ಹಿಂದಿನ ಸರ್ಕಾರಗಳಿಂದ ಧಾರ್ಮಿಕ ಕ್ಷೇತ್ರ ನಿರ್ಲಕ್ಷ್ಯ: ಪ್ರಧಾನಿ ಮೋದಿ ವಾಗ್ದಾಳಿ
ನಮ್ಮ ಸರ್ಕಾರದಿಂದ ನಿರ್ಲಕ್ಷಿತ ಕ್ಷೇತ್ರಗಳ ಅಭಿವೃದ್ಧಿ, ದೇಶದಲ್ಲೀಗ ಧರ್ಮಕ್ಷೇತ್ರ ಗತವೈಭವ ಪುನಾರಂಭ: ನರೇಂದ್ರ ಮೋದಿ
ಡೆಹ್ರಾಡೂನ್(ಅ.22): ದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದವು. ಆದರೆ ನಮ್ಮ ಸರ್ಕಾರವು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಕ್ಷೇತ್ರಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಇದರಿಂದ ಶ್ರೀಕ್ಷೇತ್ರಗಳ ಗತವೈಭವ ಮರಳತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ತಮ್ಮ ಮಾತಿಗೆ ಅವರು ಅಯೋಧ್ಯೆ, ಕಾಶಿ ವಿಶ್ವನಾಥ ಮಂದಿರ ಹಾಗೂ ಉಜ್ಜಯಿನಿ ದೇವಸ್ಥಾನದ ಅಭಿವೃದ್ಧಿ ಕಾರ‍್ಯಗಳ ಉದಾಹರಣೆ ನೀಡಿದರು.
ಚೀನಾ ಗಡಿಗೆ ಹೊಂದಿಕೊಂಡಿರುವ ಉತ್ತರಾಖಂಡದ ಮಾನಾದಲ್ಲಿ ಶುಕ್ರವಾರ ಕೇದಾರನಾಥ ಹಾಗೂ ಸಿಖ್ ಧರ್ಮಕ್ಷೇತ್ರ ಹೇಮಕುಂಡ ಸಾಹಿಬ್ ರೋಪ್‌ವೇಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಕೆಲವರಿಗೆ (ಹಿಂದಿನ ಸರ್ಕಾರ ನಡೆಸಿದವರಿಗೆ) ಗುಲಾಮಗಿರಿ ಮಾನಸಿಕತೆ ಇದೆ. ಅದೆಷ್ಟರ ಮಟ್ಟಿಗೆ ಗುಲಾಮಗಿರಿ ಎಂದರೆ ನಮ್ಮ ಅಭಿವೃದ್ಧಿ ಚಟುವಟಿಕೆಗಳನ್ನೂ ಅವರು ‘ಅಪರಾಧದ ಥರ’ ನೋಡುತ್ತಿದ್ದಾರೆ. ಇಂಥ ಮಾನಸಿಕತೆಯೇ ಧರ್ಮಕ್ಷೇತ್ರಗಳ ಅಭಿವೃದ್ಧಿಗೆ ತಡೆ ಒಡ್ಡಿತ್ತು. ಕೋಟ್ಯಂತರ ಜನರ ಭಾವನೆಗಳನ್ನು ಹಿಂದಿನ ಸರ್ಕಾರಗಳು ನಿರ್ಲಕ್ಷಿಸಿದ್ದವು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
Fact Check: ಪ್ರಧಾನಿ ಮೋದಿ ಕೈ ತೊಳೆಯುತ್ತಿರುವ ಫೋಟೋ ಶೌಚಾಲಯದ್ದಲ್ಲ, ಗುರುದ್ವಾರ ಪ್ರವೇಶದ್ವಾರದ್ದು
‘ಆದರೆ ನಮ್ಮ ಸಂಸ್ಕೃತಿ ಬಗ್ಗೆ ಇರುವ ಹೆಮ್ಮೆ ಹಾಗೂ ಅಭಿವೃದ್ಧಿ ಕೆಲಸಕ್ಕೆ ಇರುವ ಬದ್ಧತೆ- ಇವು 21ನೇ ಶತಮಾನದ ಭಾರತದ ನಿರ್ಮಾಣಕ್ಕೆ ಬುನಾದಿ ಇದ್ದಂತೆ. ನಮ್ಮ ಪುರಾತನ ದೇಗುಲಗಳು ಕೇವಲ ಕಟ್ಟಡಗಳಲ್ಲ. ಅವು ಸಾವಿರಾರು ವರ್ಷ ಹಳೆಯದಾದ ನಮ್ಮ ಸಂಸ್ಕೃತಿ, ಪರಂಪರೆಯ ಸಂಕೇತಗಳು. ಅವು ನಮ್ಮ ಉಸಿರಿದ್ದಂತೆ’ ಎಂದು ಬಣ್ಣಿಸಿದರು.
‘ನಮ್ಮ ಸರ್ಕಾರ ಬಂದ ನಂತರ ಕೇದಾರನಾಥ ದೇವಾಲಯದ ಅಭಿವೃದ್ಧಿ ಆಗಿದೆ, ಈ ಮುನ್ನ ಕೇದಾರಕ್ಕೆ ದರ್ಶನದ ಸೀಸನ್‌ನಲ್ಲಿ 5 ಲಕ್ಷ ಜನರು ಬರುತ್ತಿದ್ದರು. ಆದರೆ ಈಗ ಆ ದಾಖಲೆ ಮುರಿದಿದೆ. ಈ ವರ್ಷ 45 ಲಕ್ಷ ಜನ ಭೇಟಿ ನೀಡಿದ್ದಾರೆ’ ಎಂದು ಉದಾಹರಿಸಿದರು. ‘ನಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳು ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಸುತ್ತಿವೆ. ಆರ್ಥಿಕ ಬೆಳವಣಿಗೆ ಆಗುತ್ತಿದೆ’ ಎಂದು ಹರ್ಷಿಸಿದ ಮೋದಿ, ‘ಪ್ರವಾಸಿಗರು ತಮ್ಮ ವೆಚ್ಚದ ಶೇ.5ರಷ್ಟನ್ನು ಪ್ರವಾಸಿ ತಾಣಗಳಲ್ಲಿನ ಸ್ಥಳೀಯ ಉತ್ಪನ್ನ ಖರೀದಿಗೆ ಬಳಸಬೇಕು. ಇದರುಂದ ಸ್ಥಳೀಯ ಆರ್ಥಿಕತೆಗೆ ಬಲ ಬರಲಿದೆ’ ಎಂದು ಕರೆ ನೀಡಿದರು.
ಹೇಮಕುಂಡ ಸಾಹಿಬ್ ರೋಪ್‌ವೇ ದೇಶದ ಸಿಖ್ಖರಿಗಷ್ಟೇ ಅಲ್ಲ, ವಿದೇಶದಲ್ಲಿರುವ ಸಿಖ್ಖರಿಗೂ ಸಂಭ್ರಮದ ವಿಚಾರ ಎಂದ ಮೋದಿ, ‘ದೇಶದ ಕೊನೆಯ ಗ್ರಾಮ ‘ಮಾನಾ’ ಆಗಿರಬಹುದು. ಆದರೆ ನನ್ನ ಪ್ರಕಾರ ಅದು ಅಭಿವೃದ್ಧಿ ಹಾದಿಯಲ್ಲಿರುವ ಮೊದಲ ಗ್ರಾಮ. ದುರ್ಗಮ ಮಾನಾಗೆ ಇಂದು ನಾವು ಸಂಪರ್ಕ ಕಲ್ಪಿಸಿದ್ದೇವೆ. ಈ ಕೆಲಸದಿಂದ ಜನರಿಗೆ ಬಿಜೆಪಿ ಹೆಸರು ಸದಾ ಹೃದಯದಲ್ಲಿ ಉಳಿಯುತ್ತದೆ’ ಎಂದು ನುಡಿದರು.
ಚೀನಾ ಗಡಿಯಲ್ಲಿರುವ ಭಾರತದ ಕೊನೆಯ ಗ್ರಾಮಕ್ಕೆ ಮೋದಿ ಭೇಟಿ, ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ!
ಕೇದಾರನಾಥ ರೋಪ್‌ವೇಗೆ ಶಂಕು
ಡೆಹ್ರಾಡೂನ್: ದೇಶದ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕೇದಾರನಾಥವನ್ನು ಗೌರಿಕುಂಡದ ಜತೆ ಸಂಪರ್ಕಿಸುವ 9.7 ಕಿ.ಮೀ. ಉದ್ದದ ಹಾಗೂ ಸಿಖ್ ಸಮುದಾಯದ ಯಾತ್ರಾ ಸ್ಥಳವಾಗಿರುವ ಹೇಮಕುಂಡ ಸಾಹಿಬ್ ಅನ್ನು ಗೋವಿಂದ ಘಾಟ್ ಜತೆ ಬೆಸೆಯುವ 12 ಕಿ.ಮೀ. ಅಂತರದ, ದೇಶದಲ್ಲೇ ಅತಿ ಉದ್ದದಾದ 2 ರೋಪ್‌ವೇ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
10 ಲಕ್ಷ ನೌಕರಿ ನೇಮಕಕ್ಕಿಂದು ಚಾಲನೆ
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ 10 ಲಕ್ಷ ನೌಕರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ 75 ಸಾವಿರ ನೌಕರರಿಗೆ ನೇಮಕಾತಿ ಪತ್ರವನ್ನು ವಿತರಣೆ ಮಾಡಲಿದ್ದಾರೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ಸಡ್ಡು ಹೊಡೆಯಲು ನೇಮಕಾತಿ ಆಂದೋಲನ ಆರಂಭಿಸಲು ಮುಂದಾಗಿದ್ದಾರೆ. ಕೇದಾರನಾಥ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲಪ್ರದೇಶದ ಸಾಂಪ್ರದಾಯಿಕ ಉಡುಗೆ ‘ಚೋಲಾ ಡೋರಾ’ ಧರಿಸಿ ಮಿಂಚಿಸಿದರು. ಹಿಮಾಚಲಪ್ರದೇಶಕ್ಕೆ ಈ ಹಿಂದೆ ಭೇಟಿ ನೀಡಿದ್ದಾಗ ಮಹಿಳೆಯೊಬ್ಬರು ತಾವು ನೇಯ್ದ ಈ ಉಡುಪನ್ನು ಮೋದಿ ಅವರಿಗೆ ಈ ಉಡುಗೊರೆಯಾಗಿ ನೀಡಿದ್ದರು.