Atal Bihari Vajpayee: ಭಾರತದ ಮಹಾನಾಯಕ ನೀಡಿದ 10 ಮಹತ್ವದ ಸಂದೇಶಗಳು!
ಮಂಗಳವಾರ 1998 ರಿಂದ 2004ರ ಅವಧಿಯಲ್ಲಿ ಆರು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮಹಾನಾಯಕ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ನಾಲ್ಕನೇ ಪುಣ್ಯತಿಥಿ. ಭಾರತ ರತ್ನ ಗೌರವ ಪಡೆದ ವಾಜಪೇಯಿ 2018ರಲ್ಲಿ ತಮ್ಮ 93ನೇ ವರ್ಷದಲ್ಲಿ ಕೊನೆಯುಸಿರೆಳೆದಿದ್ದರು.
ನವದೆಹಲಿ (ಆ.16): ಆಧುನಿಕ ಭಾರತ ಕಂಡ ಮಹಾ ನಾಯಕ, ಮುತ್ಸದ್ಧಿ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಮಂಗಳವಾರ ನಾಲ್ಕು ವರ್ಷ. ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹಾಗೂ 1998ರಿಂದ 2004ರ ಅವಧಿಯಲ್ಲಿ ಆರು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ 2018ರ ಆಗಸ್ಟ್ 16 ರಂದು ಕೊನೆಯುಸಿರೆಳೆದಿದ್ದರು. ವಾಜಪೇಯಿ ಅವರ ನಾಲ್ಕನೇ ಪುಣ್ಯತಿಥಿಯಂದು ದೆಹಲಿಯ ಸದೈವ ಅಟಲ್ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪನಮನ ಸಲ್ಲಿಸಿ ಗೌರವಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಜೆಪಿ ನಡ್ಡಾ ಕೂಡ ಸದೈವ ಅಟಲ್‌ಗೆ ಆಗಮಿಸಿ ಗೌರವ ಸಲ್ಲಿಸಿದರು. ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಆಗಮಿಸಿದ್ದರು.1990 ರ ದಶಕದ ಉತ್ತರಾರ್ಧದಲ್ಲಿ ಪಕ್ಷವು ಅಧಿಕಾರಕ್ಕೆ ಏರಲು ನಿರ್ಣಾಯಕವಾದ ಬಿಜೆಪಿಯ ಮಹಾನ್ ನಾಯಕ ಸ್ಮರಣಾರ್ಥವಾಗಿ ನಡೆದ ಪ್ರಾರ್ಥನಾ ಸಭೆಯಲ್ಲಿ ಅವರು ಭಾಗವಹಿಸಿದರು. ವಾಜಪೇಯಿ ಅವರ ಸ್ನೇಹಪರ ವ್ಯಕ್ತಿತ್ವ, ಪಕ್ಷಕ್ಕೂ ಮಿಗಿಲಾಗಿ ಹೊಂದಿದ್ದ ಮಿತ್ರರ ಕಾರಣದಿಂದ ಕಾಂಗ್ರೆಸ್ ಹೊರತಾದ ಯಶಸ್ವಿ ಮೈತ್ರಿಕೂಟವನ್ನು ಬಿಜೆಪಿ ನೇತೃತ್ವದಲ್ಲಿ ರಚಿಸಲು ಸಹಾಯ ಮಾಡಿತ್ತು.
ವಾಜಪೇಯಿ ಅವರು ದೇಶದ ಪ್ರಧಾನಿಯಾದ ಸಮಯದಲ್ಲಿ ಭಾರತ ಹಲವಾರು ಮಹತ್ಸಾಧನೆಯನ್ನು ಮಾಡಿತ್ತು.ಭಾರತೀಯ ಜನತಾ ಪಾರ್ಟಿಯ ನಾಯಕ 1996ರಲ್ಲಿ ಕೇವಲ 13 ದಿನ ದೇಶದ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ, 1998 ರಿಂದ 1999ರ ಅವಧಿಯಲ್ಲಿ 13 ತಿಂಗಳು ಪ್ರಧಾನಿ ಆಗಿದ್ದರು. ಅದಾದ ಬಳಿಕ 1999 ರಿಂದ 2004ರ ಅವಧಿಯಲ್ಲಿ ಪೂರ್ಣ ಪ್ರಮಾಣದ ಪ್ರಧಾನಿಯಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದರು. ಕೇವಲ ರಾಜಕೀಯ ನಾಯಕರಾಗಿರದ ವಾಜಪೇಯಿ ಶ್ರೇಷ್ಠ ಕವಿ ಹಾಗೂ ವಾಗ್ಮಿ ಕೂಡ ಆಗಿದ್ದರು. 1924ರ ಡಿಸೆಂಬರ್ 25 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ವಾಜಪೇಯಿ ಜಯಿಸಿದ್ದರು. ಪ್ರತಿ ವರ್ಷ ಈ ದಿನವನ್ನು ಕೇಂದ್ರ ಸರ್ಕಾರ ಗುಡ್ ಗವರ್ನೆನ್ಸ್ ಡೇ ಎಂದು ಆಚರಿಸುತ್ತದೆ.
'ಭಾರತೀಯ ಜನತಾ ಪಾರ್ಟಿ' ನಾಮಕರಣ ಮಾಡಿದ್ದ ಅಟಲ್‌ಜೀ, 2 ರಿಂದ 303 ಸ್ಥಾನ ತಲುಪಿದ BJP!
ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ: ಇಂದು ಬಿಜೆಪಿ ಕೇಂದ್ರದೊಂದಿಗೆ ದೇಶದ 21 ರಾಜ್ಯಗಳಲ್ಲಿ ತನ್ನ ಅಧಿಕಾರವನ್ನು ಅನುಭವಿಸುತ್ತಿದೆ. ಆದರೆ, ಇದನ್ನು ನೋಡಲು ವಾಜಪೇಯಿ ಅವರಿಲ್ಲ. ಖ್ಯಾತ ಲೇಖಕ ಖುಶ್ವಂತ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ರೈಟ್ ಮ್ಯಾನ್ ಇನ್ ರಾಂಗ್ ಪಾರ್ಟಿ ಎಂದು ಹೇಳಿದ್ದರು. ಸಂಸತ್ತಿನಲ್ಲೂ ಇದರ ಪುನರುಚ್ಛಾರವಾಗಿತ್ತು. ಇದಕ್ಕೆ ಅಷ್ಟೇ ಸೂಕ್ಷ್ಮವಾಗಿ ಉತ್ತರ ನೀಡಿದ್ದ ವಾಜಪೇಯಿ, ಖುಶ್ವಂತ್ ಸಿಂಗ್ ಅವರ ಪುಸ್ತಕಗಳ ಅಭಿಮಾನಿ ನಾನು. ವಿಚಾರಧಾರೆಗಳು ಬೇರೆ ಬೇರೆ ಆಗಿರಬಹುದು. ನನ್ನನ್ನು ಹೊಗಳಿದ್ದಕ್ಕೆ ಖುಷಿ ಆಗಿದೆ. ಅದರೆ, ಅವರ ಈ ಮಾತುಗಳಿಗೆ ನನ್ನ ಸಹಮತವಿಲ್ಲ. ಅವರ ಪ್ರಕಾರ ನಾನು ಉತ್ತಮ ವ್ಯಕ್ತಿ ಎಂದಾಗಿದ್ದರೆ, ಕೆಟ್ಟ ಪಕ್ಷದಲ್ಲಿರೋಕೆ ಹೇಗೆ ಸಾಧ್ಯ. ಹಾಗೇನಾದರೂ ನಾನು ಕೆಟ್ಟ ಪಕ್ಷದಲ್ಲಿ ಇದ್ದೇನೆಂದರೆ, ಉತ್ತಮ ವ್ಯಕ್ತಿ ಆಗಿರಲು ಸಾಧ್ಯವಿಲ್ಲ ಎಂದಿದ್ದರು.
ಬೆಂಗ್ಳೂರಲ್ಲಿ ಐಟಿ ಕ್ಷೇತ್ರದ ಹೊಸ ತಿರುವಿಗೆ ವಾಜಪೇಯಿ, ಮೋದಿ ಕೊಡುಗೆ ಅಪಾರ..!
ಅಟಲ್ ಬಿಹಾರಿ ವಾಜಪೇಯಿ ಅವರ 10 ಮಹತ್ವದ ಸಂದೇಶಗಳು
- ನಾನು ಸಮೃದ್ಧ, ಬಲಿಷ್ಠ ಮತ್ತು ಕಾಳಜಿಯುಳ್ಳ ಭಾರತದ ಕನಸು ಕಾಣುತ್ತೇನೆ. ಶ್ರೇಷ್ಠ ರಾಷ್ಟ್ರಗಳ ನಡುವೆ ಗೌರವದ ಸ್ಥಾನವನ್ನು ಭಾರತ ಮರಳಿ ಪಡೆಯಬೇಕು ಎನ್ನುವುದಷ್ಟೇ ನನ್ನ ಆಸೆ.
- ನೀವು ಸ್ನೇಹಿತರನ್ನು ಬದಲಾಯಿಸಬಹುದು, ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ.
- ಬಂದೂಕುಗಳಿಂದಲ್ಲ, ಸಹೋದರತ್ವದಿಂದ ಮಾತ್ರವೇ ಸಮಸ್ಯೆಗಳನ್ನು ಪರಿಹರಿಸಬಹುದು
- ಗೆಲುವು ಮತ್ತು ಸೋಲು ಜೀವನದ ಪ್ರಮುಖ ಭಾಗ. ಅದನ್ನು ಸಮಚಿತ್ತದಿಂದ ನೋಡಬೇಕು
- ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಪಕ್ಷಗಳು ಹುಟ್ಟುಕೊಳ್ತವೆ, ಮುರಿದು ಹೋಗುತ್ತವೆ. ಆದರೆ,ಈ ದೇಶ ಎಂದಿಗೂ ಹಾಗೆ ಇರಬೇಕು
- ನಮ್ಮ ಗುರಿಯು ಅಂತ್ಯವಿಲ್ಲದ ಆಕಾಶದಷ್ಟು ಎತ್ತರವಾಗಿರಬಹುದು, ಆದರೆ ನಮ್ಮ ಮನಸ್ಸಿನಲ್ಲಿ ಮುಂದೆ ನಡೆಯಲು, ಕೈಜೋಡಿಸಿ, ಗೆಲುವು ನಮ್ಮದಾಗಬೇಕೆಂಬ ಸಂಕಲ್ಪವನ್ನು ಹೊಂದಿರಬೇಕು.
- ಸಾಮಾಜಿಕ ನ್ಯಾಯವಿಲ್ಲದೆ ಸ್ವಾತಂತ್ರ್ಯ ಅಪೂರ್ಣ
- ನಾವು ಅನಗತ್ಯವಾಗಿ ಯುದ್ಧಗಳಲ್ಲಿ ನಮ್ಮ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥ ಮಾಡುತ್ತಿದ್ದೇವೆ ... ನಾವು ಯುದ್ಧ ಮಾಡಬೇಕಾದರೆ, ನಿರುದ್ಯೋಗ, ರೋಗ, ಬಡತನ ಮತ್ತು ಹಿಂದುಳಿದಿರುವಿಕೆಯ ಮೇಲೆ ಮಾಡಬೇಕು.
- ಭಾರತ ಜಾತ್ಯತೀತವಲ್ಲದಿದ್ದರೆ, ಭಾರತವು ಭಾರತವೇ ಅಲ್ಲ.
- "ಗರೀಬಿ ಹಠಾವೋ" ಘೋಷಣೆಯನ್ನು ಎತ್ತುವ ಮೂಲಕ ಚುನಾವಣೆಗಳನ್ನು ಗೆಲ್ಲುವುದು ಸುಲಭ ಆದರೆ ಘೋಷಣೆಗಳು ಬಡತನವನ್ನು ತೊಡೆದುಹಾಕುವುದಿಲ್ಲ.