ಗುರುವಾರ ನಡೆದ ಮುಂಬೈ ಸೇರಿದಂತೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಲಾದ ಅಳಿಸಲು ಆಗದ ಇಂಕಿನ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮುಂಬೈ: ಗುರುವಾರ ನಡೆದ ಮುಂಬೈ ಸೇರಿದಂತೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಲಾದ ಅಳಿಸಲು ಆಗದ ಇಂಕಿನ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಪಕ್ಷಗಳ ಈ ಆರೋಪವನ್ನು ಬೃಹನ್ಮುಂಬೈ ಪಾಲಿಕೆ ಅಧಿಕಾರಿಗಳು ತಳ್ಳಿಹಾಕಿದ್ದರೆ, ಮತ್ತೊಂದೆಡೆ ಕೈಗೆ ಹಾಕಿದ ಇಂಕಿನ ಗುರುತು ಆರುವ ಮುನ್ನವೇ ಅದನ್ನು ಅಳಿಸಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಹೇಳಿದೆ. ಜೊತೆಗೆ ಇಂಥ ಆರೋಪಗಳ ಕುರಿತು ತನಿಖೆ ನಡೆಸುವುದಾಗಿ ಹೇಳಿದೆ.
ಈ ಬಾರಿ ಚುನಾವಣೆಯಲ್ಲಿ ಮೈಸೂರ್ ಪೇಂಟ್ ಆ್ಯಂಡ್ ವಾರ್ನಿಷ್ ಕಂಪನಿಯ ಇಂಕ್ ಬಾಟಲ್ ಬದಲು, ಕೋರಸ್ ಕಂಪನಿಯ ಮಾರ್ಕರ್ ಅನ್ನು ಮತದಾರರ ಕೈಬೆರಳಿಗೆ ಗುರುತು ಹಾಕಲು ಬಳಸಲಾಗಿತ್ತು. ಆದರೆ ಕೆಲವೆಡೆ ಮತದಾರರು ಮತಗಟ್ಟೆಯಿಂದ ಹೊರಬರುತ್ತಲೇ ಅದನ್ನು, ಅಸಿಟೋನ್ ಎಂಬ ರಾಸಾಯನಿಕ ಬಳಸಿ ಒರೆಸಿದ್ದಾರೆ. ಉಗುರಿಗೆ ಹಚ್ಚಿದ ಬಣ್ಣ ತೆಗೆಯಲು ಬಳಸುವ ಬಣ್ಣ ಬಳಸಿ ಉಗುರಿಗೆ ಹಾಕಿದ ಬಣ್ಣ ಒರೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.
ಇದಾದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವಸೇನೆ (ಉದ್ಧವ್ ಬಣ) ಮತ್ತು ಎಂಎನ್‌ಎಸ್ ನಾಯಕ ರಾಜ್‌ಠಾಕ್ರೆ, ‘ಇಂತಹ ಮೋಸದ ಚುನಾವಣೆಗಳಿಂದ ಯಾವುದೇ ಪ್ರಯೋಜನವಿಲ್ಲ. ಇದಲ್ಲಿ ಬಿಜೆಪಿ ಮತ್ತು ಚುನಾವಣಾ ಒಂದಾಗಿವೆ. ರಾಜ್ಯ ಚುನಾವಣಾ ಆಯೋಗ ಸಂವಿಧಾನ ವಿರೋಧಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಹಿಂದೆಂದೂ ಚುನಾವಣೆಯಲ್ಲಿ ಇಂಥ ಅಕ್ರಮ ನಡೆದಿರಲಿಲ್ಲ. ಇಂಕ್ ಮಾತ್ರವಲ್ಲದೇ ಪ್ರಿಂಟಿಂಗ್ ಆಕ್ಸಿಲರಿ ಡಿಸ್‌ಪ್ಲೇ ಯುನಿಟ್‌ನಲ್ಲೂ’ ಭಾರೀ ಅಕ್ರಮ ನಡೆಸಲಾಗಿದೆ ಆರೋಪಿಸಿದರು.
ಆಯಿಲ್ ಪೇಂಟ್ ಹಚ್ಚಿ:
ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ನನ್ನ ಬೆರಳಿಗೂ ಮಾರ್ಕರ್ ಹಾಕಲಾಗಿದೆ, ಅದು ಅಳಿಸುತ್ತಿದೆಯೇ? ಚುನಾವಣಾ ಆಯೋಗ ಈ ವಿಷಯವನ್ನು ಪರಿಶೀಲಿಸಬೇಕು. ವಿಪಕ್ಷಗಳು ಬಯಸಿದರೆ ಅವರು ಆಯಿಲ್ ಪೇಂಟ್ ಬಳಸಬಹುದು’ ಎಂದು ವ್ಯಂಗ್ಯವಾಡಿದ್ದಾರೆ.
ಆಯೋಗ ಸ್ಪಷ್ಟನೆ:
ಈ ನಡುವೆ ವೈರಲ್ ಆದ ವಿಡಿಯೋ ಕುರಿತು ತನಿಖೆ ಆರಂಭಿಸುವುದರ ಜೊತೆಗೆ, ಕೈಬೆರಳಿಗೆ ಗುರುತು ಹಾಕಲು ಕೋರಸ್ ಕಂಪನಿಯ ಮಾರ್ಕರ್ ಬಳಸಲಾಗಿತ್ತು. ಅದರಲ್ಲಿ ಬಳಸಲಾದ ಇಂಕ್, ಚುನಾವಣಾ ಆಯೋಗದ ಮಾನದಂಡಕ್ಕೆ ಅನುಗುಣವಾಗಿತ್ತು. ಕೈಗೆ ಗುರುತು ಹಾಕಿ ಅದು ಒಣಗಿದ ಬಳಿಕ ಅದನ್ನು ಅಳಿಸಲಾಗದು. ಆದರೆ ಅದಕ್ಕೂ ಮುನ್ನವೇ ರಾಸಾಯನಿಕ ಬಳಸಿ ಅದನ್ನು ಅಳಿಸುವುದು ಚುನಾವಣಾ ಪ್ರಕ್ರಿಯೆಗೆ ಮಾಡಿದ ಅಡ್ಡಿ. ಅಂಥವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.


