ಪತ್ನಿ ರಾಜೇಶ್ವರಿ ಆಸೆ ಈಡೇರಿಸಿದ ತೇಜಸ್ವಿ ಯಾದವ್ ಚಾಟ್ಸ್‌ ತಿನ್ನುವ ಬಯಕೆ ವ್ಯಕ್ತಪಡಿಸಿದ್ದ ರಾಜೇಶ್ವರಿ ಚಾಟ್ಸ್‌ ತಯಾರಕನನ್ನು ಮನೆಗೆ ಕರೆಸಿದ ತೇಜಸ್ವಿ

ಪಾಟ್ನಾ(ಡಿ.22): ಇತ್ತೀಚೆಗಷ್ಟೇ ಮದುವೆಯಾದ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌ ಹಾಗೂ ರಾಬ್ರಿ ದೇವಿಯವರ ಪುತ್ರ ತೇಜಸ್ವಿ ಯಾದವ್‌ ತಮ್ಮ ಪತ್ನಿಯ ಸಣ್ಣ ಆಸೆಯೊಂದನ್ನು ಈಡೇರಿಸುವ ಮೂಲಕ ಸುದ್ದಿಯಾಗಿದ್ದಾರೆ. ತೇಜಸ್ವಿ ಯಾದವ್ ಪತ್ನಿ ರಾಚೆಲ್‌(ರಾಜೇಶ್ವರಿ ಯಾದವ್‌) ಅವರಿಗೆ ಬೀದಿ ಬದಿ ಮಾರಲ್ಪಡುವ ಚಾಟ್ಸ್‌ಗಳನ್ನು ತಿನ್ನುವ ಆಸೆ ಆಗಿತ್ತಂತೆ. ಇದನ್ನು ಅವರು ತಮ್ಮ ಪತಿ ತೇಜಸ್ವಿ ಯಾದವ್ ಬಳಿ ಹೇಳಿದ್ದಾರೆ. ಕೂಡಲೇ ಅವರು ಈ ಚಾಟ್ಸ್‌ ತಯಾರಕನನ್ನೇ ಮನೆಗೆ ಆಹ್ವಾನಿಸಿದ್ದು, ಮನೆ ಮಂದಿ ಎಲ್ಲರಿಗೂ ಆತನ ಬಳಿ ಚಾಟ್ಸ್‌ ಮಾಡಿಸಿ ತಿನ್ನಿಸಿದ್ದಾರೆ. 

ಪಾಟ್ನಾದಲ್ಲಿರುವ ತಮ್ಮ ಮನೆಗೆ ಚಾಟ್ಸ್‌ ಮಾರಾಟಗಾರನನ್ನು ಕರೆಸಿ ಇಡೀ ಕುಟುಂಬವೇ ಮನೆಯಲ್ಲಿ ಆರಾಮವಾಗಿ ಕುಳಿತು ಚಾಟ್ಸ್‌(chaat) ರುಚಿ ಸವಿದಿದ್ದಾರೆ. ಮುಕೇಶ್ ಚಾಟ್‌ ಭಂಡಾರ ( Mukesh Chaat Bhandar) ಹೆಸರಿನ ಗಾಡಿಯಲ್ಲಿ ಚಾಟ್ಸ್‌ ತಯಾರಿಸಿ ಮಾರುವ ವ್ಯಾಪಾರಿಯೊಬ್ಬರನ್ನು ಮನೆಗೆ ಕರೆದಿದ್ದಾರೆ. ತೇಜಸ್ವಿ ಯಾದವ್‌ ಹಾಗೂ ರಾಜೇಶ್ವರಿ ವಿವಾಹದ ನಂತರ ಇದೇ ಮೊದಲ ಬಾರಿಗೆ ಚಾಟ್‌ ತಯಾರಿಸುವವರೊಬ್ಬರು ರಾಬ್ರಿ ದೇವಿ ನಿವಾಸಕ್ಕೆ ಬಂದಿದ್ದಾರೆ. 

Tejashwi Yadav Marriage: ಮನೆಗೆ ಬಂದ ಕಿರಿ ಸೊಸೆ ರಾಚೆಲ್‌ಗೆ ಹೊಸ ಹೆಸರಿಟ್ಟ ಲಾಲು ಕುಟುಂಬ!

ಲಾಲೂ ಕುಟುಂಬಕ್ಕೆ ಚಾಟ್ಸ್‌ ತಿನ್ನಿಸಿದ ಚಾಟ್ಸ್‌ ತಯಾರಕನನ್ನು ಮುಕೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಇವರು ರಾಬ್ರಿ ದೇವಿ ನಿವಾಸದ ಸಮೀಪದಲ್ಲೇ ಚಾಟ್ಸ್‌ ಅಂಗಡಿಯನ್ನು ಇಟ್ಟುಕೊಂಡಿದ್ದರು. ರಾಜೇಶ್ವರಿಯವರ ಆಸೆಯಿಂದಾಗಿ ತೇಜಸ್ವಿ, ರಾಬ್ರಿದೇವಿ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಒಂದೇ ಕಡೆ ಕುಳಿತು ಚಾಟ್ಸ್‌ ಸವಿಯುವಂತ ಸಂದರ್ಭ ಬಂದೊದಗಿತ್ತು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಚಾಟ್ಸ್ ತಯಾರಕ ಮುಕೇಶ್ ಕುಮಾರ್‌ (Mukesh Kumar), 15 ಪ್ಲೇಟ್‌ನಷ್ಟು ಚಾಟ್ಸ್‌ಗಳನ್ನು ಲಾಲೂ ಕುಟುಂಬ ಸದಸ್ಯರಿಗೆ ತಯಾರಿಸಿ ನೀಡಿದ್ದಾಗಿ ಹೇಳಿದರು. ಯಾವಾಗಲಾದರೂ ರಾಬ್ರಿ ದೇವಿ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಚಾಟ್ಸ್‌ ತಯಾರಿಸಿ ನೀಡುವ ಅವಕಾಶ ಸಿಕ್ಕಿದ್ದು ನನಗೆ ತುಂಬಾ ಖುಷಿಯಾಗಿದೆ. ತೇಜಸ್ವಿಯಂತೂ ಹೆಚ್ಚಾಗಿ ನನ್ನ ಕೈ ರುಚಿಯ ಚಾಟ್ಸ್‌ನ್ನು ಆಗಾಗ ತಿನ್ನುತ್ತಿರುತ್ತಾರೆ. ಇವತ್ತು ರಾಬ್ರಿ ದೇವಿ ನಿವಾಸದ ಭದ್ರತಾ ಸಿಬ್ಬಂದಿಯೊಬ್ಬರು ನನ್ನ ಬಳಿ ಬಂದು ನನ್ನನ್ನು ಕರೆದರು. ಬಳಿಕ ಲಾಲೂ ಪ್ರಸಾದ್‌ ಯಾದವ್‌ ಅವರ ಕುಟುಂಬ ನಿಮ್ಮನ್ನು ಕರೆದರು ಎಂದು ಹೇಳಿದರು. ಯಾವಾಗಲೂ ರಾಬ್ರಿ ಅವರ ಕುಟುಂಬ ನನ್ನನ್ನು ಕರೆದಾಗ ನಾನು ಅವರಿಗೆ ಚಾಟ್ಸ್‌ ತಯಾರಿಸಿ ಕೊಡುತ್ತೇನೆ. ನಾನು ತಯಾರಿಸುವ ಒಂದು ಪ್ಲೇಟ್‌ ಚಾಟ್ಸ್‌ ಬೆಲೆ 100 ರೂಪಾಯಿ ಆದರೆ ರಾಬ್ರಿದೇವಿ (Rabri Devi) ಕುಟುಂಬದವರು ನನಗೆ ಒಂದು ಪ್ಲೇಟ್‌ಗೆ 500 ರೂಪಾಯಿಯಂತೆ ಕೊಡುತ್ತಾರೆ ಎಂದು ಮುಕೇಶ್‌ಕುಮಾರ್‌ ಹೇಳಿದರು. 

Tejashwi Yadav Wedding: ಹೃದಯ ಕದ್ದ ಬಾಲ್ಯದ ಗೆಳತಿ, ಈಕೆಗಾಗಿ 44 ಸಾವಿರ ಸಂಬಂಧ ತಿರಸ್ಕರಿಸಿದ್ದ ಲಾಲೂ ಪುತ್ರ!

ವಿಶೇಷವೆಂದರೆ ತೇಜಸ್ವಿ ಯಾದವ್‌ ಅವರಿಗೂ ಚಾಟ್‌ ಎಂದರೆ ತುಂಬಾ ಇಷ್ಟ. ಹಿಂದೆ 2019ರ ಲೋಕಸಭಾ ಚುನಾವಣೆಯ ಪ್ರಚಾರ ಮುಗಿಸಿ ಮನೆಗೆ ಬರುತ್ತಿದ್ದ ಅವರು ಸೀದಾ ಮುಕೇಶ್‌ ಅವರ ಚಾಟ್‌ ಶಾಪ್‌ಗೆ ನುಗ್ಗಿದ್ದು ಸುದ್ದಿಯಾಗಿತ್ತು. 

ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಮದುವೆ ಡಿ.9 ರಂದು ದೆಹಲಿಯಲ್ಲಿ ನೆರವೇರಿತ್ತು.. ಹರ್ಯಾಣ ಮೂಲದ ಉದ್ಯಮಿಯ ಪುತ್ರಿ, ಬಾಲ್ಯದ ಗೆಳತಿ ರಚೆಲ್‌ ಅವರನ್ನು ತೇಜಸ್ವಿ ವಿವಾಹವಾಗಿದ್ದಾರೆ. ದೆಹಲಿಯ ಸೈನಿಕ್‌ ಫಾರ್ಮ್‌ನಲ್ಲಿ ಅತ್ಯಂತ ಬಿಗಿ ಭದ್ರತೆಯಲ್ಲಿ ಹಾಗೂ ಖಾಸಗಿಯಾಗಿ ನಡೆದ ಮದುವೆ ಕಾರ್ಯಕ್ರಮಕ್ಕೆ ಕನಿಷ್ಠ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಈ ಸಮಾರಂಭದಲ್ಲಿ ಕುಟುಂಬದವನ್ನು ಹೊರತು ಪಡಿಸಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮಾತ್ರ ಭಾಗವಹಿಸಿದ್ದರು.