ನ್ಯಾಟೋ 32 ಸದಸ್ಯರ ಒಂದು ಮಿಲಿಟರಿ ಮೈತ್ರಿಕೂಟ. ಆರ್ಟಿಕಲ್ 5ರ ಅಡಿ 'ಒಬ್ಬರ ಮೇಲಿನ ದಾಳಿ ಎಲ್ಲರ ಮೇಲಿನ ದಾಳಿ' ಎಂಬ ತತ್ವದ ಮೇಲೆ ಕಾರ್ಯ.. ಒಂದು ವೇಳೆ ಅಮೆರಿಕ ಸದಸ್ಯ ರಾಷ್ಟ್ರವೇ ಡೆನ್ಮಾರ್ಕ್‌ನ ಭಾಗವಾದ ಗ್ರೀನ್‌ಲ್ಯಾಂಡ್‌ ಮೇಲೆ ದಾಳಿ ನಡೆಸಿದರೆ, ಅದು ಆಂತರಿಕ ಬಿಕ್ಕಟ್ಟು ಸೃಷ್ಟಿಸಬಹುದು.

ಗಿರೀಶ್ ಲಿಂಗಣ್ಣ

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನಾರ್ತ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಶನ್‌ (ನ್ಯಾಟೋ) ಎನ್ನುವುದು 32 ಸದಸ್ಯರನ್ನು ಹೊಂದಿರುವ ಒಂದು ಮಿಲಿಟರಿ ಮೈತ್ರಿಕೂಟವಾಗಿದ್ದು, ಎರಡನೇ ಮಹಾಯುದ್ಧದ ಬಳಿಕ, 1949ರಲ್ಲಿ ಸ್ಥಾಪನೆಗೊಂಡಿತು. ಇದರ ಮೂಲ ಉದ್ದೇಶ ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವುದು ಮತ್ತು ವಿವಿಧ ದೇಶಗಳನ್ನು ಸಂಭಾವ್ಯ ಬಾಹ್ಯ ದಾಳಿಗಳಿಂದ ರಕ್ಷಿಸುವುದು. ಆರಂಭದಲ್ಲಿ ನ್ಯಾಟೋ ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಮತ್ತು ಪ್ರಮುಖ ಯುರೋಪಿಯನ್‌ ದೇಶಗಳನ್ನು ಒಳಗೊಂಡು, 12 ಸದಸ್ಯರನ್ನು ಹೊಂದಿತ್ತು. ಕಾಲ ಕ್ರಮೇಣ, ಹೆಚ್ಚು ಹೆಚ್ಚು ದೇಶಗಳು ನ್ಯಾಟೋ ಒಕ್ಕೂಟದ ಸದಸ್ಯರಾದವು. ಇಂದು ನ್ಯಾಟೋ 32 ಸದಸ್ಯರನ್ನು ಒಳಗೊಂಡಿದ್ದು, ಅವು ಅಪಾಯದ ಸಂದರ್ಭದಲ್ಲಿ ಪರಸ್ಪರರಿಗೆ ಜೊತೆಯಾಗಿ ನಿಲ್ಲಲು ಒಪ್ಪಿಗೆ ಸೂಚಿಸಿವೆ. ಒಟ್ಟಾರೆ ನ್ಯಾಟೋ ಒಕ್ಕೂಟದ ಮೂಲ ಉದ್ದೇಶ ಸರಳ: ಯಾವುದೇ ನ್ಯಾಟೋ ಸದಸ್ಯ ರಾಷ್ಟ್ರನ ಮೇಲೆ ದಾಳಿಯಾಗಿ, ಅದನ್ನು ಏಕಾಂಗಿಯಾಗಿ ಎದುರಿಸುವ ಪರಿಸ್ಥಿತಿ ಬರಬಾರದು.

ಆರ್ಟಿಕಲ್‌ 5 ಎನ್ನುವುದು ನ್ಯಾಟೋದ ಬೆನ್ನೆಲುಬು. ಸರಳವಾಗಿ ಹೇಳುವುದಾದರೆ, ಈ ವಿಧಿ ʼಒಬ್ಬ ಸದಸ್ಯನ ಮೇಲೆ ಆಗುವ ಆಕ್ರಮಣ ಎಲ್ಲರ ಮೇಲಾಗುವ ಆಕ್ರಮಣಕ್ಕೆ ಸಮʼ ಎನ್ನುತ್ತದೆ. ಹಾಗೆಂದು ಎಲ್ಲ ಸದಸ್ಯ ರಾಷ್ಟ್ರಗಳಿಗೂ ತಕ್ಷಣವೇ ತಮ್ಮ ಸೇನೆಯನ್ನು ಕಳುಹಿಸುವಂತೆ ಇದೇನು ಒತ್ತಡ ಹೇರುವುದಿಲ್ಲ. ಪ್ರತಿಯೊಬ್ಬ ಸದಸ್ಯನೂ ತಾನು ಹೇಗೆ ಸಹಾಯ ಮಾಡುತ್ತೇನೆ – ಮಿಲಿಟರಿ ಬೆಂಬಲದ ಮೂಲಕವೋ, ಗುಪ್ತಚರ ಮಾಹಿತಿಯಿಂದಲೋ, ಲಾಜಿಸ್ಟಿಕ್ಸ್‌ ಅಥವಾ ಬೇರೆ ಸಹಾಯಗಳ ಮೂಲಕವೋ ಎನ್ನುವುದನ್ನು ನಿರ್ಧರಿಸಬಹುದು. 5ನೇ ವಿಧಿಯ ನೈಜ ಶಕ್ತಿ ಯುದ್ಧ ನಡೆಸುವುದಲ್ಲ. ಬದಲಿಗೆ, ಶತ್ರುಗಳಲ್ಲಿ ಮೂಡಬಹುದಾದ ಆಕ್ರಮಣದ ಪರಿಣಾಮದ ಭಯ. ಯಾವುದೇ ದಾಳಿಕೋರ ರಾಷ್ಟ್ರಕ್ಕೂ ನ್ಯಾಟೋದ ಓರ್ವ ಸದಸ್ಯನ ಮೇಲೆ ಆಕ್ರಮಣ ಮಾಡಿದರೆ, ನ್ಯಾಟೋದ ಒಟ್ಟು ಶಕ್ತಿಯನ್ನು ಎದುರಿಸಿದಂತೆ ಎನ್ನುವ ಅರಿವಿರುತ್ತದೆ. ಈ ನಿಯಮ ಕೇವಲ ಒಂದು ಬಾರಿ, 9/11 ಭಯೋತ್ಪಾದಕ ದಾಳಿಯ ನಂತರ ಬಳಕೆಯಾಗಿದ್ದು, ಎಲ್ಲ ಸದಸ್ಯ ರಾಷ್ಟ್ರಗಳೂ ಅಮೆರಿಕಗೆ ಬೆಂಬಲ ನೀಡಿದ್ದವು.

ಈಗ ಅತ್ಯಂತ ಸೂಕ್ಷ್ಮವಾದ ಗ್ರೀನ್‌ಲ್ಯಾಂಡ್‌ ವಿಚಾರ ಆರಂಭಗೊಂಡಿದೆ. ಗ್ರೀನ್‌ಲ್ಯಾಂಡ್‌ ಒಂದು ಸ್ವತಂತ್ರ ದೇಶವಲ್ಲ. ಅದು ನ್ಯಾಟೋದ ಸ್ಥಾಪಕ ಸದಸ್ಯ ರಾಷ್ಟ್ರಗಳಲ್ಲಿ ಒಂದಾದ ಡೆನ್ಮಾರ್ಕ್‌ ಸಾಮ್ರಾಜ್ಯದ ಭಾಗ. ಇದೊಂದು ಅಂಶವೇ ಪರಿಸ್ಥಿತಿಯನ್ನು ಅತ್ಯಂತ ಸಂಕೀರ್ಣಗೊಳಿಸುತ್ತದೆ. ಒಂದು ವೇಳೆ ಅಮೆರಿಕ ಏನಾದರೂ ಬಲ ಪ್ರಯೋಗಿಸಿ ಗ್ರೀನ್‌ಲ್ಯಾಂಡನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಅದು ಒಂದು ನ್ಯಾಟೋ ಸದಸ್ಯ ರಾಷ್ಟ್ರ ಇನ್ನೊಂದು ನ್ಯಾಟೋ ಸದಸ್ಯನ ಮೇಲೆ ದಾಳಿ ನಡೆಸಿದಂತಾಗುತ್ತದೆ. ನ್ಯಾಟೋವನ್ನು ಮೈತ್ರಿಕೂಟದ ಹೊರಗಿನಿಂದ ಬರಬಹುದಾದ ಅಪಾಯಗಳನ್ನು ಎದುರಿಸಲು ರೂಪಿಸಲಾಗಿದೆಯೇ ಹೊರತು, ಆಂತರಿಕ ದಾಳಿಗಳನ್ನು ಎದುರಿಸಲಲ್ಲ.

ಅಮೆರಿಕದ ಇಂತಹ ಕ್ರಮ ಸಂಪೂರ್ಣ ಮೈತ್ರಿಕೂಟಕ್ಕೆ ಆಘಾತ ಉಂಟುಮಾಡಬಲ್ಲದು. ಡೆನ್ಮಾರ್ಕ್‌ ನ್ಯಾಟೋದ 5ನೇ ವಿಧಿಯಡಿ ರಕ್ಷಣೆಯನ್ನೇನೋ ಕೋರಬಹುದು. ಆದರೆ, ಇದು ನ್ಯಾಟೋ ಸದಸ್ಯ ರಾಷ್ಟ್ರಗಳನ್ನು ಒಂದು ಅಸಾಧ್ಯ ಪರಿಸ್ಥಿತಿಗೆ ತಳ್ಳಬಹುದು. ಸ್ವತಃ ನ್ಯಾಟೋದ ಸದಸ್ಯನಾಗಿರುವ, ಮೈತ್ರಿಕೂಟದ ಅತ್ಯಂತ ಪ್ರಬಲ ಮಿಲಿಟರಿ ಬಲವಾದ ಅಮೆರಿಕದ ವಿರುದ್ಧ ಡೆನ್ಮಾರ್ಕ್‌ಗೆ ನೆರವಾಗುವುದು ಹೇಗೆ? ಇದರ ಪರಿಣಾಮವಾಗಿ ಗಂಭೀರ ರಾಜಕೀಯ ಉದ್ವಿಗ್ನತೆ, ಬಲವಾದ ರಾಜತಾಂತ್ರಿಕ ಖಂಡನೆ, ಸಂಭಾವ್ಯ ಆರ್ಥಿಕ ಕ್ರಮಗಳು, ಮತ್ತು ನ್ಯಾಟೋ ಒಳಗೇ ಒಡಕು ಉಂಟಾಗಬಹುದು. ಒಂದು ವೇಳೆ ನಂಬಿಕೆಯೇ ಕುಸಿದರೆ, ನ್ಯಾಟೋವನ್ನು ಬಲವಾಗಿಟ್ಟಿರುವ ಒಗ್ಗಟ್ಟೂ ಇಲ್ಲವಾದೀತು.

ಅಮೆರಿಕ ಈಗಾಗಲೇ ಗ್ರೀನ್‌ಲ್ಯಾಂಡಿನಲ್ಲಿ ತುಲೆ ವಾಯನೆಲೆ ಸೇರಿದಂತೆ ಹಲವಾರು ಪ್ರಮುಖ ಮಿಲಿಟರಿ ನೆಲೆಗಳನ್ನು ಕಾರ್ಯಾಚರಿಸುತ್ತಿರುವುದರಿಂದ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಈ ವಾಯುನೆಲೆ ಕ್ಷಿಪಣಿ ಮುನ್ನೆಚ್ಚರಿಕೆ ಮತ್ತುಆರ್ಕ್‌ಟಿಕ್‌ ಭದ್ರತೆಯ ವಿಚಾರಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗ್ರೀನ್‌ಲ್ಯಾಂಡನ್ನು ಬಲಪ್ರಯೋಗದಿಂದ ಕಿತ್ತುಕೊಳ್ಳುವುದು ಅಂತಾರಾಷ್ಟ್ರೀಯ ಕಾನೂನಿನ, ಅದರಲ್ಲೂ ಮಿಲಿಟರಿ ಬಲದಿಂದ ಭೂಮಿಯನ್ನು ಕಿತ್ತುಕೊಳ್ಳುವುದನ್ನು ನಿಷೇಧಿಸಿರುವ ವಿಶ್ವಸಂಸ್ಥೆಯ ನಿಯಮದ ಉಲ್ಲಂಘನೆಯಾಗಲಿದೆ.

ವಾಸ್ತವವಾಗಿ ಇಂತಹ ಬೆಳವಣಿಗೆ ಉಂಟಾಗುವ ಸಾಧ್ಯತೆಗಳು ಬಹುತೇಕ ಇಲ್ಲ. ಆಕ್ರಮಣ ನಡೆದರೆ, ಅದಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಜಾಗತಿಕ ನಂಬಿಕೆಯ ಕುಸಿತ, ಮೈತ್ರಿಕೂಟಗಳ ಪತನ, ರಾಜತಾಂತ್ರಿಕ ಏಕಾಂಗಿತನ, ಮತ್ತು ಆರ್ಥಿಕ ಪತನಗಳು ಉಂಟಾಗಬಹುದು. ಆದ್ದರಿಂದಲೇ ಗ್ರೀನ್‌ಲ್ಯಾಂಡ್‌ ಕುರಿತ ನೈಜ ಚರ್ಚೆಗಳು ಸಹಭಾಗಿತ್ವ, ಹೂಡಿಕೆ ಮತ್ತು ಮಾತುಕತೆಗಳತ್ತಲೇ ಕೇಂದ್ರಿತವಾಗಿವೆಯೇ ಹೊರತು, ಬಲಪ್ರಯೋಗದತ್ತ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಗ್ರೀನ್‌ಲ್ಯಾಂಡಿನ ಭವಿಷ್ಯ ಅಲ್ಲಿನ ಜನರು ಮತ್ತು ಡೆನ್ಮಾರ್ಕ್‌ ಮೇಲೆ ಅವಲಂಬಿತವಾಗಿದ್ದು, ಮಿಲಿಟರಿ ಒತ್ತಡದ ಮೇಲಲ್ಲ.

ಇಲ್ಲಿನ ದೊಡ್ಡ ಸಂದೇಶ ಸ್ಪಷ್ಟವಾಗಿದೆ. ನ್ಯಾಟೋ ಸದಸ್ಯರು ಒಕ್ಕೂಟದ ನಿಯಮಗಳನ್ನು ಗೌರವಿಸುವುದರಿಂದ, ಸಂಯಮ ಹೊಂದಿರುವುದರಿಂದ ಮತ್ತು ಪರಸ್ಪರ ಗೌರವಿಸುವುದರಿಂದ ಮಾತ್ರ ಈ ಒಕ್ಕೂಟ ಉಳಿದುಕೊಂಡಿದೆ. ಏಳು ದಶಕಗಳಿಗೂ ಹೆಚ್ಚು ಕಾಲ ನ್ಯಾಟೋ ಶಕ್ತಿಶಾಲಿ ದೇಶಗಳ ನಡುವೆ ಯುದ್ಧವಾಗುವುದನ್ನು ತಪ್ಪಿಸಲು ನೆರವಾಗಿದೆ. ಮೈತ್ರಿಕೂಟದ ಸಹಯೋಗಿಗಳು ಪರಸ್ಪರರನ್ನು ಗೌರವಿಸಿದಾಗ, ಶಾಂತಿ ಉಳಿಯಲು ಸಾಧ್ಯ. ಆದರೆ ನಂಬಿಕೆಯ ಜಾಗದಲ್ಲಿ ಬಲಪ್ರಯೋಗ ಮೂಡಿದಾಗ ಅತ್ಯಂತ ಬಲವಾದ ಮೈತ್ರಿಕೂಟಗಳೂ ಪತನಗೊಳ್ಳಬಹುದು. ಪರಸ್ಪರ ಸಂಪರ್ಕಿತವಾಗಿರುವ ಜಗತ್ತಿನಲ್ಲಿ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ರಾಜತಾಂತ್ರಿಕತೆ ಏಕೆ ಮುಖ್ಯವಾಗುತ್ತವೆ ಎನ್ನುವುದನ್ನು ಈ ಪರಿಸ್ಥಿತಿ ನೆನಪಿಸುತ್ತಿದೆ. ಯಾಕೆಂದರೆ ಸಂಕೀರ್ಣವಾದ ಜಗತ್ತಿನಲ್ಲಿ ಪ್ರತಿಯೊಂದು ಕ್ರಮಕ್ಕೂ ಸುದೀರ್ಘಾವಧಿಯ ಪರಿಣಾಮಗಳಿರುತ್ತವೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)