Asianet Suvarna News Asianet Suvarna News

ಬೆಂಗ್ಳೂರಲ್ಲಿ ಐಟಿ ಕ್ಷೇತ್ರದ ಹೊಸ ತಿರುವಿಗೆ ವಾಜಪೇಯಿ, ಮೋದಿ ಕೊಡುಗೆ ಅಪಾರ..!

ಬೆಂಗಳೂರು ಟೆಕ್‌ ಶೃಂಗ-2020: ಅಂದು ಅಟಲ್‌ ಶ್ರೀಕಾರ, ಇಂದು ಮೋದಿ ಮುನ್ನುಡಿ| ಕರ್ನಾಟಕ ಐಟಿ ಹಬ್‌ ಆಗಲು ಅಟಲ್‌ ಕೊಡುಗೆ ದೊಡ್ಡದು| 1998ರಲ್ಲಿ ಮೊದಲ ಐಟಿ ಶೃಂಗ ಉದ್ಘಾಟಿಸಿದ್ದು ವಾಜಪೇಯಿ| ಈಗ 2020ರ ಬೆಂಗಳೂರು ಟೆಕ್‌ ಶೃಂಗಕ್ಕೆ ಚಾಲನೆ ನೀಡಿದ್ದು ಮೋದಿ| 

Atal Bihari Vajpayee Narendra Modi Contributing to the IT Sector in Bengaluru grg
Author
Bengaluru, First Published Nov 20, 2020, 9:36 AM IST

ಬೆಂಗಳೂರು(ನ.20): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಕರ್ನಾಟಕದಲ್ಲಿ ‘ಬೆಂಗಳೂರು ಐಟಿ.ಕಾಂ’ ಸಮ್ಮೇಳನದ ಮೂಲಕ ಶ್ರೀಕಾರ ಹಾಕಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಬೆಂಗಳೂರು ಟೆಕ್‌ ಶೃಂಗ-2020’ ಮೂಲಕ ಹೊಸ ತಿರುವು ನೀಡಲು ಮುನ್ನುಡಿ ಬರೆದಿದ್ದಾರೆ.

ಕರ್ನಾಟಕ ಇಂದು ದೇಶದ ಪ್ರಮುಖ ‘ಐಟಿ ಹಬ್‌’ ಆಗಿ ಬೆಳೆದಿರುವುದಕ್ಕೆ ದಿವಂಗತ ಮಾಜಿ ಪ್ರಧಾನಿ ವಾಜಪೇಯಿ ಅವರು ಹಾಕಿದ ಭದ್ರ ಬುನಾದಿ ಹಾಗೂ ನೀಡಿದ ಕೊಡುಗೆ ಬಹಳ ದೊಡ್ಡದು. 1998ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ದೇಶದ ಮೊದಲ ಐಟಿ ಸಮ್ಮೇಳನ ಉದ್ಘಾಟಿಸುವ ಮೂಲಕ ರಾಜ್ಯ ಹಾಗೂ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ವಾಜಪೇಯಿ ಅವರು ಶ್ರೀಕಾರ ಹಾಕಿದವರು.

‘ಬೆಂಗಳೂರು ಐಟಿ.ಕಾಂ’ ಹೆಸರಿನ ಸಮ್ಮೇಳನ ಉದ್ಘಾಟಿಸಿ ವಾಜಪೇಯಿ ಅವರು ಹಾಕಿದ ಶ್ರೀಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವನ್ನು ಇಂದು ಸ್ವಾವಲಂಬಿ ರಾಷ್ಟ್ರವನ್ನಾಗಿಸುವ ಜೊತೆಗೆ ದೇಶದ ಜಿಡಿಪಿಯಲ್ಲಿ ಬಹುದೊಡ್ಡ ಪಾಲು ನೀಡುತ್ತಿದೆ. ಕರ್ನಾಟಕ ಮಾತ್ರವಲ್ಲದೆ ದೇಶದ ಅನೇಕ ರಾಜ್ಯಗಳಿಗೆ ವರ್ಷಕ್ಕೆ ಚಾಚುತ್ತಾ ಹೆಮ್ಮರವಾಗಿ ಬೆಳೆದಿರುವ ಐಟಿ ಕ್ಷೇತ್ರಕ್ಕೆ ಹೊಸ ತಿರುವು ನೀಡಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ 23ನೇ ಬೆಂಗಳೂರು ಟೆಕ್‌ ಸಮ್ಮೇಳನ-2020ರ ಮೂಲಕ ಭಾರತದ ಭವಿಷ್ಯವನ್ನು ಅನಾವರಣಗೊಳಿಸಿದ್ದಾರೆ.

ಸಿಲಿಕಾನ್‌ ಸಿಟಿಗೆ ಬರಲಿದೆ ಆ್ಯಪಲ್: ಚೀನಾ ಬದಲು ಬೆಂಗಳೂರಲ್ಲೇ ಐಫೋನ್‌ ಉತ್ಪಾದನೆ

ವಾಜಪೇಯಿ ಅವರ ಬಳಿಕ ಬೆಂಗಳೂರಿನ ಟೆಕ್‌ ಸಮ್ಮೇಳನ ಉದ್ಘಾಟಿಸಿದ ಎರಡನೇ ಪ್ರಧಾನಿ ನರೇಂದ್ರ ಮೋದಿ. ಭಾರತದಲ್ಲಿ ವಿನ್ಯಾಸಗೊಳಿಸಿರುವ ಮಾಹಿತಿ ತಂತ್ರಜ್ಞಾನಗಳು ಕೇವಲ ನಮ್ಮ ದೇಶಕ್ಕೆ ಸೀಮಿತವಾಗದೆ ಇಡೀ ವಿಶ್ವಕ್ಕೆ ಹರಡುವ ನಿಟ್ಟಿನಲ್ಲಿ ದಾಪುಗಾಲಿಡಬೇಕಾಗಿದೆ. ಇದಕ್ಕೆ ಭಾರತಕ್ಕೆ ಈಗ ಸಕಾಲವಾಗಿದೆ. ಕೇವಲ ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ ಜೈವಿಕ ವಿಜ್ಞಾನ, ಎಂಜಿನಿಯರಿಂಗ್‌ ಮುಂತಾದ ಕ್ಷೇತ್ರಗಳಲ್ಲಿ ನಾವೀನ್ಯತೆ ತರುವ ಅವಶ್ಯಕತೆ ಇದೆ. ಭಾರತದಲ್ಲಿ ಈಗ ಕೈಗಾರಿಕೆ ಯುಗದ ಸಾಧನೆಗಳು ಮುಗಿದಿವೆ. ಮಾಹಿತಿ ಯುಗದ ಮಧ್ಯದಲ್ಲಿ ಇದ್ದೇವೆ. ಈ ಕ್ಷೇತ್ರದಲ್ಲಿ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಬೇಕಿದೆ ಎಂದು ಸಮ್ಮೇಳನದಲ್ಲಿ ಮೋದಿ ಕರೆ ನೀಡಿದ್ದಾರೆ.

ಐಟಿ ಬಿಟಿ ಕ್ಷೇತ್ರದಲ್ಲಿ ಭಾರತ ಹಲವು ಆಯಾಮಗಳಲ್ಲಿ ಬೆಳೆಯಲು ಸಾಕಷ್ಟು ಅವಕಾಶವಿದೆ. ಈ ಕ್ಷೇತ್ರದ ಮಾರುಕಟ್ಟೆಯಲ್ಲಿ ಹಾಲಿ ಇರುವ ಸಮೀಕರಣಗಳನ್ನು ಯಾರು ಯಾವಾಗ ಬೇಕಾದರೂ ಮುರಿಯುವ ಉತ್ಪನ್ನಗಳನ್ನು ತಯಾರಿಸಬಹುದು. ಆ ನಿಟ್ಟಿನಲ್ಲಿ ಭಾರತವು ಮಾಹಿತಿ ಯುಗದಲ್ಲಿ ಇನ್ನಷ್ಟು ಮುಂದೆ ಸಾಗಲು ಸಾಧ್ಯವಾಗುವಂತಹ ವಿಶಿಷ್ಟಸ್ಥಾನದಲ್ಲಿದೆ. ಉತ್ತಮ ಬುದ್ಧಿಮತ್ತೆ ಮತ್ತು ಬೃಹತ್‌ ಮಾರುಕಟ್ಟೆಯನ್ನು ಹೊಂದಿದೆ. ನಮ್ಮ ಸ್ಥಳೀಯ ತಂತ್ರಜ್ಞಾನಗಳು ಜಾಗತಿಕ ಮಟ್ಟಕ್ಕೆ ಏರುವ ಸಾಮರ್ಥ್ಯವನ್ನು ಹೊಂದಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸುವ ಮೂಲಕ ದೇಶಿಯವಾಗಿ ವಿನ್ಯಾಸಗೊಳಿಸಿದ ತಂತ್ರಜ್ಞಾನಗಳನ್ನು ವಿಶ್ವಕ್ಕೆ ತೆಗೆದುಕೊಂಡು ಹೋಗುವ ಭವಿಷ್ಯ ನುಡಿದಿದ್ದಾರೆ.

ವಾಜಪೇಯಿ ಅವರು 1998 ನ.1ರಿಂದು ಉದ್ಘಾಟಿಸಿದ್ದ ಬೆಂಗಳೂರಿನ ಮೊದಲ ಐಟಿ ಸಮ್ಮೇಳನ ಉದ್ಘಾಟಿಸಿ ಖಾಸಗಿ ಅಂತರ್ಜಾಲ ಸೇವಾ ಪೂರೈಕೆದಾರರಿಗೆ (ಐಎಸ್‌ಪಿ)ಕೂಡಲೇ ಪರವಾನಗಿ ನೀಡುವುದು. ಮೊದಲ ಐದು ವರ್ಷ ಶೂನ್ಯ ಬೆಲೆಗೆ ಪರವಾನಗಿ ನೀಡುವುದಾಗಿ ನಂತರ 1 ರು. ಶುಲ್ಕ ಪಾವತಿಸಬೇಕಾಗುತ್ತದೆ. ಇದರಿಂದ ವಿವಿಧ ಏಜೆನ್ಸಿಗಳ ಯೋಜಿತ ಅಂತರ್ಜಾಲದ ಮೂಲಕ ದೇಶದ ಶಿಕ್ಷಣ ಜಾಲವನ್ನು ಸ್ಥಾಪಿಸಲು ಸಹಕಾರಿಯಾಗಲಿದೆ ಎಂದು ಘೋಷಿಸಿದ್ದರು. ಆ ಘೋಷಣೆಯಂತೆ ಐಎಸ್‌ಪಿ ನೀತಿ ಜಾರಿಗೊಳಿಸಿ ಪರವಾನಗಿ ವಿತರಿಸಿದ್ದರಿಂದ ಐಟಿ ಕ್ಷೇತ್ರಕ್ಕೆ ಮೆರುಗು ಪಡೆದು ಕೆಲವೇ ವರ್ಷಗಳಲ್ಲಿ ಕೈಗೆಟಕುವ ಬೆಲೆಯಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಇಂಟರ್ನೆಟ್‌ ಸೌಲಭ್ಯ ದೊರೆಯುವಂತಾಯಿತು. ನಂತರದ ವರ್ಷದಲ್ಲಿ ವಿದ್ಯಾವಾಹಿನಿ ಎಂಬ ಶಿಕ್ಷಣ ನೆಟ್‌ವರ್ಕ್ ಜಾಲ ಸ್ಥಾಪಿಸಿ ತಂತ್ರಜ್ಞಾನದ ಮೂಲಕ ಶೈಕ್ಷಣಿಕ ವ್ಯವಸ್ಥೆ ಅಭಿವೃದ್ಧಿಗೆ ಕಾರಣರಾದರು. ದೂರ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ವ್ಯವಹಾರ ಸಂವಹನಕ್ಕೆ ಉತ್ತೇಜನವೂ ದೊರೆಯಿತು. ಇಂದಿನ ಕೊರೋನಾ ಸಂಕಷ್ಟಕಾಲದಲ್ಲೂ ಆನ್‌ಲೈನ್‌ ಶಿಕ್ಷಣದ ಮೂಲಕ ದೇಶದಲ್ಲಿ ಸರ್ಕಾರಗಳು ವಿದ್ಯಾರ್ಥಿಗಳ ನಿರಂತರ ಕಲಿಕೆಯಲ್ಲಿಡಲು ವಾಜಪೇಯಿ ಅವರು ಹಾಕಿದ ಬುನಾದಿಯೇ ಕಾರಣ ಎಂದರೆ ತಪ್ಪಾಗಲಾರದು.

ಬೆಂಗಳೂರಿನಿಂದ ಹೊರಗೂ ಐಟಿ ವಿಸ್ತರಣೆ: ಸಿಎಂ ಯಡಿಯೂರಪ್ಪ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಪಗ್ರಹ ಕೇಂದ್ರದ(ಇಸ್ರೋ) ವಿಜ್ಞಾನಿಗಳೊಂದಿಗೆ ಸಂವಹನ ನಡೆಸಿದ್ದ ವಾಜಪೇಯಿ ಅವರು ಬಾಹ್ಯಾಕಾಶ ಆಧಾರಿತ ಸಂವಹನಕ್ಕೆ ಭಾರತ ಇನ್ನು ವಿದೇಶಗಳನ್ನು ಅವಲಂಭಿಸಲು ಸಾಧ್ಯವಿಲ್ಲ. ಮಾಹಿತಿ ತಂತ್ರಜ್ಞಾನ, ದೂರ ಶಿಕ್ಷಣ ಮತ್ತು ವ್ಯವಹಾರಿಕ ಸಂವಹನ ಕ್ಷೇತ್ರಕ್ಕೆ ಅಗತ್ಯ ತಂತ್ರಜ್ಞಾನಗಳ ಅವಶ್ಯತೆ ಪೂರೈಕೆಯಲ್ಲಿ ಸ್ವಾವಲಂಬಿಗಳಾಗುವಂತೆ ತಿಳಿಸಿದ್ದರು. ಆ ನಿಟ್ಟಿನಲ್ಲಿ ಈಶಾನ್ಯ ಪ್ರದೇಶದಲ್ಲಿ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲು ಅನುಮತಿ ನೀಡಿದ್ದರು. ಅದರಂತೆ ದೇಶದ ಮೊದಲ ಸಾಗರ ಉಪಗ್ರಹ ಐಆರ್‌ಎಸ್‌-ಪಿ 4 ಕೆಲವೇ ವರ್ಷಗಳಲ್ಲಿ ಉಡಾವಣೆಗೆ ಸಿದ್ಧವಾಯಿತು ಎಂದು ರಾಜಕೀಯ ತಜ್ಞರು ಹೇಳುತ್ತಾರೆ.

1997ನೇ ಇಸವಿಯಲ್ಲಿ ಐಟಿ ನೀತಿಯನ್ನು ಘೋಷಿಸಿಕೊಂಡ ದೇಶದ ಮೊಟ್ಟಮೊದಲ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದಾಗಿತ್ತು. ಮರುವರ್ಷವೇ ವಾಜಪೇಯಿ ಅವರು ಐಟಿ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕಾರ್ಯನೀತಿಯು ರಾಜ್ಯದಲ್ಲಿನ ಮಾಹಿತಿ ತಂತ್ರಜ್ಞಾನ ಕೈಗಾರಿಕೋದ್ಯಮ ಬೆಳವಣಿಗೆಯ ವೇಗ ವರ್ಧಿಸಿತು. ರಾಜ್ಯದಲ್ಲಿ ಐಟಿ ಕ್ಷೇತ್ರವು ಬೃಹತ್‌ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಟಿಸುವ ಉದ್ಯಮದಲ್ಲಿ ಒಂದಾಗಿ ಹೊರಹೊಮ್ಮಿದೆ. ಇಂದು ಕರ್ನಾಟಕವು ಭಾರತದ ಐಟಿ ಹಬ್‌ ಆಗಿದ್ದು, ರಾಜ್ಯದ ರಾಜ್ಯ ಬೆಂಗಳೂರು ವಿಶ್ವದ ನಾಲ್ಕನೇ ಅತಿ ಬೃಹತ್‌ ತಂತ್ರಜ್ಞಾನ ಕ್ಲಸ್ಟರ್‌ ಆಗಿರುತ್ತದೆ. 2018-19ನೇ ಸಾಲಿನಲ್ಲಿ ಒಟ್ಟು 77.80 ಬಿಲಿಯನ್‌ ಡಾಲರ್‌ನಷ್ಟು (7,780 ಕೋಟಿ) ವಿದ್ಯುನ್ಮಾನ ಮತ್ತು ಕಂಪ್ಯೂಟರ್‌ ತಂತ್ರಾಂಶ ರಫ್ತುಗಳೊಂದಿಗೆ ರಾಜ್ಯವು ಭಾರತದ ಅತ್ಯಂತ ದೊಡ್ಡ ತಂತ್ರಾಂಶ ರಫ್ತುದಾರವಾಗಿದೆ. ಸುಮಾರು ಶೇ.80ರಷ್ಟುಫಾರ್ಚೂನ್‌ 500 ಕಂಪನಿಗಳ ಜಾಗತಿಕ ನಾವೀನ್ಯತಾ ಕೇಂದ್ರಗಳನ್ನು ಹೊಂದಿರುವ ಬೆಂಗಳೂರನ್ನು ಪ್ರತಿಭೆಗಳಿಗೆ ಆಕರ್ಷಕವಾದ ನೆಚ್ಚಿನ ತಾಣವಾಗಿ ಮುಂದುವರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಐಟಿ ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ‘ಬೆಂಗಳೂರು ಟೆಕ್‌ 2020 ಶೃಂಗ’ದೊಂದಿಗೆ ಪಣತೊಟ್ಟಿದ್ದಾರೆ. ಈ ಮೂಲಕ ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್‌ ಡಿಜಿಟಲ್‌ ಆರ್ಥಿಕತೆಯ ಗುರಿ ಸಾಧಿಸಲಾಗುವುದು ಎಂದು ಸಮ್ಮೇಳನದಲ್ಲಿ ಘೋಷಿಸಿದ್ದಾರೆ.

ಐಟಿ ಡಾಟ್‌.ಕಾಂನಿಂದ ಟೆಕ್‌ ಸಮಿಟ್‌ವರೆಗೆ..!

ಕರ್ನಾಟಕದ ರಾಜಧಾನಿ ಬೆಂಗಳೂರು ಇಡೀ ದೇಶದಲ್ಲೇ ಐಟಿ ಮತ್ತು ಬಯೋಟೆಕ್‌ ಸಮ್ಮೇಳನ ನಡೆಸಿದ ದೇಶದ ಮೊದಲ ನಗರ. 1998 ರಲ್ಲಿ ಬೆಂಗಳೂರಿನಲ್ಲಿ ಮೊದಲ ಐಟಿ ಸಮ್ಮೇಳನ ‘ಬೆಂಗಳೂರು ಐಟಿ.ಕಾಂ’ ಹೆಸರಲ್ಲಿ ನಡೆಯಿತು. ಬಳಿಕ 2001ರಲ್ಲಿ ‘ಇಂಡಿಯಾ ಬಯೋ’ ಹೆಸರಲ್ಲಿ ಬಯೋಟೆಕ್‌ ಸಮ್ಮೇಳನ ನಡೆಸಲಾಯಿತು. ಆ ಮೂಲಕ ಜಾಗತಿಕ ಐಟಿ ಮತ್ತು ಬಯೋಟೆಕ್‌ ಸಮುದಾಯಕ್ಕೆ ಭಾರತದೊಂದಿಗೆ ಸಂಪರ್ಕ ಸಾಧಿಸಲು ದಾರಿ ಆರಂಭವಾಯಿತು.

ಕರ್ನಾಟಕ ಸರ್ಕಾರದ ಐಟಿ ಬಿಟಿ ಇಲಾಖೆಯಿಂದ ಪ್ರತೀ ವರ್ಷ ನಡೆಸಿಕೊಂಡು ಬರಲಾಗುತ್ತಿರುವ ಈ ಜಾಗತಿಕ ಐಟಿ ಮೇಳ 2004ರವರೆಗೂ ಬೆಂಗಳೂರು ಐಟಿ.ಕಾಂ ಹೆಸರಲ್ಲಿ ನಡೆಯುತ್ತಿತ್ತು. ಬಳಿಕ 2005 ಆವೃತ್ತಿಯಲ್ಲಿ ಇದನ್ನು ಬೆಂಗಳೂರು ಐಟಿ.ಇನ್‌ ಎಂದು ಬದಲಿಸಲಾಯಿತು. ಆ ನಂತರದ ಅದು 2017ರಲ್ಲಿ ಬೆಂಗಳೂರು ಟೆಕ್‌ ಶೃಂಗಸಭೆ ಎಂಬ ಘೋಷಿಸಿ ಹೊಸ ಮಾರ್ಪಾಟು ನೀಡಲಾಗಿದೆ. ಕಳೆದ 22 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿರುವ ಈ ಐಟಿ ಸಮ್ಮೇಳನ ವಿಶ್ವದ ಮೂಲೆ ಮೂಲೆಯ ಐಟಿ ಮತ್ತು ಬಯೋಟೆಕ್‌ ಕ್ಷೇತ್ರದ ಉನ್ನತ ಸಾಧಕರು, ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ, ಹೊಸ ಸಂಶೋಧನೆಗಳು, ಆವಿಷ್ಕಾರಗಳ ಪ್ರದರ್ಶನ, ಪರಸ್ಪರ ಒಪ್ಪಂದಗಳಿಗೆ ಅವಕಾಶ ನೀಡುವ ಜಾಗತಿಕ ಕಾರ್ಯಕ್ರಮವಾಗಿ ಬೆಳೆದಿದೆ.
 

Follow Us:
Download App:
  • android
  • ios