ಬರೇಲಿ[ಜ.20]: ‘ದೇಶದಲ್ಲಿ ಪ್ರತಿ ದಂಪತಿಗೆ 2 ಮಕ್ಕಳು ಎಂಬ ಮಿತಿ ಜಾರಿಯಾಗಬೇಕು’ ಎಂದು ಹೇಳಿದ್ದ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಭಾನುವಾರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ‘ಜನಸಂಖ್ಯೆ ನಿಯಂತ್ರಣಕ್ಕೆ ನೀತಿ ರೂಪುಗೊಳ್ಳಬೇಕು ಎಂದು ನಾನು ಹೇಳಿದ್ದೆ. ಎಷ್ಟುಮಕ್ಕಳ ಮಿತಿ ಇರಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಬೇಕು’ ಎಂದಿದ್ದಾರೆ.

ಜನಸಂಖ್ಯೆ ನಿಯಂತ್ರಣ ಕಾನೂನು ತುರ್ತು ಅವಶ್ಯ: ಮೋಹನ್ ಭಾಗವತ್!

ಇಲ್ಲಿ ‘ಭಾರತದ ಭವಿಷ್ಯ’ ಎಂಬ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕೆಲವು ತಪ್ಪು ತಿಳುವಳಿಕೆಗಳಿಂದ ‘ಸಂಘವು ಎರಡು ಮಕ್ಕಳ ಮಿತಿ’ ನೀತಿಯನ್ನು ಬಯಸಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ಸರ್ಕಾರವು ಸಮಾಜದ ಎಲ್ಲ ವರ್ಗಗಳ ಅನಿಸಿಕೆಯನ್ನು ಆಲಿಸಿ ಜನಸಂಖ್ಯೆ ನಿಯಂತ್ರಣಕ್ಕೆ ನೀತಿ ರೂಪಿಸಬೇಕು ಎಂಬುದು ನಮ್ಮ ನಿಲುವು. ಎಷ್ಟುಮಕ್ಕಳು ಇರಬೇಕು ಎಂಬುದನ್ನು ಆ ನೀತಿಯೇ ಹೇಳಬೇಕು. ಇದೇ ರೀತಿ ನಿಯಮ ಇರಬೇಕು ಎಂಬುದನ್ನು ನಾನು ಹೇಳಿಲ್ಲ. ಏಕೆಂದರೆ ಅದು ನನ್ನ ಕೆಲಸವಲ್ಲ’ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ‘ಆರೆಸ್ಸೆಸ್‌ ಅಧಿಕಾರ ಕೇಂದ್ರವಾಗುತ್ತಿದೆ’ ಎಂಬ ಆರೋಪಗಳನ್ನೂ ತಳ್ಳಿಹಾಕಿದ ಅವರು, ‘ನಾವು ಸಂವಿಧಾನದಲ್ಲಿ ನಂಬಿಕೆ ಹೊಂದಿದವರು. ನಮ್ಮದು ಯಾವುದೇ ಅಜೆಂಡಾ ಇಲ್ಲ ಹಾಗೂ ಅಧಿಕಾರ ಕೇಂದ್ರವಾಗಲು ನಾವು ಬಯಸುವುದಿಲ್ಲ. ಸಂಘದ ಬಗ್ಗೆ ಅನೇಕ ತಪ್ಪು ತಿಳಿವಳಿಕೆ ಹಬ್ಬಿಸಲಾಗುತ್ತಿದೆ. ಸಂಘವು ರಿಮೋಟ್‌ ಕಂಟ್ರೋಲ್‌ ಆಗಿರಲು ಬಯಸುವುದಿಲ್ಲ. ಸಂವಿಧಾನದ ಹೊರತಾದ ಯಾವುದೇ ಅಧಿಕಾರ ಕೇಂದ್ರವನ್ನು ನಾವು ವಿರೋಧಿಸುತ್ತೇವೆ’ ಎಂದರು.

ಜಾಲತಾಣದ 'ಹೊಸ ಸಂವಿಧಾನ' ನಮ್ಮದಲ್ಲ: RSS ಸ್ಪಷ್ಟನೆ!

‘130 ಕೋಟಿ ಹಿಂದುಗಳಿಗೆ ಈ ದೇಶ ಸೇರಿದ್ದು ಎಂದು ಆರೆಸ್ಸೆಸ್‌ ಕಾರ್ಯಕರ್ತರು ಹೇಳುತ್ತಾರೆ. ಹಾಗಂತ ನಾವು ಇತರ ಧರ್ಮೀಯರ ಧರ್ಮ, ಭಾಷೆ, ಜಾತಿ ಬದಲಿಸುತ್ತೇವೆ ಎಂದರ್ಥವಲ್ಲ. ಪೂರ್ವಜರು ಹಿಂದೂಗಳಾಗಿದ್ದರೆ, ಈಗಿನವರೂ ಹಿಂದೂಗಳೇ. ಭಾರತ ಮಾತೆಯ ಮಕ್ಕಳಾದ ಕಾರಣ 130 ಕೋಟಿ ಜನರೂ ಹಿಂದೂಗಳು’ ಎಂದು ಭಾಗವತ್‌ ಹೇಳಿದರು.