ಇದು ಒಂದು ಪಾನಿಪುರಿಗಾಗಿ ನಡೆಯುತ್ತಿರುವ ಹೋರಾಟ. ಅದು ಕೂಡ ಬರೋಬ್ಬರಿ 12 ವರ್ಷಗಳಿಂದ. ಈ ಕಾನೂನು ಸಮರ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣ್ತಿಲ್ಲ. ರೋಚಕ ಕಾನೂನು ಹೋರಾಟದ ಸಂಪೂರ್ಣ ಮಾಹಿತಿ ಇಲ್ಲಿದೆ.

ರೋಹ್ಟಕ್ (ಹರಿಯಾಣ): ಆಸ್ತಿ ವಿವಾದ, ಹಣದ ವ್ಯವಹಾರ ಅಥವಾ ಗಂಭೀರ ಅಪರಾಧಗಳಿಗಾಗಿ ಜನ ವರ್ಷಗಟ್ಟಲೆ ಕೋರ್ಟ್ ಮೆಟ್ಟಿಲೇರೋದನ್ನ ನೋಡಿದ್ದೇವೆ. ಹರಿಯಾಣದಲ್ಲಿ ಕೇವಲ ಒಂದೇ ಒಂದು ಪಾನಿಪುರಿಗಾಗಿ ಇಬ್ಬರು ವ್ಯಕ್ತಿಗಳು ಬರೋಬ್ಬರಿ 12 ವರ್ಷಗಳ ಕಾಲ ನ್ಯಾಯಾಲಯದ ಸುತ್ತ ಅಲೆದಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಘಟನೆ?

ವಿಲಕ್ಷಣ ಪ್ರಕರಣ ಆರಂಭವಾಗಿದ್ದು 2013ರ ಮೇ 21ರಂದು. ಹರಿಯಾಣದ ಮಹಂ ಪಟ್ಟಣದ ರಾಜೀವ್ ಚೌಕ್‌ನಲ್ಲಿ ಅನಿಲ್ ಎಂಬ ಯುವಕ ಸುಬೇ ಸಿಂಗ್ ಎಂಬುವವರ ಪಾನಿಪುರಿ ಗಾಡಿಯ ಬಳಿ ಹೋಗಿದ್ದ. ಎಲ್ಲರೂ 5 ರೂಪಾಯಿಗೆ 5 ಪಾನಿಪುರಿ ನೀಡುತ್ತಿದ್ದರೆ, ಸುಬೇ ಸಿಂಗ್ ಮಾತ್ರ ಕೇವಲ 4 ರೂಪಾಯಿಗೆ ಪಾನಿಪುರಿ ನೀಡುತ್ತಿದ್ದ.

ಇದನ್ನು ಪ್ರಶ್ನಿಸಿದ ಅನಿಲ್, ಎಲ್ಲರೂ ಐದು ಕೊಡುತ್ತಿದ್ದರೆ ನೀನು ಯಾಕೆ ನಾಲ್ಕು ನೀಡುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಸುಬೇ ಸಿಂಗ್, ಇದು ನನ್ನ ವ್ಯಾಪಾರ, ನನ್ನ ಇಷ್ಟ. ಇಷ್ಟವಿದ್ದರೆ ತಿನ್ನು ಇಲ್ಲದಿದ್ದರೆ ಹೋಗು ಎಂದು ಗದರಿಸಿದ್ದಾನೆ. ಈ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅಂತಿಮವಾಗಿ ಇಬ್ಬರೂ ಒಬ್ಬರ ಮೇಲೆ ಒಬ್ಬರು ಪೊಲೀಸ್ ಕೇಸ್ ದಾಖಲಿಸಿಕೊಂಡಿದ್ದಾರೆ.

12 ವರ್ಷಗಳ ಸುದೀರ್ಘ ಕಾನೂನು ಸಮರ

ಈ ಪ್ರಕರಣದ ವಿಚಾರಣೆಯು ಮಹಂ ನ್ಯಾಯಾಲಯದಲ್ಲಿ ಆರಂಭವಾಯಿತು. ಆರಂಭದಲ್ಲಿ ಅನಿಲ್ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅನಿಲ್‌ಗೆ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಅನಿಲ್ ತಂದೆ ಸತ್ಯವಾನ್ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋದರು. ಅಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಅನಿಲ್‌ನನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ! ಅನಿಲ್ ತಂದೆ ಸತ್ಯವಾನ್ ಅವರು ಪಾನಿಪುರಿ ವ್ಯಾಪಾರಿ ಮತ್ತು ಆಗಿನ ಪೊಲೀಸ್ ಅಧಿಕಾರಿಗಳ (SHO, ಚೌಕಿ ಇನ್-ಚಾರ್ಜ್ ಮತ್ತು ASI) ವಿರುದ್ಧವೇ ಪ್ರತಿ ದೂರು ದಾಖಲಿಸಿದರು. ತನ್ನ ಮಗನ ಮೇಲೆ ಇವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಪೊಲೀಸ್ ಅಧಿಕಾರಿಗಳಿಗೂ ಸಂಕಷ್ಟ

ಈ 12 ವರ್ಷಗಳ ಸುದೀರ್ಘ ವಿಚಾರಣೆಯ ಅವಧಿಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳು ನಿವೃತ್ತರಾಗಿದ್ದಾರೆ ಅಥವಾ ವರ್ಗಾವಣೆಗೊಂಡಿದ್ದಾರೆ. ನ್ಯಾಯಾಲಯವು ಈ ಅವಧಿಯಲ್ಲಿ ಒಟ್ಟು 15 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಸುದೀರ್ಘ ವಿಚಾರಣೆಯ ನಂತರ ಇತ್ತೀಚೆಗೆ ಮಹಂ ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಎರಡೂ ಕಡೆಯವರು ನೀಡಿದ ಸಾಕ್ಷ್ಯಗಳಲ್ಲಿ ಬಲವಾದ ಆಧಾರಗಳಿಲ್ಲದ ಕಾರಣ, ಪ್ರಕರಣದಲ್ಲಿದ್ದ ಒಟ್ಟು 9 ಜನ ಆರೋಪಿಗಳನ್ನು (ಪೊಲೀಸರು ಸೇರಿದಂತೆ) ನ್ಯಾಯಾಲಯವು ನಿರ್ದೋಷಿಗಳೆಂದು ಘೋಷಿಸಿ ಖುಲಾಸೆಗೊಳಿಸಿದೆ.

ಇನ್ನೂ ಮುಗಿಯದ ಪಾನಿಪುರಿ ಪುರಾಣ!

ನ್ಯಾಯಾಲಯದ ತೀರ್ಪಿನಿಂದ ಸತ್ಯವಾನ್ ಅವರು ತೃಪ್ತರಾಗಿಲ್ಲ. ನನ್ನ ಮಗನಿಗೆ ಅನ್ಯಾಯವಾಗಿದೆ, ನಾವು ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ, ಹೈಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಒಂದು ಪಾನಿಪುರಿಗಾಗಿ ಆರಂಭವಾದ ಈ ಹೋರಾಟ 12 ವರ್ಷ ಕಳೆದರೂ ಮುಗಿದಿಲ್ಲ, ಮುಂದಿನ ದಿನಗಳಲ್ಲಿ ಇದು ಹೈಕೋರ್ಟ್ ಅಂಗಳ ತಲುಪಲಿದೆ! ಒಟ್ಟಿನಲ್ಲಿ, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಜೀವನದ ಅಮೂಲ್ಯ ಸಮಯ ಮತ್ತು ಹಣವನ್ನು ಹೇಗೆ ವ್ಯರ್ಥ ಮಾಡುತ್ತದೆ ಎಂಬುದಕ್ಕೆ ಈ ಪಾನಿಪುರಿ ಪ್ರಕರಣ ಒಂದು ಸಾಕ್ಷಿಯಾಗಿದೆ.