಂಬಂಧ ಹೊಂದುವುದು ಒಳ್ಳೆಯದೇ, ಆದರೆ ಅದು ದೇಶದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡಬಾರದು ಎಂದು ಹೇಳಿದರು. ‘ಅದೇ ರೀತಿ ಭಾರತ ಮತ್ತು ಚೀನಾದ ನಡುವಿನ ಸಂಬಂಧ ಚೆನ್ನಾಗಿಲ್ಲ. ಏಕೆಂದರೆ ಗಡಿ ಪ್ರದೇಶದಲ್ಲಿ ಸಂಘರ್ಷಗಳು ಪದೇ ಪದೇ ನಡೆಯುತ್ತಲೇ ಇವೆ. ನಾವು ಇದರ ಪರಿಹಾರಕ್ಕೆ ನೇರವಾಗಿ ಮಾತುಕತೆಯನ್ನೂ ನಡೆಸಿದ್ದೇವೆ’ ಎಂದು ಹೇಳಿದರು.

ಉಗ್ರವಾದ ತಡೆಗೆ ಒಗ್ಗಟ್ಟಿನ ಹೋರಾಟ: ಪಾಕ್‌ ಸಚಿವ ಭುಟ್ಟೋ
‘ಜಾಗತಿಕವಾಗಿ ಭಯೋತ್ಪಾದನೆಯನ್ನು ತಡೆಗಟ್ಟಲು ಶಾಂಘೈ ಸಹಕಾರ ಸಂಘಟನೆ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಕೇವಲ ರಾಜತಾಂತ್ರಿಕ ಅಂಕಗಳ ಗಳಿಕೆಗಾಗಿ ಭಯೋತ್ಪಾದನೆಯನ್ನು ಅಸ್ತ್ರ ಮಾಡಿಕೊಳ್ಳಬಾರದು’ ಎಂದು ಶುಕ್ರವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಹೇಳಿದ್ದಾರೆ.

ಇದನ್ನೂ ಓದಿ: ಕ್ರಿಕೆಟ್‌ ಟೀಂ ಸ್ಟೈಲಲ್ಲಿ ಕ್ಯಾಪ್ಟನ್‌ ಮೋದಿ ಕೆಲಸ: ವಿದೇಶಾಂಗ ಸಚಿವ ಜೈಶಂಕರ್‌ ವಿವರಿಸಿದ್ದು ಹೀಗೆ..

ಗೋವಾದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಜೈಶಂಕರ್‌ ಅವರ ಬಳಿಕ ಮಾತನಾಡಿದ ಭುಟ್ಟೋ, ‘ಜಾಗತಿಕ ಭದ್ರತೆಗೆ ಭಯೋತ್ಪಾದನೆ ದೊಡ್ಡ ಅಪಾಯವಾಗಿದೆ. ಹಾಗಾಗಿ ನಮ್ಮ ಜನರ ರಕ್ಷಣೆಗಾಗಿ ನಾವು ಒಗ್ಗಟ್ಟಾಗಿ ಹೋರಾಡಬೇಕಿದೆ. ರಾಜತಾಂತ್ರಿಕ ಅಂಕಗಳನ್ನು ಗಳಿಸುವುದಕ್ಕಾಗಿ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸಿಕೊಳ್ಳುವುದರಿಂದ ಮೊದಲು ನಾವು ತಪ್ಪಿಸಿಕೊಳ್ಳಬೇಕು. ನಾವು ನಮ್ಮ ಜನರ ಭವಿಷ್ಯಕ್ಕಾಗಿ ಇದರ ವಿರುದ್ಧ ಒಗ್ಗಟ್ಟಿನ ಒಪ್ಪಂದಕ್ಕೆ ಬರಬೇಕು’ ಎಂದರು.

ಹಸ್ತಲಾಘವ ಮಾಡದೇ ಭುಟ್ಟೋಗೆ ಜೈಶಂಕರ್‌ ‘ನಮಸ್ಕಾರ’
ಪಣಜಿ: ಶಾಂಘೈ ಸಹಕಾರ ಸಂಸ್ಥೆಯ ಸಭೆ ನಿಮಿತ್ತ ಭಾರತದ ಗೋವಾಗೆ ಆಗಮಿಸಿರುವ ಪಾಕ್‌ ಸೇರಿದಂತೆ ಸದಸ್ಯ ದೇಶಗಳ ವಿದೇಶಾಂಗ ಸಚಿವರನ್ನು ಎಸ್‌.ಜೈಶಂಕರ್‌ ಅವರು ಹಸ್ತಲಾಘನ ಮಾಡದೇ ಕೇವಲ ನಮಸ್ಕಾರ ಮಾಡಿ ಸ್ವಾಗತಿಸಿದರು. ಪಾಕಿಸ್ತಾನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ, ಚೀನಾ ವಿದೇಶಾಂಗ ಸಚಿವ ಕ್ವಿನ್‌ ಗಾಂಗ್‌ ಹಾಗೂ ಇತರೆ ಸದಸ್ಯ ರಾಷ್ಟ್ರಗಳ ಸಚಿವರನ್ನು ಭಾರತದ ಪರವಾಗಿ ಜೈಶಂಕರ್‌ ಅವರು ಭಾರತೀಯ ಸಂಸ್ಕೃತಿಯಂತೆ ಅವರೆಲ್ಲರನ್ನು ಆಹ್ವಾನಿಸಿದರು. ಬಳಿಕ ಆಯಾ ದೇಶಗಳ ದ್ವಿಪಕ್ಷೀಯ ಸಭೆ ಹಾಗೂ ಇನ್ನಿತರ ಸಭೆಗಳನ್ನು ಶುರು ಮಾಡಿದರು.

ಇದನ್ನೂ ಓದಿ: 'ಯಾವಾಗ ಆಕ್ರಮಿತ ಕಾಶ್ಮೀರವನ್ನು ಖಾಲಿ ಮಾಡ್ತೀರಿ..?' ಕಾಶ್ಮೀರ ವಿಚಾರದಲ್ಲಿ ಪಾಕ್‌ಗೆ ಜೈಶಂಕರ್‌ ಖಡಕ್‌ ವಾರ್ನಿಂಗ್‌!