ಹರ್ಜೋತ್‌ಸಿಂಗ್‌ ಸುರಕ್ಷಿತವಾಗಿ ಭಾರತಕ್ಕೆ ಆಗಮನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ವಿದ್ಯಾರ್ಥಿ ಕೀವ್‌ನಿಂದ ಪೊಲೆಂಡ್‌ ಗಡಿಗೆ ಸ್ಥಳಾಂತರ

ನವದೆಹಲಿ(ಮಾ.08): ರಷ್ಯಾ ನಡೆಸಿದ ದಾಳಿಗೆ ಉಕ್ರೇನ್‌ ರಾಜಧಾನಿ ಕೀವ್‌ನಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಭಾರತೀಯ ವಿದ್ಯಾರ್ಥಿಯನ್ನು, ಉಕ್ರೇನ್‌ನ ಭಾರತೀಯ ರಾಯಭಾರ ಕಚೇರಿಯ ಚಾಲಕ ಸುರಕ್ಷಿತವಾಗಿ ಪೋಲೆಂಡ್‌ ಗಡಿಗೆ ತಲುಪಿಸಿದ್ದಾನೆ. ರಷ್ಯಾ ನಡೆಸುತ್ತಿದ್ದ ಸತತ ದಾಳಿಯ ನಡುವೆಯೂ ಸುಮಾರು 700 ಕಿ.ಮೀ. ದೂರ ವಾಹನ ಚಾಲನೆ ಮಾಡುವ ಮೂಲಕ ಗಡಿ ತಲುಪಿಸಿದ್ದಾನೆ.

ಹರ್ಜೋತ್‌ ಸಿಂಗ್‌ ಸೋಮವಾರ ಭಾರತೀಯ ವಾಯುಪಡೆ ವಿಮಾನದಲ್ಲಿ ಸುರಕ್ಷಿತವಾಗಿ ಹಿಂಡನ್‌ ವಾಯುನೆಲೆಗೆ ಬಂದು ತಲುಪಿದ್ದಾರೆ. ಕೀವ್‌ನಿಂದ ಪೊಲೆಂಡ್‌ ಗಡಿಗೆ ಸ್ಥಳಾಂತರಿಸುವ ಸಮಯದಲ್ಲಿ ರಾಯಭಾರ ಕಚೇರಿ ಕ್ಷಣ ಕ್ಷಣಕ್ಕೂ ಅಲ್ಲಿನ ಕರಾಳ ಪರಿಸ್ಥಿತಿಯನ್ನು ಕುರಿತು ಸರಣಿ ಟ್ವೀಟ್‌ ಮಾಡಿದೆ. ‘ಹರ್ಜೋತ್‌ ಸಿಂಗ್‌ ಅವರನ್ನು ಪೊಲಂಡ್‌ ಗಡಿಗೆ ತಲುಪಿಸುವ ದೃಷ್ಟಿಯಿಂದ ರಾಯಭಾರ ಕಚೇರಿಯ ಚಾಲಕ ಶೆಲ್‌ ದಾಳಿಯ ನಡುವೆಯೂ 700 ಕಿ.ಮೀ. ದೂರ ಚಾಲನೆ ಮಾಡಿದ್ದಾರೆ’ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

Operation Ganga: ದೆಹಲಿಯಿಂದ ಬೆಂಗಳೂರಿಗೆ 36 ಕನ್ನಡಿಗರು ವಾಪಸ್

ಉಕ್ರೇನ್‌ ಸಂತ್ರಸ್ತ ವಿದ್ಯಾರ್ಥಿಗಳಿಗೆ ರಾಮಚಂದ್ರಾಪುರ ಮಠ ಸಹಾಯಹಸ್ತ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲು ಭಾರತ ಸರ್ಕಾರ ಆರಂಭಿಸಿದ ಆಪರೇಷನ್‌ ಗಂಗಾ ಕಾರ್ಯಾಚರಣೆಗೆ ಶ್ರೀರಾಮಚಂದ್ರಾಪುರ ಮಠ ಟ್ವಿಟರ್‌ನಲ್ಲಿ ಸಹಾಯವಾಣಿ ಆರಂಭಿಸುವ ಮೂಲಕ ಸಂತ್ರಸ್ತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದ ಸುದ್ದಿ ತಿಳಿಯುತ್ತಿದ್ದಂತೆ ಉಕ್ರೇನ್‌ನಲ್ಲಿರುವ ಶ್ರೀಮಠದ ಶಿಷ್ಯರು, ಕನ್ನಡಿಗ ಹಾಗೂ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರುವ ಉದ್ದೇಶದಿಂದ ರಾಘವೇಶ್ವರ ಭಾರತೀ ಸ್ವಾಮೀಜಿ ಮಠದ ಸೇವಾಖಂಡದ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ್ದರು.

Operation Ganga: ಕೊನೆಯ ಹಂತದಲ್ಲಿ, ಇಂದು 8 ವಿಮಾನದಲ್ಲಿ 1500 ಮಂದಿ ತವರಿಗೆ

ಈ ಹಿನ್ನೆಲೆಯಲ್ಲಿ ಮಠದ ಸೇವಾತಂಡ ಭಾರತ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳನ್ನು ಮತ್ತು ಉಕ್ರೇನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿಗಳ ವಿನಿಮಯಕ್ಕೆ ಕ್ರಮ ಕೈಗೊಂಡಿತು. ಅದೇವೇಳೆ ಮಠದ ಟ್ವಿಟರ್‌ನಲ್ಲಿ ಹೆಲ್ಪ್‌ಲೈನ್‌ ಸಹ ಆರಂಭಿಸಿ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಬಳಿಕ ಶೋಚಿನ್‌ನಲ್ಲಿ ಸಿಲುಕಿದ್ದ ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ 1400ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಬಸ್ಸಿನಲ್ಲಿ ಪೋಲೆಂಡ್‌ಗೆ ಸ್ಥಳಾಂತರಿಸುವಲ್ಲಿ ರಾಯಭಾರಿ ಕಚೇರಿ ಯಶಸ್ವಿಯಾಗಿದೆ.

ವಿದ್ಯಾರ್ಥಿಗಳ ಸಂಪರ್ಕ ಸಾಧಿಸುವಲ್ಲಿ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಮುರಳೀಧರನ್‌ ಮತ್ತು ಸಂಬಂಧಪಟ್ಟಅಧಿಕಾರಿಗಳು ಶ್ರೀಮಠದ ಕಾರ್ಯಕರ್ತರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಇದೀಗ ಶೋಮಿಯಲ್ಲಿ ಸಿಲುಕಿರುವ ಸುಮಾರು 1200 ವಿದ್ಯಾರ್ಥಿಗಳ ತಂಡವನ್ನು ರಕ್ಷಿಸುವಲ್ಲಿ ಕೂಡ ಶ್ರೀಮಠದ ಸಂಪರ್ಕಸೇತು ನೆರವಾಗುತ್ತಿದೆ. ಯುದ್ಧಪೀಡಿತ ದೇಶದಿಂದ ಪ್ರತಿಯೊಬ್ಬ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನೆಲಕ್ಕೆ ವಾಪಸ್‌ ಕರೆತರುವವರೆಗೂ ಸರ್ಕಾರದ ಪ್ರಯತ್ನಕ್ಕೆ ಶ್ರೀಮಠ ಕೈಜೋಡಿಸುತ್ತದೆ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ತಿಳಿಸಿದ್ದಾರೆ.

ಆಪರೇಶನ್‌ ಗಂಗಾ’ದಲ್ಲಿ ಮಂಗ್ಳೂರಿ​ನ ಪೈಲಟ್‌ ಸಲ್ದಾನ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವ ‘ಆಪರೇಶನ್‌ ಗಂಗಾ’ ಕಾರ್ಯಾಚರಣೆಯಲ್ಲಿ ಮಂಗಳೂರು ಮೂಲದ ಪೈಲಟ್‌ ಕ್ಯಾ.ಮೈಕೆಲ್‌ ಸಲ್ಡಾನ ಪಾಲ್ಗೊಂಡಿದ್ದಾರೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದ ಪೈಲಟ್‌ ಆಗಿರುವ ಕ್ಯಾ.ಮೈಕಲ್‌ ಸಲ್ಡಾನ ಅವರನ್ನು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ನಿಯೋಜಿಸಲಾಗಿತ್ತು. ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರು ತಾಯ್ನಾಡಿಗೆ ಕರೆತಂದಿದ್ದಾರೆ. ಎರಡು ವರ್ಷಗಳ ಹಿಂದೆ ಕೋವಿಡ್‌-19 ವ್ಯಾಪಕವಾಗಿದ್ದ ಸಂದರ್ಭದಲ್ಲಿ ಗಲ್‌್ಫ ರಾಷ್ಟ್ರಗಳಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದರು. ಆಗಲೂ ಕ್ಯಾ.ಮೈಕಲ್‌ ಸಲ್ಡಾನ ಅವರು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಪೈಲಟ್‌ ಆಗಿ ‘ವಂದೇ ಭಾರತ್‌ ಮಿಷನ್‌’ ಏರ್‌ಲಿಫ್ಟ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿ ನೂರಾರು ಭಾರತೀಯರನ್ನು ಕರೆತಂದಿದ್ದರು.