ಎಲ್ಲಿಯವರೆಗೆ ತಾರತಮ್ಯ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಇರುತ್ತದೆ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
ನಮ್ಮ ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿಯನ್ನು ಮುಂದುವರಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನವದೆಹಲಿ (ಸೆ.7): ಸಮಾಜದಲ್ಲಿ ತಾರತಮ್ಯ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ, ಆರ್‌ಎಸ್‌ಎಸ್ ಸಂಘಟನೆಯು “ಸಂವಿಧಾನದಲ್ಲಿ ಒದಗಿಸಲಾದ ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಹೇಳಿದರು. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಾವು ನಮ್ಮದೇ ಸಮಾಜದ ವ್ಯಕ್ತಿಗಳನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಹಿಂದೆ ಇರಿಸಿದ್ದೇವೆ. ನಾವು ಅವರನ್ನು ಕಾಳಜಿ ವಹಿಸಲಿಲ್ಲ, ಮತ್ತು ಇದು 2000 ವರ್ಷಗಳವರೆಗೆ ಮುಂದುವರೆಯಿತು, ನಾವು ಅವರಿಗೆ ಸಮಾನತೆ ನೀಡುವವರೆಗೆ, ಕೆಲವು ವಿಶೇಷ ಪರಿಹಾರಗಳನ್ನು ಮಾಡಬೇಕು. ಮೀಸಲಾತಿಯೂ ಅವುಗಳಲ್ಲಿ ಒಂದು. ಆದ್ದರಿಂದ ಸಮಾಜದಲ್ಲಿ ತಾರತಮ್ಯ ಇರುವವರೆಗೆ ಮೀಸಲಾತಿಯು ಮುಂದುವರಿಯಬೇಕು. ನಾವು ಆರ್‌ಎಸ್‌ಎಸ್‌ನಲ್ಲಿ ಸಂವಿಧಾನದಲ್ಲಿ ಒದಗಿಸಲಾದ ಮೀಸಲಾತಿಗಳಿಗೆ ಎಲ್ಲಾ ಬೆಂಬಲವನ್ನು ನೀಡುತ್ತೇವೆ." ಎಂದು ಹೇಳಿದ್ದಾರೆ.
2000 ವರ್ಷಗಳಿಂದ ಸಮಾಜದ ಕೆಲವು ವರ್ಗಗಳನ್ನು ನಿರ್ಲಕ್ಷಿಸಲಾಗಿದೆ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅವುಗಳು ಬಹಳ ಹಿಂದುಳಿದಿವೆ ಎಂದು ಭಾಗವತ್ ಹೇಳಿದ್ದಾರೆ.
"ಸಮಾಜದ ವಿಭಾಗಗಳು 2000 ವರ್ಷಗಳಿಂದ ತಾರತಮ್ಯವನ್ನು ಎದುರಿಸುತ್ತಿದ್ದರೆ, ನಾವು (ತಾರತಮ್ಯವನ್ನು ಎದುರಿಸದಿರುವವರು) ಇನ್ನೂ 200 ವರ್ಷಗಳವರೆಗೆ ಕೆಲವು ತೊಂದರೆಗಳನ್ನು ಏಕೆ ಸ್ವೀಕರಿಸಬಾರದು" ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಈ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ಒದಗಿಸುವವರೆಗೆ ಮೀಸಲಾತಿಯಂತಹ ವಿಶೇಷ ಕ್ರಮಗಳು ಅಗತ್ಯ ಎಂದು ಅವರು ತಿಳಿಸಿದ್ದಾರೆ. ಮೀಸಲಾತಿಗಾಗಿ ಮರಾಠ ಸಮುದಾಯದ ಆಂದೋಲನವು ಮತ್ತೊಮ್ಮೆ ತೀವ್ರಗೊಂಡಿರುವ ಸಮಯದಲ್ಲಿ ಭಾಗವತ್ ಅವರ ಮೀಸಲಾತಿಯ ಹೇಳಿಕೆ ಬಂದಿದೆ.
ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಆರ್‌ಎಸ್‌ಎಸ್ ಮುಖ್ಯಸ್ಥರು 'ಅಖಂಡ ಭಾರತ' ಅಥವಾ ಅವಿಭಜಿತ ಭಾರತದ ಪರಿಕಲ್ಪನೆಯ ಬಗ್ಗೆಯೂ ಮಾತನಾಡಿದರು. ಶೀಘ್ರದಲ್ಲಿಯೇ ಅಖಂಡ ಭಾರತದ ಕನಸು ನಿಜವಾಗುತ್ತದೆ ಎಂದು ಅವರು ಹೇಳಿದ್ದಾರೆ. 1947ರಲ್ಲಿ ಭಾರತದಿಂದ ಬೇರ್ಪಟ್ಟವರು ಇಂದು ತಮ್ಮ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸುತ್ತದ್ದಾರೆ. ಭಾರತದೊಂದಿಗೆ ಮತ್ತೆ ಒಂದಾಗಲು ಬಯಸುತ್ತಿದ್ದಾರೆ ಎಂದು ಹೇಳಿದರು.
'ಅಖಂಡ ಭಾರತದ ಕನಸು ಶೀಘ್ರ ನನಸು' ಯುವ ಸಮೂಹಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಭರವಸೆ
ಸಮಾರಂಭದಲ್ಲಿ, ಆರ್‌ಎಸ್‌ಎಸ್ 1950 ರಿಂದ 2002 ರವರೆಗೆ ನಾಗ್ಪುರದ ಮಹಲ್‌ನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿಲ್ಲ ಎಂಬ ಹೇಳಿಕೆಗಳ ಕುರಿತಾದ ಪ್ರಶ್ನೆಗೆ ಭಾಗವತ್ ಪ್ರತಿಕ್ರಿಯಿಸಿದರು. "ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26 ರಂದು ನಾವು ಎಲ್ಲೇ ಇದ್ದರೂ ರಾಷ್ಟ್ರಧ್ವಜವನ್ನು ಹಾರಿಸುತ್ತೇವೆ. ನಾಗ್ಪುರದ ಮಹಲ್ ಮತ್ತು ರೇಶಿಂಬಾಗ್‌ನಲ್ಲಿ ನಮ್ಮ ಎರಡೂ ಕ್ಯಾಂಪಸ್‌ಗಳಲ್ಲಿ ಧ್ವಜಾರೋಹಣವಿದೆ. ಜನರು ಈ ಪ್ರಶ್ನೆಯನ್ನು ಯಾವುದೇ ಕಾರಣಕ್ಕೂ ನಮಗೆ ಕೇಳಬಾರದು ಎಂದು ಹೇಳಿದರು.
ಭಾರತ ಯಾವತ್ತೂ ಹಿಂದೂ ದೇಶವಲ್ಲ: ಎಸ್‌ಪಿ ಮುಖಂಡ