ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ದೆಹಲಿ ನಿವಾಸಕ್ಕೆ ಅಸ್ಸಾಂ ಪೊಲೀಸರು ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಪತ್ನಿ ರಿಂಕಿ ಭೂಯಾನ್ ಶರ್ಮಾ ನೀಡಿದ ಮಾನನಷ್ಟ ದೂರಿನನ್ವಯ ವಿಚಾರಣೆ.

ಪವನ್ ಖೇರಾ ಮನೆಗೆ ಅಸ್ಸಾಂ ಪೊಲೀಸರು ಬಂದಿದ್ದೇಕೆ?

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿಯ ಮೂರು ಪಾಸ್‌ಪೋರ್ಟ್‌ಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ದೆಹಲಿ ನಿವಾಸಕ್ಕೆ ಅಸ್ಸಾಂ ಪೊಲೀಸರು ಭೇಟಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಪತ್ನಿ ನೀಡಿದ ದೂರಿನನ್ವಯ ವಿಚಾರಣೆ ನಡೆಸಲು ದೆಹಲಿ ಪೊಲೀಸರ ಸಹಾಯದೊಂದಿಗೆ ಅಸ್ಸಾಂ ತಂಡವು ಖೇರಾ ಅವರ ಮನೆಗೆ ತಲುಪಿದೆ.

Add Asianetnews Kannada as a Preferred SourcegooglePreferred

ಪವನ್ ಖೇರಾ ಮಾಡಿದ್ದ ಆರೋಪವೇನು?

ಏಪ್ರಿಲ್ 5 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, 'ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿಂಕಿ ಭೂಯಾನ್ ಶರ್ಮಾ ಅವರು ಮೂರು ಬೇರೆ ಬೇರೆ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದರು. ಭಾರತೀಯ ಕಾನೂನಿನ ಪ್ರಕಾರ ದ್ವಿಪೌರತ್ವಕ್ಕೆ ಅವಕಾಶವಿಲ್ಲದಿರುವಾಗ, ಅಸ್ಸಾಂ ಪತ್ನಿ ಅದ್ಹೇಗೆ ಮೂರು ಬೇರೆ ಬೇರೆ ಪಾಸ್ಪೋರ್ಟ್‌ಗಳನ್ನ ಹೊಂದಿದ್ದಾರೆ? ಇದು ಹೇಗೆ ಸಾಧ್ಯವಾಯ್ತು? ಮೂರು ಪಾಸ್‌ಪೋರ್ಟ್‌ಗಳು ಏಕೆ ಬೇಕು? ಅಸ್ಸಾಂ ಚುನಾವಣೆಯಲ್ಲಿ ಸೋತರೆ ದೇಶಬಿಟ್ಟು ಓಡಿಹೋಗಲು ತಯಾರಿ ನಡೆಸುತ್ತಿದ್ದಾರೆಯೇ ಎಂದು ಪವನ್ ಖೇರಾ ಪ್ರಶ್ನಿಸಿದ್ದರು.

ಮುಸ್ಲಿಂ ರಾಷ್ಟ್ರಗಳ ಪಾಸ್ಪೋರ್ಟ್ ಯಾಕೆ ಬೇಕು?

ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರ ವಿರುದ್ಧ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುತ್ತಾರೆ ಹೀಗಿರುವಾಗ ಅವರ ಪತ್ನಿ ಮಾತ್ರ ಎರಡು ಮುಸ್ಲಿಂ ರಾಷ್ಟ್ರಗಳ ಪಾಸ್‌ಪೋರ್ಟ್ ಹೊಂದಿರುವುದು ಏಕೆ? ಎಂದು ಖೇರಾ ವ್ಯಂಗ್ಯವಾಡಿದ್ದರು. ಈ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ತನಿಖಾ ತಂಡ (SIT) ರಚಿಸಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದರು.

ಪವನ್ ಖೇರಾ ಆರೋಪ ತಳ್ಳಿ ಹಾಕಿದ ಅಸ್ಸಾಂ ಸಿಎಂ

ಮೂರು ಪಾಸ್ಪೋರ್ಟ್ ವಿಚಾರವಾಗಿ ಪವನ್ ಖೇರಾ ಮಾಡಿರುವ ಗಂಭಿರ ಆರೋಪಗಳನ್ನ ತಳ್ಳಿಹಾಕಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಇವು ಆಧಾರರಹಿತ ಸುಳ್ಳುಗಳು ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಹಿಮಂತ್ ಪತ್ನಿ ರಿಂಕಿ ಭೂಯಾನ್ ಪವನ್ ಖೇರಾ ವಿರುದ್ಧ ಮಾನನಷ್ಟ ಮೊಕದ್ದಮೆ ಮತ್ತು ಎಫ್‌ಐಆರ್ ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಅಸ್ಸಾಂ ಪೊಲೀಸರು ಈಗ ಕ್ರಮಕ್ಕೆ ಮುಂದಾಗಿದ್ದಾರೆ.