ನ್ಯಾಯವೂ ಹೊರಗುತ್ತಿಗೆ? ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಬೆಂಗಳೂರಿನ ಪೊಲೀಸ್ ಪ್ರಕ್ರಿಯೆಯಲ್ಲಿನ ಹುಳುಕುಗಳನ್ನು ಪ್ರದರ್ಶಿಸಿದೆ. ಸಾರ್ವಜನಿಕರ ವಿಶ್ವಾಸವನ್ನು ಕುಂದಿಸಿ, ಯುವಕರನ್ನು ಅಪಾಯದ ಅಂಚಿಗೆ ತಳ್ಳಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ನಿನ್ನೆ, ಅಂದರೆ ಡಿಸೆಂಬರ್ 28ರಂದು ಬೆಂಗಳೂರಿನಲ್ಲಿ ಒಂದು ಆಘಾತಕಾರಿ ಬೆಳವಣಿಗೆ ನಡೆದಿದ್ದು, ಅದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕಿದೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ, ಮೂರು ಅಕ್ರಮ ಮಾದಕ ದ್ರವ್ಯ ಕಾರ್ಖಾನೆಗಳನ್ನು ಪತ್ತೆಹಚ್ಚಿ, ನಾಲ್ವರನ್ನು ಬಂಧಿಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಮೆಫೆಡ್ರೋನನ್ನು ವಶಪಡಿಸಿಕೊಂಡಿದ್ದಾರೆ. ಆದರೆ ನಿಜಕ್ಕೂ ನಮಗೆ ಚಿಂತೆಗೆ ಕಾರಣವಾಗಬೇಕಾದ ವಿಚಾರವೇನು? ಬೆಂಗಳೂರಿನಲ್ಲಿ ನಮ್ಮ ಮೂಗಿನ ಕೆಳಗೇ ಮಾದಕ ದ್ರವ್ಯ ಕಾರ್ಖಾನೆಗಳು ಕಾರ್ಯಾಚರಿಸುತ್ತಿದ್ದರೂ ಅವುಗಳನ್ನು ಪತ್ತೆಹಚ್ಚಿದ್ದು ಬೆಂಗಳೂರು ಪೊಲೀಸರಲ್ಲ! ಬದಲಿಗೆ, ಬೇರೆ ರಾಜ್ಯದ ಪೊಲೀಸರು ನಮ್ಮ ರಾಜಧಾನಿ ಬೆಂಗಳೂರಿಗೆ ಬಂದು, ನಮ್ಮ ಪೊಲೀಸರು ಎಂದೋ ಮಾಡಬೇಕಾಗಿದ್ದ ಕೆಲಸವನ್ನು ಮಾಡಿದ್ದಾರೆ. ಇದು ಕೇವಲ ಮಾದಕ ದ್ರವ್ಯಕ್ಕೆ ಸಂಬಂಧಿಸಿದ್ದಲ್ಲ. ಇದು ಸಂಪೂರ್ಣ ಭ್ರಷ್ಟಾಚಾರ ಮತ್ತು ಅಸಮರ್ಥ ಆಡಳಿತದಿಂದ ಪೊಲೀಸ್ ಇಲಾಖೆ ನಲುಗಿದ್ದು, ಅಪರಾಧಿಗಳು ಯಾವುದೇ ಭಯವಿಲ್ಲದೆ ಅಕ್ರಮ ಕಾರ್ಯಗಳನ್ನು ನಡೆಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಮೆಫೆಡ್ರೋನ್ ಎಂದರೇನು
ಮೊದಲನೆಯದಾಗಿ, ಮೆಫೆಡ್ರೋನ್ ಎಂದರೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳೋಣ. ಬಹಳಷ್ಟು ಜನರು ಇದರ ಹೆಸರನ್ನು ಕೇಳಿದ್ದರೂ, ಅದರ ನೈಜ ಅಪಾಯದ ಅರಿವು ಅವರಿಗೆ ಇರುವುದಿಲ್ಲ. 4ಎಂಎಂಸಿ ಅಥವಾ ಬೀದಿಗಳಲ್ಲಿ ಮಿಯಾಂವ್ ಮಿಯಾಂವ್ ಎಂದೂ ಕರೆಸಿಕೊಳ್ಳುವ ಈ ಮೆಫೆಡ್ರೋನ್ ಒಂದು ಸಿಂಥೆಟಿಕ್ ಡ್ರಗ್ ಆಗಿದ್ದು, ಶಕ್ತಿಶಾಲಿ ಪ್ರಚೋದಕದ ರೀತಿ ಕಾರ್ಯಾಚರಿಸುತ್ತದೆ. ಇದನ್ನು ಮೆದುಳಿಗೆ ಕೃತಕ ಸಂತೋಷ ಮತ್ತು ಶಕ್ತಿಯ ಪ್ರವಾಹವನ್ನೇ ಹರಿಸುವ ಒಂದು ರಾಸಾಯನಿಕದ ರೀತಿ ಪರಿಗಣಿಸಬಹುದು. ಇದು ಕೊಕೇನ್ ಅಥವಾ ಎಕ್ಸ್ಟಸಿಯ ರೀತಿಯಲ್ಲೇ ಕಾರ್ಯಾಚರಿಸುತ್ತದೆ. ಇದನ್ನು ಬಳಸುವವರಿಗೆ ಒಂದು ಅಮಲು, ಸುಖದ ಭ್ರಮೆಯಂತಹ ತೀವ್ರತೆಯ ಭಾವನೆಗಳು ಉಂಟಾಗುತ್ತವೆ. ಆದರೆ, ಈ ಕ್ಷಣಿಕ ಸುಖಕ್ಕೆ ತೆರಬೇಕಾದ ಬೆಲೆ ಮಾತ್ರ ಅತ್ಯಂತ ದುಬಾರಿ ಮತ್ತು ಭೀಕರ. ಈ ಮಾದಕ ದ್ರವ್ಯ ಹೃದಯದ ಬಡಿತವನ್ನು ಅತ್ಯಂತ ವೇಗವಾಗಿಸುತ್ತದೆ. ರಕ್ತದೊತ್ತಡವನ್ನು ಅಪಾಯಕಾರಿ ಮಟ್ಟಕ್ಕೆ ಹೆಚ್ಚಿಸುತ್ತದೆ. ಅದು ಸಾಲದೆಂಬಂತೆ ಕೆಲವು ಬಾರಿ ಇದನ್ನು ಬಳಸಿದರೂ ಸಾಕು, ಅದು ಆತನನ್ನು ಚಟಕ್ಕೆ ದಾಸನಾಗುವಂತೆ ಮಾಡಿಬಿಡುತ್ತದೆ. ಮೆಫೆಡ್ರೋನ್ ಕಾರಣದಿಂದ ಜನರು ಹೃದಯಾಘಾತ ಮತ್ತು ಅಪಸ್ಮಾರದಂತಹ ಸಮಸ್ಯೆಗಳುಂಟಾಗಿ ಸಾವನ್ನಪ್ಪಿದ್ದಾರೆ. ಮೆಫೆಡ್ರೋನ್ ಮೂಲತಃ ಯುವ ಜನರನ್ನು ಗುರಿಯಾಗಿಸಿ, ಅವರ ಆರೋಗ್ಯವನ್ನು ಹದಗೆಡಿಸಿ, ಅವರು ತಮ್ಮ ಚಟಕ್ಕೆ ಹಣ ಹೊಂದಿಸಲು ಅಪರಾಧ ಚಟುವಟಿಕೆಗಳಿಗೂ ಮುಂದಾಗುವುದರಿಂದ, ಭಾರತದಲ್ಲಿ ಕಟ್ಟುನಿಟ್ಟಿನ ಕಾನೂನಿಡಿಯಲ್ಲಿ ಮೆಫೆಡ್ರೋನನ್ನು ನಿಷೇಧಿಸಲಾಗಿದೆ.
ಮಹಾರಾಷ್ಟ್ರದ ಆಂಟಿ ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಯೆರಪ್ಪನಹಳ್ಳಿಯಂತಹ ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಮಹಾರಾಷ್ಟ್ರ ಪೊಲೀಸರು 4.2 ಕೆಜಿಯಷ್ಟು ಸಿದ್ಧ ಮೆಫೆಡ್ರೋನನ್ನು ವಶಪಡಿಸಿಕೊಂಡಿದ್ದಾರೆ. ಇದರೊಡನೆ, ಇನ್ನಷ್ಟು ಮಾದಕ ದ್ರವ್ಯಗಳನ್ನು ಸಿದ್ಧಪಡಿಸಲು ಸಂಗ್ರಹಿಸಿಟ್ಟಿದ್ದ 17 ಲೀಟರ್‌ಗಳಷ್ಟು ಕಚ್ಚಾ ರಾಸಾಯನಿಕಗಳು ಮತ್ತು ಉತ್ಪಾದನಾ ಉಪಕರಣಗಳನ್ನೂ ವಶಪಡಿಸಲಾಗಿದೆ. ಮಹಾರಾಷ್ಟ್ರ ಪೊಲೀಸರು ತಾವು 55 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿರುವುದಾಗಿ ಹೇಳಿದ್ದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ವಶಪಡಿಸಿಕೊಂಡ ವಸ್ತುಗಳ ಮೌಲ್ಯವನ್ನು ಅತ್ಯಂತ ಕಡಿಮೆ, ಅಂದರೆ ಅಂದಾಜು 1ರಿಂದ 2 ಕೋಟಿ ರೂಪಾಯಿ ಎಂದಿದ್ದಾರೆ. ನಿಖರವಾದ ಅಂಕಿ ಸಂಖ್ಯೆಗಳು ಏನೇ ಆಗಿದ್ದರೂ, ಇವು ಮುಕ್ತವಾಗಿ ಕಾರ್ಯಾಚರಿಸುತ್ತಿದ್ದ ಬೃಹತ್ ಮಾದಕ ದ್ರವ್ಯ ಕಾರ್ಖಾನೆಗಳೇ ಆಗಿದ್ದವು. ಇವು ಕ್ರಮೇಣ ಬೆಂಗಳೂರು ಮತ್ತು ಆಚೆಗಿನ ಯುವ ಜನರನ್ನು ತಲುಪುವಂತಹ ವಿಷ ವಸ್ತುಗಳನ್ನೇ ಉತ್ಪಾದಿಸುತ್ತಿದ್ದವು. ಬೆಂಗಳೂರು ಪೊಲೀಸರು ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಹ ಈ ಕಾರ್ಯಾಚರಣೆಗೆ ನೆರವು ನೀಡಿತ್ತು. ಆದರೆ, ಅಹಿತಕರ ಸತ್ಯಗಳು ಮಾತ್ರ ಹಾಗೆಯೇ ಉಳಿದಿವೆ. ನಮ್ಮದೇ ಹಿತ್ತಲಲ್ಲಿ ಕಾರ್ಯಾಚರಿಸುತ್ತಿದ್ದ ಮಾದಕ ದ್ರವ್ಯ ಕಾರ್ಖಾನೆಗಳನ್ನು ವಶಪಡಿಸಿಕೊಳ್ಳಲು ಮಹಾರಾಷ್ಟ್ರ ಪೊಲೀಸರು ಯಾಕೆ ಬರಬೇಕಾಯಿತು?
ಇದಕ್ಕಿರುವ ಉತ್ತರ ಹತಾಶಾದಾಯಕವಾಗಿದ್ದರೂ ಸ್ಪಷ್ಟವಾಗಿದೆ. ನಮ್ಮ ಪೊಲೀಸ್ ಪಡೆ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಕೆಟ್ಟ ಆಡಳಿತವೂ ಇದಕ್ಕೆ ಕೊಡುಗೆ ನೀಡಿದೆ. ಪೊಲೀಸ್ ಇಲಾಖೆಗೆ ನಾಗರಿಕರನ್ನು ರಕ್ಷಿಸುವ ತನ್ನ ಮೂಲಭೂತ ಕರ್ತವ್ಯವನ್ನೂ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬೆಂಗಳೂರು ಪೊಲೀಸರು ಈಗಾಗಲೇ ತಮ್ಮ ಅಸಮರ್ಥತೆಗೆ ಹೆಸರಾಗಿದ್ದು, ಲಂಚ ಪಡೆಯುವುದಂತೂ ಬಹುತೇಕ ದೈನಂದಿನ ಅಭ್ಯಾಸದಂತಾಗಿದೆ. ಸಂಚಾರ ಉಲ್ಲಂಘನೆ ಆಗಿರಲಿ, ದೂರು ದಾಖಲಿಸುವುದಾಗಿರಲಿ, ಅಥವಾ ಯಾವುದಾದರೂ ಗಂಭೀರ ಅಪರಾಧದ ತನಿಖೆಯೇ ಆಗಿರಲಿ, ಎಲ್ಲ ಹಂತಗಳ ಪೊಲೀಸ್ ಅಧಿಕಾರಿಗಳೂ ಹಣ ಕೇಳುತ್ತಿದ್ದಾರೆ. ಅವರಿಗೆ ಹಣ ಪಾವತಿಸಿದರೆ ನಿಮ್ಮ ಸಮಸ್ಯೆ ಇಲ್ಲವಾಗುತ್ತದೆ. ಆದರೆ ಒಂದು ವೇಳೆ ನೀವೇನಾದರೂ ಹಣ ನೀಡಲು ನಿರಾಕರಿಸಿದರೆ, ನೀವು ಶೋಷಣೆ, ವಿಳಂಬ, ಅಥವಾ ನೇರ ನಿರ್ಲಕ್ಷ್ಯವನ್ನೇ ಎದುರಿಸಬೇಕಾಗಿ ಬರುತ್ತದೆ. ಇದು ಕೇವಲ ಸಾರ್ವಜನಿಕರ ಗ್ರಹಿಕೆ ಮಾತ್ರವಲ್ಲ. ಅಂಕಿ ಅಂಶಗಳು ಇದನ್ನು ಅನುಮಾನಕ್ಕೆ ಎಡೆಯಿಲ್ಲದಂತೆ ಸಾಬೀತುಪಡಿಸಿವೆ.
2025ರಲ್ಲಿ 236ಕ್ಕೂ ಹೆಚ್ಚು ಪೊಲೀಸರು
ಕೇವಲ 2025 ಒಂದೇ ವರ್ಷದಲ್ಲಿ ಕರ್ನಾಟಕದಾದ್ಯಂತ 236ಕ್ಕೂ ಹೆಚ್ಚು ಪೊಲೀಸರು ತಮ್ಮ ಕೆಟ್ಟ ನಡವಳಿಕೆಗೆ ಅಮಾನತುಗೊಂಡಿದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಪೊಲೀಸರು ಬೆಂಗಳೂರಿನಲ್ಲೇ ಕಾರ್ಯಾಚರಿಸುತ್ತಿದ್ದರು. ಇವೆಲ್ಲ ಏನು ಸಣ್ಣಪುಟ್ಟ ಲೋಪಗಳು ಖಂಡಿತಾ ಅಲ್ಲ. ಅಧಿಕಾರಿಗಳೂ ಲಂಚ ಪಡೆಯುವಾಗ, ದರೋಡೆ ಯೋಜನೆ ರೂಪಿಸುವಾಗ, ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುವಾಗ, ಅಷ್ಟೇ ಏಕೆ, ಡ್ರಗ್ ಪೆಡ್ಲರ್‌ಗಳೊಡನೆ ಸಂಪರ್ಕದಲ್ಲಿರುವಾಗ ಸಿಕ್ಕಿ ಬಿದ್ದಿದ್ದಾರೆ. ಈ ಪ್ರಕರಣಗಳು ಭ್ರಷ್ಟಾಚಾರ, ಕರ್ತವ್ಯ ಲೋಪ, ಮತ್ತು ತಾವು ಧರಿಸುವ ಸಮವಸ್ತ್ರಕ್ಕೇ ಅವಮಾನ ಮಾಡುವಂತಹ ನಡೆತೆಗಳನ್ನು ಒಳಗೊಂಡಿವೆ. 2025ರ ಹನ್ನೊಂದು ತಿಂಗಳ ಅವಧಿಯಲ್ಲೇ ಕನಿಷ್ಠ 135ರಿಂದ 236 ಪೊಲೀಸರು ಕ್ರಮಕ್ಕೆ ತುತ್ತಾಗಿದ್ದು, ಅವರಲ್ಲಿ 10 ಇನ್ಸ್‌ಪೆಕ್ಟರ್‌ಗಳು ಮತ್ತು ಹತ್ತಾರು ಪೇದೆಗಳು ಸೇರಿದ್ದಾರೆ. ನಮ್ಮ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಾದ ಲೋಕಾಯುಕ್ತವಂತೂ ಪೊಲೀಸರನ್ನು ಲಂಚ ಪಡೆದುಕೊಳ್ಳುವಾಗ ದಾಖಲೆ ಸಹಿತವಾಗಿ ಬಂಧಿಸುತ್ತಿದೆ. ಇದು ಅತ್ಯಂತ ಸಾಮಾನ್ಯ ಎನ್ನುವಂತಹ ಬೆಳವಣಿಗೆಯಾಗಿದೆ.
ಇನ್ನು ಇತ್ತೀಚಿನ ಪ್ರಕರಣಗಳನ್ನೇ ಒಮ್ಮೆ ಗಮನಿಸಿ ನೋಡೋಣ. ಡಿಸೆಂಬರ್ 2025ರಲ್ಲಿ, ಲೋಕಾಯುಕ್ತ ಅಧಿಕಾರಿಗಳು ಮಲ್ಲೇಶ್ವರಂನ ಎಸಿಪಿ ಕೃಷ್ಣ ಮೂರ್ತಿ ಅವರನ್ನು ಓರ್ವ ಹೊಟೆಲ್ ಉದ್ಯಮಿಯಿಂದ 30,000 ರೂಪಾಯಿ ಲಂಚ ಪಡೆಯುವಾಗ ಹಿಡಿದಿದ್ದರು. ಚಿಕ್ಕಜಾಲದ ಪಿಎಸ್‌ಐ ವಿ ಶಿವಣ್ಣ ಒಂದು ವಂಚನೆ ಪ್ರಕರಣವನ್ನು ಮುಚ್ಚಿಹಾಕಲು 50,000 ರೂಗಳಿಂದ 3 ಲಕ್ಷ ರೂಪಾಯಿ ತನಕ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಈ ಹಿಂದೆ, ಮಾರ್ಚ್ ತಿಂಗಳಲ್ಲಿ ಸೈಬರ್ ಅಪರಾಧ ವಿಭಾಗದ ಎಸಿಪಿ ತನ್ವೀರ್ ಮತ್ತು ಎಎಸ್‌ಐ ಕೃಷ್ಣ ಮೂರ್ತಿ ಅವರು ಸೈಬರ್ ವಂಚನೆ ತನಿಖೆಯ ಪ್ರಕರಣದಲ್ಲಿ 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಸಿಕ್ಕಿಹಾಕಿಕೊಂಡಿದ್ದರು. ಇವರೆಲ್ಲರೂ ಹಿರಿಯ ಅಧಿಕಾರಿಗಳಾಗಿದ್ದು, ಇತರ ಅಧಿಕಾರಿಗಳಿಗೆ ಉತ್ತಮ ಉದಾಹರಣೆಯಾಗುವ ರೀತಿಯಲ್ಲಿ ಕಾರ್ಯಾಚರಿಸಬೇಕಿತ್ತು. ಆದರೆ, ಅವರು ತಮ್ಮ ಸ್ಥಾನಗಳನ್ನು ನ್ಯಾಯಕ್ಕಾಗಿ ಬೇರೆಲ್ಲೂ ಹೋಗಲು ಅವಕಾಶವಿಲ್ಲದ ಜನ ಸಾಮಾನ್ಯರಿಂದ ಸುಲಿಗೆ ನಡೆಸಲು ಬಳಸಿದ್ದು ಮಾತ್ರ ಅಕ್ಷಮ್ಯ.
2025ರಲ್ಲಿ ಕೇವಲ ಎಂಟು ತಿಂಗಳ ಅವಧಿಯಲ್ಲಿ ಲೋಕಾಯುಕ್ತ ಬೆಂಗಳೂರು ನಗರ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿದ್ದು, ಅವರಲ್ಲಿ ಹೆಚ್ಚಿನ ಪ್ರಕರಣಗಳು ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಿದೆ. ನ್ಯಾಯಾಲಯಗಳಂತೂ ಪೊಲೀಸ್ ಠಾಣೆಗಳನ್ನು ಲಂಚದ ಕೇಂದ್ರಗಳೆಂದು ಬಹಿರಂಗವಾಗಿಯೇ ಘೋಷಿಸಿವೆ. ಓರ್ವ ನ್ಯಾಯಾಧೀಶರು ಈ ಕುರಿತು ತಮ್ಮ ಅಭಿಪ್ರಾಯ ದಾಖಲಿಸುತ್ತಾ, ಲಂಚ ಮತ್ತು ಭ್ರಷ್ಟಾಚಾರಗಳು ಎಷ್ಟರಮಟ್ಟಿಗೆ ಸಾಮಾನ್ಯವಾಗಿವೆ ಎಂದರೆ, ಜನರು ತಮ್ಮ ಹಕ್ಕಾಗಿರುವ ಮೂಲಭೂತ ಸೇವೆಗಳಿಗೂ ಲಂಚ ನೀಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ. ಓರ್ವ ನ್ಯಾಯಾಧೀಶರೇ ಹೀಗೆ ಸಾರ್ವಜನಿಕವಾಗಿ ಪೊಲೀಸ್ ಇಲಾಖೆಯ ಕುರಿತು ಟೀಕಿಸುತ್ತಾರೆಂದರೆ, ಹುಳುಕು ಇಲಾಖೆಯಲ್ಲಿ ಎಷ್ಟರಮಟ್ಟಿಗೆ ಆಳವಾಗಿ ಸಾಗಿರಬಹುದು ಎನ್ನುವುದನ್ನು ಯಾರಾದರೂ ಊಹಿಸಬಹುದು.
ಯಾಕೆ ಇಂತಹ ಬೆಳವಣಿಗೆ ನಡೆಯುತ್ತಿದೆ? ಕೆಟ್ಟ ಆಡಳಿತ ನಮ್ಮ ಪೊಲೀಸ್ ಇಲಾಖೆಯನ್ನು ಒಳಗಿಂದಲೇ ಹಾಳುಗೆಡವುತ್ತಿದೆ. ರಾಜಕೀಯ ಹಸ್ತಕ್ಷೇಪದ ಪರಿಣಾಮವಾಗಿ, ನಿಜವಾದ ಪ್ರತಿಭೆ ಮತ್ತು ಬದ್ಧತೆ ಹೊಂದಿರುವ ಸಮರ್ಥ ಐಪಿಎಸ್ ಅಧಿಕಾರಿಗಳನ್ನು ಬಾಯಿ ಮುಚ್ಚಿಸಿ, ಲಾಜಿಸ್ಟಿಕ್ಸ್ ಅಥವಾ ಆಡಳಿತ ವಿಭಾಗದಂತಹ ಮುಖ್ಯವಲ್ಲದ ವಿಭಾಗಗಳಿಗೆ ವರ್ಗಾಯಿಸಲಾಗುತ್ತದೆ. ಇದೇ ವೇಳೆ, ಅಸಮರ್ಥ, ಲಂಚಕೋರ ಅಧಿಕಾರಿಗಳನ್ನು ಅಪರಾಧ ತಡೆಯಂತಹ ಆಯಕಟ್ಟಿನ ಸ್ಥಾನಗಳಲ್ಲಿ ಕೂರಿಸಲಾಗುತ್ತದೆ. ಈಗಿನ ಪೊಲೀಸ್ ಕಮಿಷನರ್ ಅವರು ಭ್ರಷ್ಟಾಚಾರವನ್ನು ತಡೆಯಲು ವಿಫಲರಾಗಿರುವುದಕ್ಕೆ ಮತ್ತು ಸಿಕ್ಕಿಬಿದ್ದ ಪೊಲೀಸರನ್ನು ಕಟ್ಟುನಿಟ್ಟಾಗಿ ಶಿಕ್ಷಿಸಿ, ಸ್ಪಷ್ಟ ಸಂದೇಶ ರವಾನಿಸಲು ವಿಫಲರಾಗಿರುವುದಕ್ಕೆ ನಿರಂತರವಾಗಿ ಟೀಕೆಗೆ ಒಳಗಾಗುತ್ತಲೇ ಇದ್ದಾರೆ. ನಿಜಕ್ಕೂ ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಬಯಸುವ ಪ್ರಾಮಾಣಿಕ ಅಧಿಕಾರಿಗಳು ರಾಜಕೀಯ ಆಟದಲ್ಲಿ ಪಾಲ್ಗೊಳ್ಳಲು ನಿರಾಕರಿಸುವುದಕ್ಕೆ ಅಥವಾ ಅಕ್ರಮ ಚಟುವಟಿಕೆಗಳ ಕುರಿತು ಕುರುಡಾಗಿರಲು ನಿರಾಕರಿಸುವುದಕ್ಕೆ ಮೂಲೆಗುಂಪಾಗುತ್ತಿದ್ದಾರೆ.
ಇನ್ನು ಸರ್ಕಾರಿ ಆಡಳಿತ ಯಂತ್ರವೂ ಸಂಪೂರ್ಣವಾಗಿ ವಿಫಲವಾಗಿದೆ. ಪೊಲೀಸರ ತರಬೇತಿ, ಆಧುನಿಕ ಉಪಕರಣಗಳು ಮತ್ತು ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೀಸಲಿಡಬೇಕಾದ ನಿಧಿ ದುರುಪಯೋಗವಾಗುತ್ತಿದೆ, ಅಥವಾ ಯಾರದೋ ಜೇಬುಗಳನ್ನು ತುಂಬಿಸುತ್ತಿದೆ. ಎಐ ಕಣ್ಗಾವಲಿನಂತಹ ಆಧುನಿಕ ಉಪಕರಣಗಳು ಇಲಾಖೆಯಲ್ಲಿ ಬಳಕೆಯಾಗುತ್ತಿಲ್ಲ. ಇನ್ನು ಪ್ರಾಮಾಣಿಕ ಅಧಿಕಾರಿಗಳು ತಮ್ಮ ಕಾರ್ಯಗಳನ್ನು ದಕ್ಷವಾಗಿ ನೆರವೇರಿಸಲು ನೆರವಾಗುವಂತಹ ತಂತ್ರಜ್ಞಾನಗಳಿಗೆ ಹೂಡಿಕೆ ಮಾಡುತ್ತಲೇ ಇಲ್ಲ. ಅದರೊಡನೆ, ಪೊಲೀಸರು ಲಂಚ ತೆಗೆದುಕೊಳ್ಳುವುದನ್ನು ಕಡಿಮೆ ಮಾಡಲು ಅವರಿಗೆ ಸರಿಯಾದ ಸಂಬಳ ಹೆಚ್ಚಳದಂತಹ ಕ್ರಮಗಳನ್ನೂ ಜಾರಿಗೆ ತರಲಾಗಿಲ್ಲ. ಭ್ರಷ್ಟಾಚಾರ ತಲೆಯಿಂದ ಕಾಲಿನ ತನಕ ಹರಿಯುವಾಗ, ಅಂದರೆ ಹಿರಿಯ ಅಧಿಕಾರಿಗಳೂ ಲಕ್ಷಗಟ್ಟಲೆ ಲಂಚ ಪಡೆದುಕೊಳ್ಳುವಾಗ ಸಿಕ್ಕಿಬೀಳುತ್ತಿದ್ದು, ಕಿರಿಯ ಅಧಿಕಾರಿಗಳೂ ಸಹಜವಾಗಿಯೇ ಇದೇ ಮಾರ್ಗದಲ್ಲಿ ಸಾಗುತ್ತಾರಷ್ಟೇ. ಇತ್ತೀಚಿನ ಪ್ರಕರಣಗಳು ಪೊಲೀಸರು ಕೇವಲ ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲದೆ, ಸ್ವತಃ ದರೋಡೆ ಯೋಜಿಸುವಾಗ ಮತ್ತು ಮಾದಕ ದ್ರವ್ಯ ಜಾಲಗಳನ್ನು ರಕ್ಷಿಸುವಾಗ ಸಿಕ್ಕಿಬಿದ್ದಿದ್ದಾರೆ!
ಇನ್ನು ಸಾರ್ವಜನಿಕರ ನಂಬಿಕೆಯಂತೂ ಅಪಾಯಕಾರಿ ಹಂತಕ್ಕೆ ಕುಸಿದಿದೆ. ಸಾರ್ವಜನಿಕರು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಕ್ಕೂ ಲಂಚ ನೀಡುವ ಪರಿಸ್ಥಿತಿ ಎದುರಾಗಿರುವುದನ್ನು ಬರೆದುಕೊಳ್ಳುತ್ತಲೇ ಇದ್ದಾರೆ. ಎಫ್‌ಐಆರ್ ದಾಖಲಿಸಬೇಕೇ? ಹಣ ನೀಡಿ. ನಿಮ್ಮ ವಿರುದ್ಧದ ಸಂಚಾರ ಚಲನ್ ವಜಾ ಮಾಡಬೇಕೇ? ಲಂಚ ಕೊಡಿ. 2025ರಲ್ಲಿ ಆಸಿಡ್ ದಾಳಿಗೆ ತುತ್ತಾದವರೂ ಸಹ ಭ್ರಷ್ಟಾಚಾರ ಹೇಗೆ ತಮ್ಮ ಪ್ರಕರಣದ ವಿಚಾರಣೆಯನ್ನು ವಿಳಂಬಗೊಳಿಸಿದೆ ಎಂದಿದ್ದಾರೆ. ಕೆಲವು ಅಧಿಕಾರಿಗಳು ಲಂಚ ತೆಗೆದುಕೊಂಡು, ಅಪರಾಧ ಕೃತ್ಯಗಳತ್ತ ಕುರುಡಾಗಿರುವುದರಿಂದ ಮಾದಕ ದ್ರವ್ಯ ಕಾರ್ಖಾನೆಗಳು ಸುಲಭವಾಗಿ ಬೆಳೆಯಬಲ್ಲವು. ಅಪರಾಧಿಗಳನ್ನು ಹಿಡಿಯಬೇಕಾದ ಅಧಿಕಾರಿಗಳೇ ಅಪರಾಧಿಗಳೊಡನೆ ಶಾಮೀಲಾದರೆ, ಸಮಾಜ ಖಂಡಿತವಾಗಿಯೂ ಅವನತಿ ಹೊಂದುತ್ತದೆ.
ಮಹಾರಾಷ್ಟ್ರ ಪೊಲೀಸರ ಮೆಫೆಡ್ರೋನ್ ದಾಳಿ ಬೆಂಗಳೂರಿನ ಪಾಲಿಗೆ ನಿಜಕ್ಕೂ ಅವಮಾನಕರ. ಇದು ಸ್ಥಳೀಯ ಪೊಲೀಸರಿಗೆ ತಮ್ಮ ಕೆಲಸ ಮಾಡುವ ಸಾಮರ್ಥ್ಯವಿಲ್ಲ ಎಂದು ಸಾಬೀತುಪಡಿಸುತ್ತಿದೆ. ಇನ್ನೂ ಕೆಟ್ಟದೆಂದರೆ, ಅವರು ರಾಜಿಯಾಗಿ ಇಂತಹ ಅಕ್ರಮಗಳು ನಡೆಯಲು ಮೌನ ಸಮ್ಮತಿ ನೀಡಿದ್ದಾರೆ ಎಂದಾಗುತ್ತದೆ. ದಕ್ಷ ಅಧಿಕಾರಿಗಳನ್ನು ಲಾಜಿಸ್ಟಿಕ್ಸ್ ವಿಭಾಗದಲ್ಲಿ ವ್ಯರ್ಥಗೊಳಿಸುವ ಬದಲು, ಅವರನ್ನು ಕಾರ್ಯಾಚರಿಸಲು ಬಿಟ್ಟರೆ, ಇಂತಹ ಮಾದಕ ದ್ರವ್ಯ ಕಾರ್ಖಾನೆಗಳನ್ನು ಅವು ಕೆಜಿಗಟ್ಟಲೆ ವಿಷ ಉತ್ಪಾದಿಸುವ ಮುನ್ನವೇ ಪತ್ತೆ ಹಚ್ಚಿ, ವಶಪಡಿಸಲಾಗುತ್ತಿತ್ತು.
ಬೆಂಗಳೂರಿಗೆ ತುರ್ತಾಗಿ ಬೇಕಾಗಿರುವುದು ಕೇವಲ ಇನ್ನೊಂದು ದಾಳಿ ಅಥವಾ ವಜಾ ಅಲ್ಲ. ನಮಗೆ ಇಲಾಖೆಯ ಆಮೂಲಾಗ್ರ ಸುಧಾರಣೆ ಆಗಬೇಕು. ಕಟ್ಟುನಿಟ್ಟಿನ ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಜಾರಿಗೆ ತಂದು, ಅದರಿಂದ ನೈಜ ಪರಿಣಾಮ ಕಾಣಿಸಿಕೊಳ್ಳಬೇಕು. ಉತ್ತಮ ಕಣ್ಗಾವಲು ವ್ಯವಸ್ಥೆ, ಸರಿಯಾದ ನಿಯೋಜನೆ ಮಾಡಿ ಉತ್ತಮ ಅಧಿಕಾರಿಗಳು ಸಮಾಜವನ್ನು ಸರಿಪಡಿಸಲು ಅವಕಾಶ ನೀಡುವುದು, ಉತ್ತಮ ವೇತನ, ಮತ್ತು ಪಾರದರ್ಶಕ ಸಾರ್ವಜನಿಕ ದೂರು ವ್ಯವಸ್ಥೆ ರೂಪುಗೊಳ್ಳಬೇಕು. ಭ್ರಷ್ಟ ಅಧಿಕಾರಿಗಳನ್ನು ಕೇವಲ ಅಮಾನತುಗೊಳಿಸಿ, ಕೆಲ ತಿಂಗಳ ಬಳಿಕ ಮರಳಿ ನಿಯೋಜನೆಗೊಳಿಸುವ ಬದಲು, ಸೇವೆಯಿಂದಲೇ ವಜಾಗೊಳಿಸಬೇಕು. ಪೊಲೀಸರ ಚಟುವಟಿಕೆಗಳನ್ನು ಗಮನಿಸಲು ಮತ್ತು ಅಕ್ರಮಗಳನ್ನು ಮೊದಲೇ ಗುರುತಿಸಲು ತಂತ್ರಜ್ಞಾನವನ್ನು ಸರಿಯಾಗಿ ಬಳಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಸರ್ಕಾರವೂ ಸಹ ರಾಜಕೀಯ ಅನುಕೂಲತೆಗಳಿಗಿಂತ ಕಾನೂನು ಮತ್ತು ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಇತ್ತೀಚಿನ ಮಾದಕ ದ್ರವ್ಯ ವಶ ನಾವು ಕಡೆಗಣಿಸಲು ಸಾಧ್ಯವೇ ಇಲ್ಲದ ಎಚ್ಚರಿಕೆಯ ಕರೆಯಾಗಿದೆ. ಒಂದು ವೇಳೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರ ಹೀಗೇ ತಡೆಯಿಲ್ಲದೆ ಮುಂದುವರಿದರೆ, ಬೆಂಗಳೂರು ಪ್ರಮುಖ ಮಾದಕ ದ್ರವ್ಯ ಕೇಂದ್ರವಾಗಲಿದೆ. ಕೆಟ್ಟದಾದ ಆಡಳಿತ ಮತ್ತು ನಿರಂತರ ಲಂಚಗಳು ಬೆಂಗಳೂರಿನ ಸುರಕ್ಷತೆ ಮತ್ತು ಗೌರವವನ್ನು ನಾಶಪಡಿಸುತ್ತಿವೆ. ನಮಗೆ ನಿಜಕ್ಕೂ ಇದಕ್ಕಿಂತ ಉತ್ತಮ ವ್ಯವಸ್ಥೆ ಬೇಕು. ನಮಗೆ ಪ್ರಾಮಾಣಿಕ ಪೊಲೀಸ್ ಇಲಾಖೆ ಮತ್ತು ಹೊಣೆಗಾರಿಕೆಯ ನಾಯಕತ್ವದ ಅಗತ್ಯವಿದೆ. ನಿಜವಾದ ಬದಲಾವಣೆಗೆ ಈಗ ಸಮಯ ಬಂದಿದ್ದು, ನಮ್ಮ ನಗರಕ್ಕೆ ಇನ್ನಷ್ಟು ತೊಂದರೆಯಾಗಿ, ಇನ್ನೂ ಹೆಚ್ಚಿನ ಯುವ ಜನರ ಜೀವನ ಇಲ್ಲಿ ಉತ್ಪಾದನೆಯೇ ಆಗಬಾರದಾಗಿದ್ದ ಮಾದಕ ದ್ರವ್ಯದಿಂದ ನಾಶವಾಗುವ ಮುನ್ನವೇ ಈ ಸಮಸ್ಯೆಯ ನಿವಾರಣೆಯಾಗಬೇಕು.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)


