ಗಣರಾಜ್ಯೋತ್ಸವದ ಭದ್ರತೆಗಾಗಿ ದೆಹಲಿ ಪೊಲೀಸರು ಇದೇ ಮೊದಲ ಬಾರಿಗೆ ಎಐ ಚಾಲಿತ ಸ್ಮಾರ್ಟ್ ಕನ್ನಡಕಗಳನ್ನು ಬಳಸುತ್ತಿದ್ದಾರೆ. ಫೇಶಿಯಲ್ ರೆಕಗ್ನಿಶನ್ ಮತ್ತು ಥರ್ಮಲ್ ಇಮೇಜಿಂಗ್ ಹೊಂದಿರುವ ಈ ಕನ್ನಡಕಗಳು, ಪೊಲೀಸ್ ಡೇಟಾಬೇಸ್‌ಗೆ ಸಂಪರ್ಕ ಹೊಂದಿ ಶಂಕಿತರು ಆಯುಧಗಳನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತವೆ.

ಇದೇ ಮೊದಲ ಬಾರಿಗೆ ದೆಹಲಿ ಪೊಲೀಸರು ಗಣರಾಜ್ಯೋತ್ಸವ ಸಂಭ್ರಮದ ವೇಳೆ ರಾಷ್ಟ್ರ ರಾಜಧಾನಿಯ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಎಐ ಚಾಲಿತ ಕನ್ನಡಕಗಳನ್ನು ಬಳಸಲಿದ್ದಾರೆ.

ಈ ಕನ್ನಡಕಗಳಿಗೆ ಫೇಶಿಯಲ್ ರೆಕಗ್ನಿಶನ್ ಸಾಫ್ಟ್‌ವೇರ್ (ಎಫ್ಆರ್‌ಎಸ್), ಥರ್ಮಲ್ ಇಮೇಜಿಂಗ್ ವ್ಯವಸ್ಥೆಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಅಧಿಕಾರಿಗಳಿಗೆ ಜನರಿಗೆ ಯಾವುದೇ ತೊಂದರೆ ನೀಡದೆ, ಅವರನ್ನು ಪಡೆಯದೆ ಶಂಕಿತ ವ್ಯಕ್ತಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಈ ಸ್ಮಾರ್ಟ್ ಕನ್ನಡಕಗಳನ್ನು ಒಂದು ಭಾರತೀಯ ಕಂಪನಿಯೇ ಅಭಿವೃದ್ಧಿ ಪಡಿಸಿದ್ದು, ಅಪರಾಧಿಗಳ ಮಾಹಿತಿ, ಘೋಷಿತ ಅಪರಾಧಿಗಳ ವಿವರ, ಮತ್ತು ಕಣ್ಗಾವಲಿನಲ್ಲಿರುವ ಇತರ ವ್ಯಕ್ತಿಗಳ ಮಾಹಿತಿಗಳನ್ನು ಒಳಗೊಂಡಿರುವ ಪೊಲೀಸ್ ಇಲಾಖೆಯ ಡೇಟಾಬೇಸ್ ಜೊತೆ ಸಂಪರ್ಕ ಹೊಂದಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಸ್ಮಾರ್ಟ್ ಕನ್ನಡಕಗಳು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗಿರುವ ಫೋನ್‌ಗಳ ಜೊತೆ ಕಾರ್ಯಾಚರಿಸಲಿವೆ.

ಈ ವ್ಯವಸ್ಥೆಯಿಂದ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ಬಿದ್ದಾಗ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿ, ಜನಭರಿತ ಸ್ಥಳಗಳಲ್ಲಿ ಅವರು ಎಲ್ಲರ ಪರಿಶೀಲನೆ ನಡೆಸುವ ಕಷ್ಟವನ್ನು ತಪ್ಪಿಸಲು ಸಾಧ್ಯ.

ಈ ತಂತ್ರಜ್ಞಾನ ಹೇಗೆ ಕಾರ್ಯಾಚರಿಸುತ್ತದೆ?

ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಕನ್ನಡಕಗಳು ವಿವಿಧ ಸ್ಥಳಗಳಲ್ಲಿ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸ್ ಅಧಿಕಾರಿಗಳ ಕೈಗೆ ನೀಡಲಾಗುವ ಫೋನ್‌ಗಳ ಜೊತೆ ಕಾರ್ಯಾಚರಿಸಲಿವೆ.

ಓರ್ವ ವ್ಯಕ್ತಿ ಈ ಕನ್ನಡಕದ ಮೂಲಕ ಸ್ಕ್ಯಾನ್‌ಗೆ ಒಳಗಾದಾಗ, ಎಐ ವ್ಯವಸ್ಥೆ ಆತನ ಮುಖವನ್ನು ಪೊಲೀಸ್ ದಾಖಲೆಗಳಲ್ಲಿರುವ ಯಾವುದಾದರೂ ಮುಖಕ್ಕೆ ಹೋಲಿಕೆಯಾಗುತ್ತದೆಯೇ ಎಂದು ಪರಿಶೀಲಿಸುತ್ತದೆ. ಹಸಿರು ಸಂಕೇತ ಬಂದರೆ, ಆತನ ಮೇಲೆ ಯಾವುದೇ ಕ್ರಿಮಿನಲ್ ದಾಖಲೆಗಳಿಲ್ಲ ಎಂದು ಸ್ಪಷ್ಟವಾಗುತ್ತದೆ. ಒಂದು ವೇಳೆ ಕೆಂಪು ಸಂಕೇತ ಬಂದರೆ, ಆತ ಕ್ರಿಮಿನಲ್ ಇತಿಹಾಸ ಹೊಂದಿದ್ದಾನೆ ಎಂದರ್ಥ.

ಈ ಮುಖ ಗುರುತಿಸುವ ವ್ಯವಸ್ಥೆ ಅತ್ಯಂತ ದಕ್ಷ ಮತ್ತು ವೇಗವಾಗಿದ್ದು, ಎದುರಿಗಿರುವ ವ್ಯಕ್ತಿಗಳು ಕಾಲ ಕ್ರಮೇಣ ತಮ್ಮ ಮುಖದ ಗುರುತನ್ನು ಬದಲಿಸಿದ್ದರೂ, ಡೇಟಾಬೇಸ್ ನಲ್ಲಿರುವ ಮಾಹಿತಿಯೊಡನೆ ಕೆಲವೇ ಸೆಕೆಂಡುಗಳಲ್ಲಿ ಹೋಲಿಸಿ, ಗುರುತಿಸಬಲ್ಲದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದು ನೇರ ಪ್ರಸಾರದಲ್ಲಿ ಲಭಿಸುವ ಕ್ಯಾಮರಾ ಚಿತ್ರಗಳನ್ನು ದಾಖಲೆಯಲ್ಲಿ ಸಂಗ್ರಹಿಸಿರುವ ಹಳೆಯ ಫೋಟೋಗಳೊಡನೆ ಹೋಲಿಸಿ ನೋಡಿ, ತಕ್ಷಣವೇ ಆ ವ್ಯಕ್ತಿಯ ಗುರುತನ್ನು ಅತ್ಯಂತ ನಿಖರವಾಗಿ ಪತ್ತೆಹಚ್ಚುತ್ತದೆ.

ಫೇಶಿಯಲ್ ರೆಕಗ್ನಿಶನ್ ಜೊತೆಗೆ, ಈ ಸ್ಮಾರ್ಟ್ ಕನ್ನಡಕಗಳು ಮಾನವರ ದೇಹ ಮತ್ತು ಇತರ ವಸ್ತುಗಳಿಂದ ಬರುವ ಉಷ್ಣತೆಯನ್ನು ಗುರುತಿಸುವ ಥರ್ಮಲ್ ಇಮೇಜಿಂಗ್ ತಂತ್ರಜ್ಞಾನವನ್ನು ಹೊಂದಿವೆ. ಇದರಿಂದ ಅಧಿಕಾರಿಗಳಿಗೆ ಬರಿಗಣ್ಣಿಗೆ ಕಾಣದ ರೀತಿಯಲ್ಲಿ ಆ ವ್ಯಕ್ತಿಗಳು ತಂದಿರುವ ಲೋಹದ ವಸ್ತುಗಳು ಅಥವಾ ಆಯುಧಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಇದು ಭದ್ರತೆಗೆ ಒಂದು ಹೆಚ್ಚುವರಿ ಪದರವನ್ನು ಒದಗಿಸಿ, ಪೊಲೀಸರಿಗೆ ದೊಡ್ಡ ಜನಸ್ತೋಮವನ್ನು ಹೆಚ್ಚು ವ್ಯವಸ್ಥಿತವಾಗಿ ನಿರ್ವಹಿಸಲು ನೆರವಾಗುತ್ತದೆ. ಅದರಲ್ಲೂ ಸಾಮಾನ್ಯವಾದ ಪರಿಶೀಲನೆ ಸಾಕಾಗದಂತಹ ಸ್ಥಳಗಳಲ್ಲಿ ಇದು ಹೆಚ್ಚು ಅನುಕೂಲಕರವಾಗಿದೆ.

ಅಡಿಶನಲ್ ಕಮಿಷನರ್ ಆಫ್ ಪೊಲೀಸ್ ದೇವೇಶ್ ಕುಮಾರ್ ಮಹ್ಲಾ ಅವರು ಮಾಧ್ಯಮಗಳೊಡನೆ ಮಾತನಾಡುತ್ತಾ, ಸ್ಮಾರ್ಟ್ ಕನ್ನಡಕಗಳು ಅಪರಾಧಿಗಳ ಮಾಹಿತಿಗಳ ಡೇಟಾಬೇಸ್ ಹೊಂದಿರುವ ಪೊಲೀಸರ ಫೋನ್ ಜೊತೆ ಸಂಪರ್ಕಿತವಾಗಿರುತ್ತದೆ ಎಂದಿದ್ದಾರೆ. ಒಂದು ಹಸಿರು ಬಾಕ್ಸ್ ಕಾಣಿಸಿಕೊಂಡರೆ ಎದುರಿಗಿರುವ ವ್ಯಕ್ತಿ ಕ್ರಿಮಿನಲ್ ದಾಖಲೆ ಹೊಂದಿಲ್ಲ ಎಂದರ್ಥ. ಅದೇ ಕೆಂಪು ಬಾಕ್ಸ್ ಕಾಣಿಸಿದರೆ, ಆತ ಹಿಂದೆ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದರ್ಥ. ಇದರಿಂದ ಪೊಲೀಸ್ ಅಧಿಕಾರಿಗಳು ತಕ್ಷಣವೇ ಆತನ ಕುರಿತ ಮಾಹಿತಿಗಳನ್ನು ಪರಿಶೀಲಿಸಿ, ಅಗತ್ಯ ಎದುರಾದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)